Advertisement

ತುಳು ಸಂಘ ಬೊರಿವಲಿ: ಎಂಟನೇ ವಾರ್ಷಿಕೋತ್ಸವ ಸಂಭ್ರಮ

04:53 PM Dec 06, 2018 | |

ಮುಂಬಯಿ: ಉದ್ಯೋಗದ ಜತೆಗೆ ಭಾಷೆ, ಸಂಸ್ಕೃತಿಯನ್ನು ಗಟ್ಟಿಗೊಳಿಸುವ ಆರಾ
ಧಕರು ತುಳುವರಾಗಿದ್ದಾರೆ. ಭಾಷೆ, ಸಂಸ್ಕೃತಿಗೆ ಮಹತ್ವ ಕೊಡುವವರಲ್ಲಿ ತುಳುವರು ಪ್ರಥಮಿ ಗರು. ಪರಿಸ್ಥಿತಿಯ ಬದಲಾವಣೆಯಲ್ಲಿ ನಮ್ಮ ಜೀವನ ಬದಲಾದರೂ ಉದ್ಯೋಗದಲ್ಲಿ  ಸಾಹಸಿಗ ರಾದ ನಾವು ನಮ್ಮ ಭಾಷೆ, ಸಂಘಟನೆಯ ಮೂಲಕ ಇಂದು ವಿಶ್ವಮಾನ್ಯರಾಗಿದ್ದೇವೆ. ದೇಶ-ವಿದೇಶಗಳಲ್ಲಿ ಪ್ರಸಿದ್ಧರಾದ ತುಳುವರು ಎಲ್ಲೇ ನೆಲೆಸಿದರೂ ಕೂಡ ತಮ್ಮ ಗುರುತನ್ನು ಛಾಪುವ ಮನೋಭಾವದವರಾಗಿದ್ದಾರೆ ಎಂದು ಅಂಧೇರಿ ರೀಜೆನ್ಸಿ ಗ್ರೂಪ್‌ ಆಫ್‌ ಹೊಟೇಲ್ಸ್‌ ಮುಖ್ಯ ಆಡಳಿತ ನಿರ್ದೇಶಕ ಕಡಂದಲೆ ಜಯರಾಮ ಎನ್‌. ಶೆಟ್ಟಿ ಅವರು ನುಡಿದರು.

Advertisement

ಡಿ. 2ರಂದು ಅಪರಾಹ್ನ ಬೊರಿವಲಿ ಪಶ್ಚಿಮದ ದೇವಿದಾಸ್‌ ಲೇನ್‌ನಲ್ಲಿರುವ ಜ್ಞಾನ್‌ಸಾಗರ್‌, ಆ್ಯಂಪಿ ಥಿಯೇಟರ್‌ ಸಭಾಗೃಹದಲ್ಲಿ ನಡೆದ ತುಳು ಸಂಘ ಬೊರಿವಲಿ ಇದರ ಎಂಟನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಧೈರ್ಯ, ಪರಿಶ್ರಮ, ಶಿಸ್ತು, ಒಗ್ಗಟ್ಟಿಗೆ ಹೆಸರಾದ ನಾವು ಉದ್ಯೋಗವನ್ನು ಪ್ರೀತಿ ಸುವುದಲ್ಲದೆ,  ಯಾವುದೇ ಉದ್ಯೋಗವಿದ್ದರೂ ಕೂಡ ಪರಿಶ್ರಮಪಟ್ಟು ಗೆಲುವು ಸಾಧಿಸುವ ಛಲವನ್ನು ಹೊಂದಿದವರು. ಭಾಷೆಯನ್ನು ಪ್ರೀತಿಸುವ ಮೂಲಕ ಸಂಘಟನೆಯನ್ನು ಬಲಗೊಳಿಸಿ ಮಹಾನಗರದಲ್ಲಿ ತುಳು ಭಾಷೆ, ಸಂಸ್ಕೃತಿಗಾಗಿ ಹೋರಾಡುವ ಸಂಸ್ಥೆ ಬೊರಿವಲಿ ತುಳು ಸಂಘವಾಗಿದೆ. ಸಂಸ್ಥೆಯ ಅಧ್ಯಕ್ಷರು, ಗೌರವಾಧ್ಯಕ್ಷರ ದೂರದೃಷ್ಟಿತ್ವದ ಚಿಂತನೆ ಹೆಚ್ಚಿನ ಫಲಪ್ರದ ನೀಡುವಲ್ಲಿ ಎರಡು ಮಾತಿಲ್ಲ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಗೌರವಾಧ್ಯಕ್ಷ ವಿರಾರ್‌ ಶಂಕರ್‌ ಶೆಟ್ಟಿ ಅವರು ಮಾತನಾಡಿ, ಮನುಷ್ಯನ ಸಾಧನೆಯಲ್ಲಿ ಯೋಗ್ಯತೆಗಿಂತ ಯೋಗ ಮಹತ್ವದ್ದಾಗಿದೆ. ನಿಮ್ಮ ಪ್ರೀತಿ, ವಿಶ್ವಾಸ ನನ್ನನ್ನು ಯೋಗ ಪುರುಷನನ್ನಾಗಿ ಮಾಡಿದೆ. ಇದರಿಂದ ಸಾಮಾನ್ಯ ವ್ಯಕ್ತಿಗೆ ಸಮಾ ಜದಲ್ಲಿ ವಿಶೇಷ ಸ್ಥಾನಮಾನ ಲಭಿಸಿದೆ. ನಮ್ಮ ಸಂತೋಷದ ಕಡೆಗೆ ನಾವು ಗಮನ ನೀಡದೆ, ಇತರರನ್ನು ಸಂತೋಷಪಡಿಸುವ ಮನೋಭಾವ ನಮ್ಮಲ್ಲಿರಬೇಕು. ಸಂಘ-ಸಂಸ್ಥೆಗಳಲ್ಲಿ ಜವಾಬ್ದಾರಿಯುತ ಸ್ಥಾನವು ನಮ್ಮ ಬದುಕಿಗೆ ಹೊಸ ಆಯಾಮ ನೀಡಿದಾಗ ಶ್ರಮ ಸಾರ್ಥಕ. ಸಂಸ್ಥೆಯೊಂದು ಭದ್ರತೆಯ ಹಾದಿಯನ್ನು ಬಯಸುವಾಗ ಅದಕ್ಕೆ ಸ್ವಂತ ಕಚೇರಿಯ ಅಗತ್ಯವಿರುತ್ತದೆ. ಅದನ್ನು ಶೀಘ್ರದಲ್ಲಿ ಪೂರೈಸುವ ದೃಷ್ಟಿಕೋನ ನಮ್ಮಲ್ಲಿ ಬೆಳೆಯಬೇಕು. ಅದರಲ್ಲಿ ಯಶಸ್ಸು ಸಾಧಿಸಬೇಕು ಎಂದು ನುಡಿದು, ಸಂಸ್ಥೆಯ ಸಾಧಕರಿಗೆ ನೀಡಿದ ಸಮ್ಮಾನ-ಗೌರವವು ಅರ್ಥಪೂರ್ಣವಾಗಿದೆ ಎಂದು ನುಡಿದರು.

ಗಣ್ಯರು ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಸಂಘದ ಅಧ್ಯಕ್ಷ ವಾಸು ಕೆ. ಪುತ್ರನ್‌ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಎಂಟು ವರ್ಷಗಳ ಹಿಂದೆ ಮಹಿಷಮರ್ದಿನಿ ದೇವಸ್ಥಾನದಲ್ಲಿ ಸಂಸದ ಗೋಪಾಲ್‌ ಸಿ. ಶೆಟ್ಟಿ ಅವರ ನಿರ್ದೇಶನದಲ್ಲಿ ದೇವಸ್ಥಾನದ ಟ್ರಸ್ಟಿ ಪ್ರದೀಪ್‌ ಸಿ. ಶೆಟ್ಟಿ ಅವರ ಸಹಯೋಗದೊಂದಿಗೆ ಪ್ರಾರಂಭಗೊಂಡ ಈ ಸಂಸ್ಥೆ ಪ್ರತೀ ವರ್ಷ ಹಲವಾರು ಸಮಾಜಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದೆ. ಸಂಸ್ಥೆಯು ಮುಂದಿನ ಎರಡು ವರ್ಷಗಳಲ್ಲಿ ಹೆಚ್ಚಿನ ಪರಿಶ್ರಮಪಟ್ಟು ಸ್ವಂತ ಕಚೇರಿಯನ್ನು ಹೊಂದುವ ಬಗ್ಗೆ ಈಗಾಗಲೇ ಕಾರ್ಯಸೂಚಿಯನ್ನು ತಯಾರಿಸಲಾಗಿದ್ದು, ಅದಕ್ಕಾಗಿ ಸ್ಮರಣ ಸಂಚಿಕೆಯ ಮೂಲಕ ನಿಧಿ ಸಂಗ್ರಹ ಮಾಡುವ ಉದ್ದೇಶವನ್ನು ಹೊಂದಿದೆ. ಜತೆಗೆ ಸಂಸ್ಥೆಯ ಎಲ್ಲ ಸಮಾಜಪರ ಯೋಜನೆಗಳಿಗೆ ತುಳುವರ ಸಹಕಾರ, ಪ್ರೋತ್ಸಾಹ ಸದಾಯಿರಲಿ ಎಂದು ಆಶಿಸಿದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸವಿತಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಸಂಘದ ವತಿಯಿಂದ ಅತಿಥಿಗಳನ್ನು ಗೌರವಿಸಲಾಯಿತು. ಸಂಘದ ವಾರ್ಷಿಕ ಸ್ಮರಣ ಸಂಚಿಕೆಯನ್ನು ಅತಿಥಿ-ಗಣ್ಯರು ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಕಳೆದ ಸಾಲಿನ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಸದಸ್ಯ ಬಾಂಧವರ ಮಕ್ಕಳನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು.

Advertisement

ಸಲಹೆಗಾರ ಮುಂಡಪ್ಪ ಪಯ್ಯಡೆ, ಪ್ರದೀಪ್‌ ಶೆಟ್ಟಿ, ಬಾಬು ಶಿವ ಪೂಜಾರಿ, ಟಿ. ಎ. ಶ್ರೀನಿವಾಸ ಪುತ್ರನ್‌, ಸಂಘದ ಬೆಳವಣಿಗೆಗೆ ಆರ್ಥಿಕವಾಗಿ ಸಹಕರಿಸಿದ ದಹಿಸರ್‌ ಕರ್ನಾಟಕ ಸಂಘದ ಅಧ್ಯಕ್ಷ ಎಂ. ಜಿ. ಶೆಟ್ಟಿ, ಹರೀಶ್‌ ಜಿ. ಪೂಜಾರಿ, ಪದ್ಮನಾಭ ಪುತ್ರನ್‌, ಲೇಖಕ ವಾಮನ್‌ ಸಫಲಿಗ, ಡಾ| ನವೀನ್‌ ಕುಮಾರ್‌ ಪೂಜಾರಿ ಇವರನ್ನು ಸತ್ಕರಿಸಲಾಯಿತು. ಪ್ರಾರಂಭದಲ್ಲಿ ಸದಸ್ಯರ ಮಕ್ಕಳಿಂದ ನೃತ್ಯ ವೈವಿಧ್ಯ, ಗಾಯಕ ಗಣೇಶ್‌ ಎರ್ಮಾಳ್‌ ಅವರಿಂದ ರಸಮಂಜರಿ ನಡೆಯಿತು.

ಗೌರವ ಕೋಶಾಧಿಕಾರಿ ಹರೀಶ್‌ ಮೈಂದನ್‌, ಮಹಿಳಾ ವಿಭಾಗದ ಕಾರ್ಯದರ್ಶಿ ತಿಲೋತ್ತಮ ವೈದ್ಯ, ನಿಧಿ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷ ಪ್ರಕಾಶ್‌ ಎ. ಶೆಟ್ಟಿ, ಜತೆ ಕೋಶಾಧಿಕಾರಿ ಟಿ. ಎ. ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೌರವ ಪ್ರಧಾನ ಕಾರ್ಯದರ್ಶಿ ಕೃಷ್ಣರಾಜ್‌ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು. ಜತೆ ಕಾರ್ಯದರ್ಶಿ ದಿವಾಕರ ಬಿ. ಕರ್ಕೇರ ಅವರು ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಅಭಿನಯ ಮಂಟಪ ಮುಂಬಯಿ ಇದರ ಪ್ರಬುದ್ಧ ಕಲಾವಿದರ ಕೂಡುವಿಕೆಯಲ್ಲಿ ಪುರ್ಸೊತ್ತಿಜ್ಜಿ ನಾಟಕ ಪ್ರದರ್ಶನಗೊಂಡಿತು. ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. 

ವ್ಯಕ್ತಿಗತವಾಗಿ ನಾವು ಮರೆಯದ ವ್ಯಕ್ತಿ ಎಂದರೆ ತಾಯಿ ಮತ್ತು ತಾಯ್ನೆಲ. ಮನುಷ್ಯನಿಗೆ ಎಷ್ಟು ಭಾಷೆ ಗೊತ್ತಿದ್ದರೂ ಕೂಡ ಅವನು ಕನಸಿನಲ್ಲಿ ಕಾಣುವ, ಮಾತನಾಡುವ ಭಾಷೆ ಆತನ ಮಾತೃಭಾಷೆಯಾಗಿರುತ್ತದೆ. ಭಾಷೆಯಲ್ಲಿ  ಸ್ವಾಭಿಮಾನವನ್ನು ಅರ್ಥೈಸಿಕೊಳ್ಳಬಹುದು. ನಮ್ಮ ರಾಜ್ಯದಲ್ಲಿ  ಹಲವಾರು ಜಿಲ್ಲೆಗಳಿದ್ದರೂ ಭಾಷೆ, ಸಂಸ್ಕೃತಿಯನ್ನು ಮೇಳೈಸುವ ನಾಡಿದ್ದರೆ ಅದು ತುಳುನಾಡು ಮಾತ್ರ.ಗೋಕರ್ಣದಿಂದ ಕನ್ಯಾಕುಮಾರಿಯವರೆಗಿನ ವಿಸ್ತೀರ್ಣದಲ್ಲಿ ಶ್ರೀಮಂತ ಭಾಷೆಯ ನಾಡು ನಮ್ಮ ತುಳುನಾಡು. ಭಾಷೆಯ ಪ್ರತೀಕ ಅದು ಯಕ್ಷಗಾನ ಕಲೆಯಿಂದ ಅನಾವರಣಗೊಂಡಿದೆ. ಸ್ಥಾನಮಾನದ ಹಕ್ಕಿನ ಪ್ರದೇಶದ ತುಳುನಾಡಿನವರಾದ ನಾವು ಪರಿಚಯವನ್ನು ಬೆಳೆಸುತ್ತಾ, ಸಂಘಟನೆಯನ್ನು ಹೆಚ್ಚಿಸುವ ಮೂಲಕ ಸಮಾಜ ಸೇವೆಯಲ್ಲಿ  ತೊಡಗಲು ಸಾಧ್ಯ. ಬೊರಿವಲಿ ತುಳು ಸಂಘದ ಕಾರ್ಯವೈಖರಿ ಈ ನಿಟ್ಟಿನಲ್ಲಿ ಅಭಿನಂದನೀಯ.                               
– ಸಂತೋಷ್‌ ಭಟ್‌ ಮುದ್ರಾಡಿ, ಪ್ರಧಾನ ಅರ್ಚಕರು, 
ಬೊರಿವಲಿ ಶ್ರೀ ಮಹಿಷಮರ್ದಿನಿ ದೇವಸ್ಥಾನ

ಚಿತ್ರ-ವರದಿ : ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next