ಮೂಲ್ಕಿ: ಕಳೆದ 9 ವರ್ಷದಿಂದ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಳದ ಬಾಕಿಮಾರು ಗದ್ದೆಯಲ್ಲಿ ತುಳುನಾಡ ಕೃಷಿ ಜನಪದೋತ್ಸವ ಎಂಬ ಪರಿಕಲ್ಪನೆಯಲ್ಲಿ 10ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ ಸಣ್ಣ ಮಕ್ಕಳಿಗಾಗಿ ವಿಶೇಷ ಶನಿವಾರ ನಡೆಯಿತು.
ಬೆಳಿಗ್ಗೆ ಶ್ರೀ ಕ್ಷೇತ್ರ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಕ್ಷೇತ್ರದ ಡಾ.ಯಾಜಿ ನಿರಂಜನ ಭಟ್ ರವರಿಂದ ವಿಶೇಷ ಸಾಮೂಹಿಕ ಪ್ರಾರ್ಥಸಿ, ಬಾಕಿಮಾರು ಗದ್ದೆಗಿಳಿದು ಶ್ರೀ ದೇವರ ತೀರ್ಥ ಹಾಗೂ ಹಿಂಗಾರ ಸಮರ್ಪಿಸಿದ ಬಳಿಕ ಅಧೀಕೃತವಾಗಿ ಕೃಷಿ ಜನಪದೋತ್ಸವಕ್ಕೆ ಕೆಸರು ಮಿಶ್ರಿತ ನೀರಿನಲ್ಲಿ ಎರಡು ದಿನಗಳಲ್ಲಿ ನಡೆಯುವ ಕ್ರೀಡೆಗಳಿಗೆ ಪ್ರಾರ್ಥನೆಯೊಂದಿಗೆ ಚಾಲನೆ ನೀಡಲಾಯಿತು.
ವೇದ ಕೃಷಿಕ ಕೆ.ಎಸ್.ನಿತ್ಯಾನಂದ ಚಿಕ್ಕಮಗಳೂರು ಅವರ ಮಾರ್ಗದರ್ಶನದಲ್ಲಿ ಸ್ಥಳೀಯ 25ಕ್ಕೂ ಹೆಚ್ಚು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತಿರುವ ಈ ಉತ್ಸವದಲ್ಲಿ ಮೊದಲ ದಿನದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ನಡೆದಿದ್ದು, ಎರಡನೇ ದಿನದಲ್ಲಿ ಭಾನುವಾರ ಸಾರ್ವಜನಿಕ ವಿಭಾಗದಲ್ಲಿ ಪುರುಷರು ಮಹಿಳೆಯರಿಗೆ ವಿವಿಧ ಮುಕ್ತ ಸ್ಪರ್ಧೆಗಳು ಕೆಸರುಗದ್ದೆಯಲ್ಲಿ ನಡೆಯಲಿವೆ.
ಮೊದಲ ದಿನದಲ್ಲಿ ಕೆಸರುಗದ್ದೆ ಓಟ, ಹಿಮ್ಮುಖ ಓಟ, ಹಗ್ಗ ಜಗ್ಗಾಟ, ತುಳು ಜನಪದ ಧ್ವನಿ ಸುರುಳಿಗೆ ನೃತ್ಯ ಸ್ಪರ್ಧೆಗಳು ನಡೆಯಿತು. ಉತ್ಸಾಹದಿಂದ ಒಟ್ಟು 15 ವಿವಿಧ ಶಾಲೆಯಿಂದ ಪ್ರಾಥಮಿಕ ಮತ್ತು ಫ್ರೌಢಶಾಲಾ ವಿಭಾಗದಲ್ಲಿ ಸುಮಾರು 980 ವಿದ್ಯಾರ್ಥಿಗಳು ಹೆಸರನ್ನು ನೋಂದಾಯಿಸಿದ್ದರೇ, ಅದರಲ್ಲಿ ಹಗ್ಗಜಗ್ಗಾಟದಲ್ಲಿ 30 ತಂಡಗಳು ಭಾಗವಹಿಸಿದೆ.
ಪ್ರತಿಯೊಂದು ಸ್ಪರ್ಧೆಯಲ್ಲೂ ಉತ್ಸಾಹದಿಂದ ಪಾಲ್ಗೊಂಡ ಮಕ್ಕಳು ಕೆಸರಿನಲ್ಲಿಯೇ ಮಿಂದೆದ್ದು, ಸ್ಪರ್ಧೆಗೆ ತಕ್ಕಂತೆ ಓಡಿ, ಮೈಯೆಲ್ಲಾ ಕೆಸರಾದರೂ ಗುರಿ ಮುಟ್ಟಲು ಪ್ರಯತ್ನ ನಡೆಸಿದರು, ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೇ ಹೆಚ್ಚು ಉತ್ಸಾಹದಿಂದ ಪಾಲ್ಗೊಂಡಿದ್ದು ಹತ್ತನೇ ವರ್ಷದ ವಿಶೇಷವಾಗಿದೆ.
ಈ ನಡುವೆ ಸಭಾ ವೇದಿಕೆಗೆ ಹಲವು ಗಣ್ಯರು ಭೇಟಿ ನೀಡಿ ಕಾರ್ಯಕ್ರಮಕ್ಕೆ ಶುಭ ಕೋರುತ್ತಿದ್ದರು. ಸ್ಥಳೀಯ ವಿವಿಧ ಶಾಲೆಯ ದೈಹಿಕ ಶಿಕ್ಷಕ ವರ್ಗದ ನಿರ್ದೇಶಕರು ದಯಾನಂದ ಮಾಡ ಎಕ್ಕಾರು ಅವರ ಮುಂದಾಳುತ್ವದಲ್ಲಿ ತೀರ್ಪುಗಾರರಾಗಿ ಎರಡೂ ದಿನದಲ್ಲಿ ಸಹಕಾರ ನೀಡುತ್ತಿದ್ದಾರೆ. ಸುಧಾಕರ ಆರ್. ಅಮೀನ್, ಸುಜಾತಾ ವಾಸದೇವ, ಮೋಹನ್ ಸುವರ್ಣ, ಸುಲೋಚನಾ ಮಹಾಬಲ ಅಂಚನ್, ಮೋಹನ್ ಬಂಗೇರ, ಲಕ್ಷ್ಮಣ್ ಸಾಲ್ಯಾನ್ ಪುನರೂರು, ಯೋಗೀಶ್ ಪೂಜಾರಿ, ಹರಿದಾಸ್ ಭಟ್ ತೋಕೂರು, ನವೀನ್ ಶೆಟ್ಟಿ ಎಡ್ಮೆಮಾರ್, ಸಾವಿತ್ರಿ ಸುವರ್ಣ, ಯತೀಶ್ ಕೋಟ್ಯಾನ್, ರಮೇಶ್ ಕೋಟ್ಯಾನ್ ಮತ್ತಿತರರು ಸಹಕರಿಸಿದ್ದರು.