Advertisement

ಪಿಯುಸಿಯಲ್ಲಿ ತುಳು ಪಠ್ಯ ಸೇರ್ಪಡೆಗೆ ಮನವಿ

09:51 AM Jun 08, 2019 | keerthan |

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ. ಭಂಡಾರಿ ಅವರ ನೇತೃತ್ವದ ನಿಯೋಗವು ಗುರುವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಪಿಯುಸಿ ತರಗತಿಯಲ್ಲಿ ಐಚ್ಛಿಕ ಪಠ್ಯವಿಷಯವಾಗಿ ತುಳುವನ್ನು ಸೇರ್ಪಡೆ ಮಾಡುವ ವಿಚಾರವಾಗಿ ಮಾತುಕತೆ ನಡೆಸಿ ಮನವಿ ಸಲ್ಲಿಸಿತು.

Advertisement

ಸಚಿವ ಯು.ಟಿ. ಖಾದರ್‌ ಅವರು ಮುಖ್ಯಮಂತ್ರಿಗಳ ಜತೆ ಈ ಮಾತುಕತೆಯನ್ನು ಆಯೋಜಿಸಿದ್ದರು. ತುಳು ಪಠ್ಯವನ್ನು ಈಗಾಗಲೇ ಪ್ರೌಢ ಶಾಲೆ, ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಅಳವಡಿಸಿಕೊಳ್ಳಲಾಗಿದೆ.

ಪಿಯುಸಿಯಲ್ಲಿ ಮಾತ್ರ ಬಾಕಿ ಇದೆ ಎಂಬ ವಿಚಾರವನ್ನು ಸಿಎಂ ಗಮನಕ್ಕೆ ತರಲಾಯಿತು. ಮುಂದಿನ ಶೈಕ್ಷಣಿಕ ವರ್ಷ ಆರಂಭಕ್ಕೆ ಮುಂಚಿತವಾಗಿ ಪಿಯುಸಿ ತರಗತಿಗಳಿಗೆ ಕೂಡ ತುಳು ಪಠ್ಯವನ್ನು ಐಚ್ಛಿಕ ವಿಷಯವಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಯಿತು. ತತ್‌ಕ್ಷಣವೇ ಪಿಯು ಇಲಾಖೆಯ ಉನ್ನತ ಅಧಿ ಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿ, ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ತುಳು ಅಕಾಡೆಮಿಯ ತುಳು ಭವನದ ಅಪೂರ್ಣ ಕಾಮಗಾರಿಯನ್ನು ಪೂರ್ಣಗೊಳಿಸಲು ಬೇಕಾದ 3.6 ಕೋ.ರೂ. ಬಿಡುಗಡೆ ಮಾಡುವಂತೆಯೂ ಅಧ್ಯಕ್ಷ ಎ.ಸಿ. ಭಂಡಾರಿಯವರು ಮುಖ್ಯಮಂತ್ರಿಯವರ ಗಮನ ಸೆಳೆದರು. ಈ ಬಗ್ಗೆ ಕೂಡ ಸ್ಪಂದಿಸುವುದಾಗಿ ಭರವಸೆ ಲಭಿಸಿದೆ.

ನಿಯೋಗದಲ್ಲಿ ಸಚಿವ ಯು.ಟಿ. ಖಾದರ್‌, ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌, ಮಾಜಿ ಸಚಿವ ಗಂಗಾಧರ ಗೌಡ, ಮಾಜಿ ಶಾಸಕ ವಸಂತ ಬಂಗೇರ, ಅಕಾಡೆಮಿ ಸದಸ್ಯರಾದ ತಾರಾನಾಥ ಗಟ್ಟಿ ಕಾಪಿಕಾಡ್‌, ಬೆನೆಟ್‌ ಅಮ್ಮನ್ನ ಇದ್ದರು. ಬಳಿಕ ಇದೇ ವಿಚಾರವಾಗಿ ಸಚಿವ ಡಿ.ಕೆ. ಶಿವಕುಮಾರ್‌ ಅವರನ್ನು ಕೂಡ ಭೇಟಿಯಾಗಿ ಮಾತುಕತೆ ನಡೆಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next