ಮುಂಬಯಿ: ವಿಶ್ವವನ್ನೇ ಅಸ್ಥಿರಗೊಳಿಸಿದ ಕೊರೊನಾ ಸಾಂಕ್ರಾಮಿ ಕವು ಜೀವನ ಶೈಲಿಯ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ. ಜೀವ ಸಂಕುಲದ ಮೇಲೆ ಸವಾರಿ ಮಾಡುವ ವೈರಾಣುಗಳ ವಿರುದ್ಧ ಹೋರಾಡಲು ಸಾವಯವ ಉತ್ಪನ್ನ, ಶುದ್ಧಗಾಳಿ, ಪ್ರಕೃತಿ ಸಹಜವಾಗಿ ದೊರಕುವ ಜೀವಸತ್ವಗಳನ್ನು ಒಳಗೊಂಡ ಆಹಾರದ ಸೇವನೆ ಇಂದು ಅತ್ಯಗತ್ಯವಾಗಿದೆ. ಎಚ್ಚರಿಕೆಯ ನಡಿಗೆಯಲ್ಲಿ ಮುನ್ನಡೆದು ಬದುಕನ್ನು ರೋಗ ಮುಕ್ತಗೊಳಿಸೋಣ ಎಂದು ವಿಶ್ವಮಾನವ ಹಕ್ಕುಗಳ ಅಧ್ಯಕ್ಷ, ಸಮಾಜ ರತ್ನ, ಲಯನ್ ಡಾ| ಶಂಕರ್ ಕೆ. ಟಿ. ತಿಳಿಸಿದರು.
ನ. 14ರಂದು ಮೀರಾರೋಡ್ ಪೂರ್ವದ ಜಹಗೀಡ್ ವೃತ್ತದ ಸಮೀಪದ ನಾರಾಯಣ ಗುರು ಸಭಾಗೃಹದಲ್ಲಿ ತುಳುನಾಡ ಸೇವಾ ಸಮಾಜ ಮೀರಾ-ಭಾಯಂದರ್ ಇದರ ಸಂಸ್ಥಾಪನ ದಿನಾಚರಣೆ ಮತ್ತು ಅರಸಿನ ಕುಂಕುಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಂಖದಿಂದ ಬರುವ ಮುತ್ತಿನಂತೆ, ನಮ್ಮ ವ್ಯವಹಾರ ಬದುಕು ಪಾರದರ್ಶಕವಾಗಿರಬೇಕು. ಅನೇಕತೆಯಲ್ಲಿ ಏಕತೆ ಹೊಂದಿದ ಸಂಘಟನೆಯಲ್ಲಿ ಸಮಾನತೆ ಕಂಗೊಳಿಸಲಿ. ಕಣ್ಣಿನ ಪೊರೆ, ಕಿಡ್ನಿಯ ಕಲ್ಲು ಮೊದಲಾದ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಕಲ್ಪಿಸುವ ಯೋಜನೆ ನಮ್ಮ ಸಂಸ್ಥೆಯ ಮುಖಾಂತರ ನಡೆಯುತ್ತಿದೆ. ಅರ್ಹರು ಇದರ ಪ್ರಯೋಜನ ಪಡೆಯಬೇಕು ಎಂದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಮೀರಾ ಭಾಯಂದರ್ ಬಿಜೆಪಿಯ ಅಧ್ಯಕ್ಷ, ನ್ಯಾಯವಾದಿ ರವಿ ವ್ಯಾಸ್ ಮಾತನಾಡಿ, ಹೆಚ್ಚಿನ ಕಡೆಗಳಲ್ಲಿ ಕಾರ್ಯಕ್ರಮ ಪ್ರಾಯೋಜಕರಿಗೆ, ದಾನಿಗಳಿಗೆ ಮಾತ್ರ ಸಮ್ಮಾನ ನಡೆಯುತ್ತದೆ. ಆದರೆ ಇಲ್ಲಿ ತದ್ವಿರುದ್ದವಾಗಿದೆ. ಹಲವಾರು ವಿಶೇಷತೆಗಳಿಂದ ಕೂಡಿದೆ. ಇಂದು ಗೌರವಿಸಿದ ಎಲ್ಲ ವ್ಯಕ್ತಿಗಳು ಅಭೂತಪೂರ್ವ ಸಾಧಕರು. ನಿಜವಾದ ಪ್ರತಿಭೆಗಳಿಗೆ ಪ್ರಶಸ್ತಿ-ಪುರಸ್ಕಾರಗಳನ್ನು ನೀಡಿದರೆ ಅದರ ಘನತೆ, ಗೌರವ ಅರ್ಥಪೂರ್ಣವಾಗುತ್ತದೆ. ಸ್ಥಾಪಕ ಸದಸ್ಯರ ಧನಾತ್ಮಕ ಚಿಂತನೆಯನ್ನು ಪಾಲಿಸಿ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ಉತ್ತಮ ಆಚಾರ-ವಿಚಾರಗಳ ಪಾಲನೆಯಿಂದ ಕೂಡು ಕುಟುಂಬದ ಸಾಮರಸ್ಯ ಹೆಚ್ಚಾಗಲಿದೆ ಎಂದು ತಿಳಿಸಿ ಶುಭ ಹಾರೈಸಿದರು.
ಸಮಾರಂಭದಲ್ಲಿ ಕಂಬಳದ ವೇಗದ ಓಟಗಾರ ಮಿಜಾರು ಅಶ್ವತ್ಥಪುರದ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ಗೌಡ, ಸಮಾಜ ಸೇವಕಿ ವಸಂತಿ ಎಸ್. ಶೆಟ್ಟಿ, ರಂಗಭೂಮಿ ಕಲಾವಿದೆ, ಭಜನ ಗಾಯಕಿ ಭಾರತಿ ಶ್ರೀಶ ಉಡುಪ, ನ್ಯಾಯವಾದಿ ಸೌಮ್ಯಾ ಪೂಜಾರಿ ಅವರನ್ನು ಸಮ್ಮಾನಿಸಲಾಯಿತು. ಜಯಲಕ್ಷ್ಮೀ ಸುವರ್ಣ, ಕುಶಲಾ ಶೆಟ್ಟಿ, ವಸಂತ ಶೆಟ್ಟಿ, ವಾಣಿ ಡಿ. ಶೆಟ್ಟಿ ಅವರು ಸಮ್ಮಾನ ಪತ್ರವನ್ನು ವಾಚಿಸಿದರು. ತುಳುನಾಡ ಸೇವಾ ಸಮಾಜದ ಅಧ್ಯಕ್ಷ ಡಾ| ರವಿರಾಜ ಸುವರ್ಣ ಸ್ವಾಗತಿಸಿ, ಪರಿಚಯಿಸಿದರು. ಪತ್ರಕರ್ತ ವೈ. ಟಿ. ಶೆಟ್ಟಿ ಹೆಜ್ಮಾಡಿ ಮತ್ತು ಮಹಿಳಾ ವಿಭಾಗದ ಜತೆ ಕಾರ್ಯದರ್ಶಿ ವಾಣಿ ಡಿ. ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಾಧ್ಯಕ್ಷೆ ಅಮಿತಾ ಎಸ್. ಶೆಟ್ಟಿ ವಂದಿಸಿದರು.
ವೇದಿಕೆಯಲ್ಲಿ ಬಿಲ್ಲವರ ಅಸೋಸೊ ಯೇಶನ್ ಮೀರಾ-ಭಾಯಂದರ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ನರೇಶ್ ಕೆ. ಪೂಜಾರಿ, ತುಳುನಾಡ ಸೇವಾ ಸಮಾಜದ ಗೌರವ ಅಧ್ಯಕ್ಷ ಶಂಭು ಕೆ. ಶೆಟ್ಟಿ, ಉಪಾಧ್ಯಕ್ಷರಾದ ವಸಂತ ಶೆಟ್ಟಿ ಮತ್ತು ನಾರಾಯಣ ಮೂಡಬಿದ್ರೆ, ಪ್ರಧಾನ ಕಾರ್ಯದರ್ಶಿ ಶೋಭಾ ಉಡುಪ, ಕೋಶಾಧಿಕಾರಿ ರವೀಂದ್ರ ಶೆಟ್ಟಿ ಸೂಡ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಜಯಪ್ರಕಾಶ್ ಪೂಜಾರಿ ಉಪಸ್ಥಿತರಿದ್ದರು.
ಮಂಜುನಾಥ್ ಬಿ. ಕೆ., ಚಂದ್ರಹಾಸ ಶೆಟ್ಟಿ, ರೇಖಾ ಪೂಜಾರಿ, ಪ್ರತಿಮಾ ಬಂಗೇರ, ಭಾರತಿ ಅಂಚನ್, ದಾಕ್ಷಾಯಿಣಿ, ನಯನಾ ಪೂಜಾರಿ, ಶಾಂತಾ ಆಚಾರ್ಯ, ರಾಧಿಕಾ ಶೆಟ್ಟಿಗಾರ್ ಮೊದಲಾದವರು ಸಹಕರಿಸಿದರು. ಸಮಿತಿ ಸದಸ್ಯರಿಂದ ಅರಸಿನ ಕುಂಕುಮ, ಕುಣಿತ ಭಜನೆ, ನೃತ್ಯ ಮತ್ತು ವಿಜಯ ಶೆಟ್ಟಿ ಮೂಡುಬೆಳ್ಳೆ ತಂಡದವರಿಂದ ಸಂಗೀತ ರಸಮಂಜರಿ ನಡೆಯಿತು.
ಧರ್ಮಗಳ ಸಂರಕ್ಷಣೆ, ದೈವ- ದೇವರ ನೆಲೆ ಬೀಡಾಗಿರುವ ತುಳುನಾಡು ಸಂಸ್ಕೃತಿ – ಸಂಸ್ಕಾರ ಗಳ ತವರೂರು. ಅದೇ ಕಟ್ಟು ಕಟ್ಟಲೆಯಲ್ಲಿ ಸ್ಥಾಪಿತವಾದ ತುಳುನಾಡ ಸೇವಾ ಸಮಾಜ ಕಳೆದ ಸುಮಾರು 20 ವರ್ಷಗಳಿಂದ ಮೀರಾ-ಭಾಯಂದರ್‌ನಲ್ಲಿ ತುಳು ಸಂಸ್ಕೃತಿಯನ್ನು ಪಸರಿಸುತ್ತಿದೆ. ಸಂಪ್ರದಾಯ, ಸಂಸ್ಕಾರವನ್ನು ಪೋಷಿಸಿದೆ. ಸಾಧಕರನ್ನು ಗುರುತಿಸಿ ಗೌರವಿಸಿದೆ. ಇವರ ಪ್ರತಿಯೊಂದು ಕಾರ್ಯಕ್ರಮಗಳು ನಾಡಿನ ಕಲಾ ಸಂಸ್ಕೃತಿಯನ್ನು ಬಿಂಬಿಸುತ್ತವೆ.
-ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು, ಗೌರವ ಪ್ರಧಾನ ಕಾರ್ಯದರ್ಶಿ, ಬಿಜೆಪಿ ಮೀರಾ-ಭಾಯಂದರ್
-ಚಿತ್ರ-ವರದಿ: ರಮೇಶ ಅಮೀನ್