Advertisement

ಚೆಕ್‌ಪೋಸ್ಟ್‌ನಲ್ಲಿ ತುಳುನಾಡು ವೈಭವ

11:56 PM May 30, 2019 | mahesh |

ಕನ್ನಡದಲ್ಲಿ ತುಳುನಾಡ ಸಂಸ್ಕೃತಿ ಸಾರುವ ಅನೇಕ ಚಿತ್ರಗಳು ಬಂದಿವೆ. ಆದರೆ, ಸಂಪೂರ್ಣ ತುಳು ಭಾಷೆಯ ಹಾಡು ಮತ್ತು ಆ ಭಾಗದ ವಿಶೇಷವಾಗಿರುವ ಭೂತಾರಾಧನೆ ಆಚರಣೆಯ ದೃಶ್ಯಗಳನ್ನು ಸೆರೆಹಿಡಿದು ತೋರಿಸುವ ಪ್ರಯತ್ನ ಅಪರೂಪವಾಗಿತ್ತು. ಈಗ ಕನ್ನಡದ ಚಿತ್ರವೊಂದರಲ್ಲಿ ಪರಿಪೂರ್ಣವಾಗಿ ತುಳುನಾಡಿನ ಸಂಸ್ಕೃತಿಯನ್ನು ತೋರಿಸುವ ಪ್ರಯತ್ನವಾಗಿದೆ. ಹೌದು, ‘ಕಮರೊಟ್ಟು ಚೆಕ್‌ಪೊಸ್ಟ್‌’ ಚಿತ್ರದಲ್ಲಿ ತುಳು ಹಾಡು ಇದೆ. ಆ ಭಾಗದ ಭೂತಾರಾಧನೆಯ ವಿಶೇಷ ಅಂಶಗಳೂ ಇವೆ. ಅವೆಲ್ಲವೂ ಕಥೆಗೆ ಪೂರಕವಾಗಿವೆ ಎಂಬುದು ವಿಶೇಷ.

Advertisement

ಇದು ಸಂಪೂರ್ಣ ಹೊಸಬರ ಚಿತ್ರ. ‘ಕಮರೊಟ್ಟು ಚೆಕ್‌ಪೋಸ್ಟ್‌’ ಹೆಸರಲ್ಲೇ ನಿರೀಕ್ಷೆ ಹುಟ್ಟಿಸಿತ್ತು. ಆರಂಭದಲ್ಲಿ ಬಿಡುಗಡೆಯಾದ ಟೀಸರ್‌ ಕೂಡ ಕುತೂಹಲ ಮೂಡಿಸಿತ್ತು. ಈ ವಾರ ‘ಕಮರೊಟ್ಟು ಚೆಕ್‌ಪೋಸ್ಟ್‌’ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಹಲವು ವಿಶೇಷತೆಗಳು ತುಂಬಿವೆ. ಆ ಬಗ್ಗೆ ಹೇಳುವುದಾದರೆ, ಇದು ಭಾರತದ ಪ್ಯಾರನಾರ್ಮಲ್ ಚಿತ್ರ. ಅದು ಹೊರತುಪಡಿಸಿದರೆ, ಭಾರತದ ಪ್ರಥಮ ಮಹಿಳಾ ಪ್ಯಾರನಾರ್ಮಲ್ ಸಂಶೋಧಕಿ ನಿಶಾಶರ್ಮ ಅವರು ತೆರೆಯ ಮೇಲೆ ಕಾಣಿಸಿಕೊಂಡಿರುವುದು ಮತ್ತೂಂದು ವಿಶೇಷ. ಇದರೊಂದಿಗೆ ಇದೇ ಮೊದಲ ಸಲ ಕನ್ನಡದ ಈ ಚಿತ್ರದಲ್ಲಿ ತುಳುನಾಡಿನ ಆಚರಣೆ ಮತ್ತು ತುಳು ಭಾಷೆಯ ಹಾಡೊಂದನ್ನು ಬಳಸಿಕೊಳ್ಳಲಾಗಿದೆ. ತುಳು ಭಾಷೆಯ ಹಾಡನ್ನು ನಟ ನವೀನ್‌ಕೃಷ್ಣ ಹಾಡಿದ್ದಾರೆ. ಭೂತಾರಾಧನೆ ಆಚರಣೆ ವೇಳೆ ಅಲ್ಲಿ ಸೇರಿದ್ದ ಯಾರೊಬ್ಬರಿಗೂ ಅಲ್ಲಿ ಚಿತ್ರೀಕರಣ ನಡೆಯುತ್ತದೆ ಎಂಬ ವಿಷಯ ಗೊತ್ತಾಗದಂತೆ ಎಲ್ಲವನ್ನೂ ನೈಜವಾಗಿಯೇ ಸೆರೆ ಹಿಡಿದು ಚಿತ್ರೀಕರಿಸಲಾಗಿದೆ. ಅದು ಎಷ್ಟರಮಟ್ಟಿಗೆ ಮೂಡಿಬಂದಿದೆ ಎಂಬುದಕ್ಕೆ ಇಂದು ತೆರೆ ಕಂಡಿರುವ ಚಿತ್ರದಲ್ಲಿ ನೋಡಬೇಕು. ತುಳು ಭಾಗದ ಅಂಶಗಳು ಇಲ್ಲಿರುವುದರಿಂದ ಮಂಗಳೂರು, ಉಡುಪಿ ಸೇರಿದಂತೆ ದಕ್ಷಿಣ ಕನ್ನಡ ಭಾಗದ ಸುಮಾರು ಏಳೆಂಟು ಚಿತ್ರಮಂದಿರಗಳಲ್ಲೂ ಈ ಸಿನಿಮಾ ಬಿಡುಗಡೆಯಾಗುತ್ತಿದೆ.

ಅಂದಹಾಗೆ, ಎ.ಪರಮೇಶ್‌ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಅವರು ಈ ಹಿಂದೆ ‘ಮಾಮು ಟೀ ಅಂಗಡಿ’ ಚಿತ್ರ ನಿರ್ದೇಶಿಸಿದ್ದರು. ಇದು ಅವರ ಎರಡನೇ ಸಿನಿಮಾ. ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ. ಇಲ್ಲಿ ಹಾರರ್‌ ಅಂಶಗಳೂ ಇವೆ. ಆದರೆ, ಅವೆಲ್ಲಾ ಕಥೆಗೆ ಹೇಗೆ ಲಿಂಕ್‌ ಆಗಿವೆ ಎಂಬುದೇ ಸಿನಿಮಾದ ಹೈಲೈಟ್ ಎಂಬುದು ನಿರ್ದೇಶಕರ ಹೇಳಿಕೆ. ಇನ್ನು, ಈ ಚಿತ್ರವನ್ನು ಚೇತನ್‌ರಾಜ್‌ ನಿರ್ಮಿಸಿದ್ದಾರೆ. ಅವರಿಗೆ ಇದು ಮೊದಲ ಹೆಜ್ಜೆ. ಆರಂಭದಲ್ಲಿ ಸಿನಿಮಾ ಸೆಟ್ಟೇರಿದಾಗ, ಸಿನಿಮಾಗೆ ಸಾಥ್‌ ಕೊಟ್ಟವರು ಬೇರೆಯವರು. ಚಿತ್ರ ಪೂರ್ಣಗೊಂಡು, ಸಮಸ್ಯೆಗೆ ಸಿಲುಕಿದಾಗ, ಚಿತ್ರ ನೋಡಿ, ಇಷ್ಟಪಟ್ಟು ಚೇತನ್‌ರಾಜ್‌ ಆ ಚಿತ್ರವನ್ನು ಮುನ್ನೆಡೆಸಿ, ಈಗ ರಿಲೀಸ್‌ ಮಾಡಿದ್ದಾರೆ. ಈ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿರುವ ನಟ ಶ್ರೀಮುರಳಿ, ಚಿತ್ರದ ಮೇಲಿರುವ ಕುತೂಹಲವನ್ನು ಹೇಳಿ ಕೊಂಡಿ ದ್ದಾರೆ. ಹೊಸ ಬರ ಪ್ರಯತ್ನಕ್ಕೆ ಎಲ್ಲರೂ ಬೆಂಬಲ ಕೊಡಬೇಕು ಎಂದು ಮನವಿ ಮಾಡುತ್ತಾರೆ.

ಈಗಾಗಲೇ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿರುವ ನಟ ಶ್ರೀಮುರಳಿ, ಹೊಸಬರ ಪ್ರಯತ್ನವನ್ನು ಮೆಚ್ಚಿಕೊಂಡು, ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಶುಭಹಾರೈಸಿದ್ದಾರೆ. ನಟ ಧ್ರುವಸರ್ಜಾ ಕೂಡ ಚಿತ್ರದ ಗೇಮ್‌ವೊಂದನ್ನು ಬಿಡುಗಡೆ ಮಾಡಿ ಶುಭಕೋರಿದ್ದಾರೆ. ಇನ್ನು, ಹೊಸ ಪ್ರತಿಭೆ ಮಹೇಶ್‌ ಎರಡು ಹಾಡುಗಳನ್ನು ಬರೆದಿದ್ದಾರೆ. ಎ.ಟಿ.ರವೀಶ್‌ ಸಂಗೀತವಿದ್ದು, ಅವರ 25ನೇ ಚಿತ್ರವಿದು. ಚಿತ್ರದಲ್ಲಿ ಉತ್ಪಲ್, ಸನತ್‌ಕುಮಾರ್‌ ನಾಯಕರಾದರೆ, ಸ್ವಾತಿಕೊಂಡೆ, ಅಹಲ್ಯಾ ಸುರೇಶ್‌ ನಾಯಕಿಯರು. ‘ತಿಥಿ’ ಖ್ಯಾತಿಯ ಗಡ್ಡಪ್ಪ ಅವರಿಗಿಲ್ಲಿ ವಿಶೇಷ ಪಾತ್ರವಿದೆ. ಇವರ ಜೊತೆಗೆ ‘ಊಸರವಳ್ಳಿ’ ಪ್ರಾಣಿಯೊಂದು ಪ್ರಮುಖವಾಗಿ ಕಾಣಿಸಿಕೊಂಡಿದೆ. ಅದು ಯಾಕೆ ಅನ್ನುವುದಕ್ಕೆ ಸಿನಿಮಾ ನೋಡಬೇಕು ಎಂಬುದು ಚಿತ್ರತಂಡದ ಮಾತು.

Advertisement

Udayavani is now on Telegram. Click here to join our channel and stay updated with the latest news.

Next