Advertisement

ಪದವಿ ತರಗತಿಯಲ್ಲಿ ತುಳು ಐಚ್ಛಿಕ ಪಠ್ಯ: ಉತ್ತಮ ಸ್ಪಂದನೆ

11:06 PM Jul 05, 2019 | mahesh |

ನಗರ: ಪ್ರಥಮ ಬಾರಿಗೆ ಮಂಗಳೂರು ವಿವಿ ವತಿಯಿಂದ ಪದವಿ ತರಗತಿಯಲ್ಲಿ ತುಳು ಭಾಷೆಯನ್ನು ಐಚ್ಛಿಕ ಭಾಷಾ ವಿಷಯವಾಗಿ ಪಠ್ಯ ಬೋಧನೆಯು ಈ ಶೈಕ್ಷಣಿಕ ವರ್ಷದಿಂದ ಆರಂಭವಾಗುತ್ತಿದ್ದು, ವಿವಿ ವ್ಯಾಪ್ತಿಯ ಕಾಲೇಜುಗಳಿಗೆ ಪ್ರಾಥಮಿಕವಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ಮಂಗಳೂರು ವಿಶ್ವ ವಿದ್ಯಾನಿಲಯ ವ್ಯಾಪ್ತಿಯ 6 ಕಾಲೇಜುಗಳಲ್ಲಿ ಈ ಶೈಕ್ಷಣಿಕ ವರ್ಷದಿಂದ ಬಿ.ಎ. ತರಗತಿಗೆ ತುಳು ಐಚ್ಛಿಕ ಪಠ್ಯ ವಿಷಯ ಬೋಧಿಸಲು ನಿರ್ಧರಿಸಿದ್ದು, ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಪಠ್ಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ತುಳು ಪದವಿ ಪಠ್ಯಪುಸ್ತಕದ ಮುದ್ರಣ ಜವಾಬ್ದಾರಿಯನ್ನು ಮಂಗಳೂರು ವಿವಿ ವಿದ್ಯಾನಿಲಯದ ಪ್ರಸಾರಾಂಗದ ಬದಲು ಅಕಾಡೆಮಿ ವಹಿಸಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯು ತುಳು ಭಾಷಾ ತಜ್ಞರ ಸಭೆ ನಡೆಸಿ ವಿವಿ ಪ್ರಾಧ್ಯಾಪಕ ಪ್ರೊ| ಬಿ. ಶಿವರಾಮ್‌ ಶೆಟ್ಟಿ ಪ್ರಧಾನ ಸಂಪಾದಕತ್ವದಲ್ಲಿ ಸಿರಿದೊಂಪ, ಸಿರಿಮುಡಿ ಎನ್ನುವ ಪುಸ್ತಕ ರಚಿಸಲಾಗಿದೆ. ಗೌರವ ಸಂಪಾದಕರಾಗಿ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ಎ.ಸಿ. ಭಂಡಾರಿ, ಕಾರ್ಯನಿರ್ವಾಹಕ ಸಂಪಾದಕರಾಗಿ ಡಾ| ಪೂವಪ್ಪ ಕಣಿಯೂರು ಕಾರ್ಯನಿರ್ವಹಿಸುತ್ತಿದ್ದಾರೆ.

ಮಂಗಳೂರು ರಥಬೀದಿಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು, ಆಳ್ವಾಸ್‌ ಕಾಲೇಜು ಸೇರಿದಂತೆ ಮಂಗಳೂರು ವಿವಿ ವ್ಯಾಪ್ತಿಯ 6 ಕಾಲೇಜುಗಳು ತುಳು ಪದವಿ ತರಗತಿ ಆರಂಭಿಸಲು ಯೋಜನೆ ರೂಪಿಸಿದೆ. ರಥಬೀದಿಯಲ್ಲಿರುವ ಸ.ಪ್ರ.ದ. ಕಾಲೇಜಿನಲ್ಲಿ ಈಗಾಗಲೇ 44 ಮಂದಿ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ತಿಳಿಸಿದ್ದಾರೆ.

ನೂತನ ತುಳು ಪದವಿ ಪಠ್ಯ ಪುಸ್ತಕದಲ್ಲಿ ತುಳುನಾಡಿನ ಪ್ರಸಿದ್ದ ಕವಿಗಳು ರಚಿಸಿರುವ ತುಳು ಕವಿತೆಗಳ ಸಮಗ್ರ ಅಧ್ಯಯನಕ್ಕೆ ಪೂರಕವಾಗುವಂತೆ ಸಿರಿದೊಂಪ ಎನ್ನುವ ಪಠ್ಯ ಸಿದ್ಧಪಡಿಸಲಾಗಿದ್ದು, ತುಳು ನಾಡಿನ ಭವ್ಯತೆಯನ್ನು ಬಿಂಬಿಸುವ ಕವಿತೆ, ಪ್ರಬಂಧ, ಲೇಖನ ಅಳವಡಿಸಿಕೊಳ್ಳಲಾಗಿದೆ.

Advertisement

ಪಠ್ಯದಲ್ಲಿ ಹೀಗಿದೆ
ಪ್ರಸಿದ್ಧರಾದ ಬಿ.ಎ. ವಿವೇಕ ರೈ ಅವರ ಎಕ್ಕಸಕ್ಕ ಕಬಿತೆ, ಕೆಲಿಂಜ ಸೀತಾರಾಮ ಆಳ್ವ ಅವರ ವಸಿಸ್ಟ ಇಸ್ವಾಮಿತ್ರೆರೆ ಪಂತೊ, ಬಿ.ಎ. ವಿವೇಕ ರೈ ಅವರ ಬಸವಣ್ಣನ ವಚನೊಲು -ಅಕ್ಕನ ವಚನೊಲು, ಅಮೃತ ಸೋಮೇಶ್ವರ ಅವರ ಮುಸುಕು ದೆತ್ತ್ದ್‌ ದಕ್ಕ್, ಪ್ರಭಾಕರ ಶಿಶಿಲ ಅವರ ಕಾತ್‌ಕುಲ್ಲಿನಕುಲು, ರಘು ಇಡ್ಕಿದು ಅವರ ಎನ್ನ ನಲಿಕೆ, ಪಡಾರ್‌ ಮಹಾಬಲೇಶ್ವರ ಭಟ್ ಅವರ ಪುದ್ವಾರ್‌ ತುಳು ಕವಿತೆಯನ್ನು ಸಿರಿದೊಂಪ ಪಠ್ಯದಲ್ಲಿ ಅಳವಡಿಸಿಕೊಳ್ಳಲಾಗಿದೆ.

ಧರಣೀದೇವಿ ಮಾಲಗತ್ತಿ ಅವರ ಪಾಡ್ದನೊಡು ಪೊಣ್ಣನ ಸ್ಥಾನಮಾನೊದ ಕಲ್ಪನೆ ಪ್ರಬಂಧ, ಬೆನೆಟ್ ಜಿ. ಅಮನ್ನ ತುಳುಕು ಬಾಸೆಲ್ ಮಿಸನರಿದ ಕೊಡುಗೆಲು, ವಿಶ್ವನಾಥ ಬದಿಕಾನ ಅವರ ತುಳು ವಿಕಿಪೀಡಿಯ, ಕೆ. ಪದ್ಮನಾಭ ಕೇಕುಣ್ಣಾಯ ಅವರ ತುಳುಟು ಸಂಬಂಧವಾಚಕ ಸಬ್ದೊಲು, ಅಮೃತ ಸೋಮೇಶ್ವರ ಅವರ ಗೋಂದೋಲು ನಾಟಕ, ಡಿ. ವೇದಾವತಿ ಅವರ ತುಳು ಜೈಮಿನಿ ಭಾರತದ ಆಯ್ದ ಸೀತಾ ಪರಿತ್ಯಾಗೊ ಕಾವ್ಯ, ಹಂಪಿ ವಿವಿ ಕುಲಸಚಿವ ಸುಬ್ಬಣ್ಣ ರೈ ಅವರ ತುಳುನಾಡ್‌ದ ಐತಿಹ್ಯೊಲು ಎನ್ನುವ ಪ್ರಬಂಧ ಲೇಖನ ಸೇರಿದಂತೆ ಹಲವರ ಸಾಹಿತ್ಯ ಕೃತಿಗಳ ಆಯ್ದ ಭಾಗ ಸಿರಿದೊಂಪ ಪಠ್ಯದಲ್ಲಿ ಅಳವಡಿಸಿಕೊಳ್ಳಲಾಗಿದೆ.

ಜತೆಗೆ ಪ್ರೊ| ಅಭಯಕುಮಾರ್‌ ಅವರ ಚೆನ್ನು ಎನ್ನುವ ಜನಪದ ಕಬಿತೆ, ಕಯ್ನಾರ ಕಿಂಞಣ್ಣ ರೈ ಅವರ ಸಾರೊ ಎಸಳ್‌ದ ತಾಮರೆ ಕಬಿತೆ, ಕೆಲಿಂಜ ಸೀತಾರಾಮ ಆಳ್ವ ಅವರ ದ್ರೌಪದಿ ಸಬೆಟ್ ನ್ಯಾಯೊ ಕೇನ್ವಲ್ ಮಹಾಕಾವ್ಯ, ವಿದ್ಯಾಂಶಕ ಚಿನ್ನಪ್ಪ ಗೌಡ ಅವರ ಈ ನಲಿಕೆದಾಯೆ ಎನ್ನುವ ಕಬಿತೆ, ಮಹಮ್ಮದ್‌ ಕುಳಾಯಿ ಅವರ ಐನ್‌ ಪವನ್‌ ಬಂಗಾರ್‌ ಎನ್ನುವ ಸಣ್ಣಕಥೆ, ಎಸ್‌.ಯು. ಪಣಿಯಾಡಿ ಅವರ ಮಿತ್ಯನಾರಾಯಣ ಕತೆ ಕಾದಂಬರಿ ಪಠ್ಯವಾಗಿದೆ.

ಅಕಾಡೆಮಿಯಿಂದಲೇ ಮುದ್ರಣ

ತುಳು ಭಾಷೆಯು ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಶೈಕ್ಷಣಿಕ ಮಟ್ಟದಲ್ಲೂ ಗೌರವದ ಸ್ಥಾನಕ್ಕೇರುತ್ತಿರುವುದು ಹೆಮ್ಮೆ. ತುಳು ಪಠ್ಯಪುಸ್ತಕದ ಮುದ್ರಣದ ವ್ಯವಸ್ಥೆಯನ್ನು ಮಂಗಳೂರು ವಿವಿ ಪ್ರಸಾರಾಂಗದ ಬದಲು ಅಕಾಡೆಮಿಯ ವತಿಯಿಂದಲೇ ಮುದ್ರಿಸುವ ವ್ಯವಸ್ಥೆ ಮಾಡಲಾಗಿದೆ. – ಪ್ರೊ| ಬಿ. ಶಿವರಾಮ ಶೆಟ್ಟಿ, ಪ್ರಧಾನ ಸಂಪಾದಕರು, ಸಿರಿದೊಂಪ ಪಠ್ಯ

ತುಳುವಿನ ಮೊದಲ ರಾಮಾಯಣ
ತುಳುವಿನ ಮೊದಲ ರಾಮಾಯಣ ಮಂದಾರ ರಾಮಾಯಣ ಓದುವ ಅವಕಾಶವನ್ನೂ ತುಳು ಪದವಿ ವಿದ್ಯಾರ್ಥಿಗಳಿಗೆ ಕಲ್ಪಿಸಿದೆ. ಸಿರಿಮುಡಿ ಎನ್ನುವ ಪಠ್ಯಕ್ರಮದಲ್ಲಿ ಮಂದಾರ ಕೇಶವ ಭಟ್ ಬರೆದಿರುವ ತುಳುವಿನ ಮೊದಲ ರಾಮಾಯಣ ಗ್ರಂಥ ಪಠ್ಯವಾಗಿ ಬಳಸಿಕೊಂಡಿರುವುದು ವಿಶೇಷ. ವೆಂಕಟ್ರಾಜ ಪುಣಿಂಚತ್ತಾಯ ಅವರ ‘ಭೀಮ ಹಿಡಿಂಬೆರೆ ಮದ್ಮೆ’ ಎನ್ನುವ ಕಾವ್ಯ, ಮುದ್ದು ಮೂಡುಬೆಳ್ಳೆ ಅವರ ತುಳುವ ತಮೆರಿ ಕಬಿತೆ, ದಿನೇಶ್‌ ಅಮೀನ್‌ ಮಟ್ಟು ಅವರ ದೆಕಿದಿ ಗೆಂಡ ಕಬಿತೆ, ಪತ್ರಕರ್ತ ಮನೋಹರ ಪ್ರಸಾದ್‌ ಅವರ ಮಂಚವು ಎನ್ನುವ ಸಣ್ಣ ಕಥೆ, ಕಾವೂರು ಕೇಶವ ಮೊಲಿ ಅವರ ತುಳುನಾಡ್ದ ತುದೆಕುಲು ಎನ್ನುವ ಕಾದಂಬರಿ ಪಠ್ಯದಲ್ಲಿದೆ.
ಜು. 8ಕ್ಕೆ ‘ಸಿರಿದೊಂಪ’ ಬಿಡುಗಡೆ
ತುಳು ಭಾಷೆಯನ್ನು ಐಚ್ಛಿಕವಾಗಿ ಕಲಿಯುವ ವಿದ್ಯಾರ್ಥಿಗಳನ್ನು ಅಕಾಡೆಮಿ ಅಭಿನಂದಿಸುತ್ತದೆ. ಅಕಾಡೆಮಿ ಸಿರಿಚಾವಡಿಯಲ್ಲಿ ಪದವಿ ತರಗತಿಯ ತುಳು ಪಠ್ಯ ಪುಸ್ತಕ ಸಿರಿದೊಂಪ ಬಿಡುಗಡೆ ಸಮಾರಂಭ ಜು. 8ರಂದು ನಡೆಯಲಿದೆ. ಮುಂದಿನ ವರ್ಷ ಪಿಯುಸಿ ಹಂತದಲ್ಲಿ ದ್ವಿತೀಯ ಭಾಷೆಯಾಗಿ ತುಳುವನ್ನು ಕಲಿಯಲು ಅವಕಾಶವಾಗುವ ನಿಟ್ಟಿನಲ್ಲಿ ಸರಕಾರದ ಅನುಮತಿ ಸಿಗಲಿದೆ.
– ಎ.ಸಿ. ಭಂಡಾರಿ,ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರು
Advertisement

Udayavani is now on Telegram. Click here to join our channel and stay updated with the latest news.

Next