Advertisement
ಯುಗಾದಿಯಂದೇ ಹೊಸ ಸಂವತ್ಸರವನ್ನು ಸಂಭ್ರಮದಿಂದ ಸ್ವಾಗತಿಸುವಂತಾಗಬೇಕು, ಯುವಜನತೆಗೆ ನಮ್ಮ ಸಂಸ್ಕೃತಿ, ಆಚಾರ – ವಿಚಾರಗಳ ಬಗ್ಗೆ ಅರಿವು ಮೂಡಿಸಬೇಕೆನ್ನುವ ಬಹು ದೊಡ್ಡ ಕಲ್ಪನೆಯೊಂದಿಗೆ ಉಡುಪಿಯ ಶೀರೂರುಶ್ರೀಯವರ ಸ್ವತಃ ಮುತುವರ್ಜಿಯಲ್ಲಿ ಗುರುವಾರ ಉಡುಪಿ ಕೃಷ್ಣಮಠದ ವಾಹನ ಪಾರ್ಕಿಂಗ್ ಸ್ಥಳದಲ್ಲಿ ನಡೆದ ತುಳುನಾಡಿನ ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸುವ ಎರಡು ವಿಶಿಷ್ಟ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕೇಮಾರು ಶ್ರೀ ಈಶವಿಟಲದಾಸ ಸ್ವಾಮೀಜಿ ಅವರು ಮಾತನಾಡಿ, ಮಕ್ಕಳಿಗೆ ಸಂಸ್ಕೃತಿ, ಧಾರ್ಮಿಕ ಗ್ರಂಥಗಳ ಬಗ್ಗೆ ತಿಳಿ ಹೇಳುವ ಕಾರ್ಯ ನಮ್ಮಿಂದಲೇ ನಡೆಯಬೇಕು. ತುಳುನಾಡಿದ ಭವ್ಯ ಸಂಸ್ಕೃತಿ ಉಳಿಸಿ ಬೆಳೆಸಲು ಗ್ರಾಮೀಣ ಭಾಗದ ತಾಯಂದಿರು ಕಾರಣರಾಗಿದ್ದಾರೆ. ಮದ್ಯಪಾನ ಮತ್ತು ದುಶ್ಚಟಗಳ ಮುಕ್ತ ಸಮಾಜ ನಿರ್ಮಾಣವಾಗಬೇಕಾಗಿದೆ. ಪ್ರಸ್ತುತ ಆತ್ಮಶಕ್ತಿಯ ಕೊರತೆಯಿಂದಾಗಿ ಪ್ರತಿಭಾವಂತ ವಿದ್ಯಾರ್ಥಿಗಳು, ಐಎಎಸ್ ಅಧಿಕಾರಿಗಳು ಆತ್ಮಹತ್ಯೆಯಂತಹ ಹೇಯಕೃತ್ಯಕ್ಕೆ ಮುಂದಾಗುತ್ತಿದ್ದಾರೆ. ಈ ದೆಸೆಯಲ್ಲಿ ನಮ್ಮ ಹಬ್ಬಗಳ ಆಚರಣೆ, ಸಂಸ್ಕೃತಿ, ಆಚಾರ-ವಿಚಾರಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಿದ ಶೀರೂರುಶ್ರೀ ಅವರ ಕಾರ್ಯ ಪ್ರಶಂಸನೀಯ ಎಂದರು. ಸತ್‌ಸಂಪ್ರದಾಯದ ಸನಾತನ ಹಿಂದೂ ಧರ್ಮ
ಸಚಿವ ಪ್ರಮೋದ್ ಮಧ್ವರಾಜ್ ಅವರು ಮಾತನಾಡಿ, ಬ್ರಿಟಿಷರು ನಮ್ಮನ್ನು ಬಿಟ್ಟು ತೆರಳಿದರೂ ಅವರ ಸಂಪ್ರದಾಯ, ಆಚರಣೆಗಳು ಇಂದಿಗೂ ಮುಂದುವರಿಯುತ್ತಿವೆ. ಆದರೆ ನಾವು ನಮ್ಮದೇ ಆದ ಸನಾತನ ಹಿಂದೂ ಧರ್ಮದ ಸತ್‌ಸಂಪ್ರದಾಯವನ್ನು ಮರೆಯಬಾರದು. ಜ. 1 ಕ್ಯಾಲೆಂಡರ್ ವರ್ಷಾರಂಭವೇ ಹೊರತೂ ನಮ್ಮ ಹೊಸ ವರ್ಷಾರಂಭವಲ್ಲ, ನಮಗೆ ಯುಗಾದಿಯೇ ವರ್ಷಾರಂಭ ಎನ್ನುವುದನ್ನು ಗಟ್ಟಿಗೊಳಿಸಬೇಕು ಎಂದರು.
Related Articles
ತುಳು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಅವರು ಮಾತನಾಡಿ, ತುಳುನಾಡು ಕೃಷಿ ಸಂಸ್ಕೃತಿ ಮೇಲೆ ಅವಲಂಬಿತವಾಗಿದೆ. ಆದರೆ ಇಂದು ಕೃಷಿ ಅಳಿದು, ದೈವಾರಾಧನೆ ವ್ಯಾಪಾರೀಕರಣವಾಗಿದೆ. ಮುಂದಿನ ಪೀಳಿಗೆ, ಯುವಶಕ್ತಿಗೆ ನಮ್ಮ ಸಂಸ್ಕೃತಿ, ಆಚರಣೆಗಳ ಕುರಿತು ಅರಿವು ಮೂಡಿಸುವುದು ಅನಿವಾರ್ಯ ಎಂದರು. ಸಾಯಿರಾಧಾ ಗ್ರೂಪ್‌ನ ಎಂಡಿ ಮನೋಹರ ಶೆಟ್ಟಿ, ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಉದ್ಯಮಿಗಳಾದ ವಿ. ಮೋಹನ್ ಮುಂಬಯಿ, ಗಣೇಶ್ ಉಪಸ್ಥಿತರಿದ್ದರು. ಶೀರೂರು ಮಠದ ದಿವಾನ ಲಾತವ್ಯ ಆಚಾರ್ಯ ಸ್ವಾಗತಿಸಿದರು. ನವೀನ್ ಕಾರ್ಯಕ್ರಮ ನಿರೂಪಿಸಿದರು. ಸಭೆಯ ಅನಂತರ ಮಾರ್ಪಳ್ಳಿ ಚಂಡೆ ಬಳಗದ ಸದಸ್ಯರು ಹಾಗೂ ಕುಳಾಯಿ ಕಲಾ ಕುಂಭ ಸಾಂಸ್ಕೃತಿಕ ವೇದಿಕೆ ವತಿಯಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಗೊಂಡಿತು.
Advertisement