ಎಚ್. ಎಂ. ಮಹೇಶ್ ಹಾಗೂ ಎಸ್.ಜಾನಕಿ ಅವರು ಸಂಜೀವ ದಂಡೆಕೇರಿಯವರ ‘ಬಯ್ಯಮಲ್ಲಿಗೆ’ ಸಿನೆಮಾದಲ್ಲಿ ಹಾಡಿದ ‘ಡಿಂಗಿರಿ ಮಾಮ.. ಡಿಂಗಿರಿ ಮಾಮ.. ಪೋಡಿದ್ ಪಾರಡಾ.. ಜಾರಡ ತಿಮ್ಮ.. ಬೂರಡ ಡಮ್ಮ.. ಯಾನ್‌ಲ ಮೂಲುಲ್ಲೆ..’ ಎಂಬ ಸೊಗಸಾದ ಹಾಡು ಬರೆದ ಕಾಂತಪ್ಪ ಸೀತಾರಾಮ ಕುಲಾಲ್ ಇನ್ನು ನೆನಪು ಮಾತ್ರ. ಅವರು ಬರೆದ ಅಷ್ಟೂ ಹಾಡುಗಳು ಮಾತ್ರ ಎಂದೆಂದಿಗೂ ಅಜರಾಮರ.
ನಟ, ಲೇಖಕ, ನಾಟಕಗಾರ, ನಿರ್ದೇಶಕ ಸೀತಾರಾಮ ಕುಲಾಲರು ತುಳು ಚಿತ್ರ ಪ್ರಾರಂಭದ ‘ದಾರೆದ ಬುಡೆದಿ’ ಸಿನೆಮಾದಲ್ಲಿ ನಟಿಸಿ, ತುಳು ಚಿತ್ರರಂಗದ ಆರಂಭ ಕಾಲದಿಂದಲೇ ಉತ್ಸಾಹ ತೋರಿದವರು. ಕಾಡುಮಠ ಮಹಾಬಲ ಶೆಟ್ಟಿ ಹಾಗೂ ಆನಂದ್ ಶೇಖರ್ ನಿರ್ಮಾಣದ ಆರೂರು ಪಟ್ಟಾಭಿ ನಿರ್ದೇಶನದ ‘ಪಗೆತ ಪುಗೆ’ ಸಿನೆಮಾ ಮೂಲಕ ರಾಗ ಮಧುರತೆಯ ಮಹಾನ್ ರೂಪವಾಗಿ ತುಳು ಸಿನೆಮಾಗಳ ಪಾಲಿಗೆ ಅವರು ಒದಗಿದರು. 1972ರಲ್ಲಿ ರಾಜನ್ ನಾಗೇಂದ್ರ ಸಂಗೀತ ನೀಡಿರುವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಿರುವ ‘ಮೋಕೆದ ಸಿಂಗಾರಿ.. ಉಂತುದೆ ವೈಯ್ನಾರಿ..’ ಹಾಡಿನ ಜನಕ ಕುಲಾಲರು. ಈ ಹಾಡು ಕೋಸ್ಟಲ್ವುಡ್ ಲೋಕದಲ್ಲಿ ಎಂದೂ ಮರೆಯದ ಹಾಡಾಗಿ ಮನೆಮಾತಾಗಿದೆ. ಇದೇ ಸಿನೆಮಾದ ಎಸ್.ಪಿ. ಬಾಲ ಸುಬ್ರಹ್ಮಣ್ಯಂ ಅವರು ಹಾಡಿರುವ ಸೀತಾರಾಮ ಕುಲಾಲರು ಬರೆದ ‘ಪಕ್ಕಿಲು ಮೂಜಿ.. ಒಂಜೇ ಗೂಡುಡು.. ಬದ್‌ಕೊಂದುಂಡುಗೇ..’ ಹಾಡು ಕೋಸ್ಟಲ್ವುಡ್‌ಗೆ ಹೊಸ ದಾರಿ ನೀಡಿದೆ. ಜತೆಗೆ ಪಿ.ಬಿ.ಶ್ರೀನಿವಾಸ್ ಹಾಡಿರುವ ಇದೇ ಸಿನೆಮಾದ ‘ಪಗೆತ ಪುಗೆನಾ ಇನಿಕ್ ವಿದಿತ ದಗೆನಾ ಎಂಕ್’ ಹಾಡು ಕೂಡ ಎವರ್‌ಗ್ರೀನ್. ವಿಶೇಷವೆಂದರೆ ಈ ಹಾಡುಗಳನ್ನು ಅವರು ಮದ್ರಾಸ್‌ನಲ್ಲಿ ಸ್ಟುಡಿಯೋ ಹೋಗುವ ಮುನ್ನವಷ್ಟೇ ಬರೆದಿದ್ದರು!
1973ರಲ್ಲಿ ಮಲಯಾಳಂನ ಪದ್ಮನಾಭನ್ ನಿರ್ದೇಶನದ ಕೆ.ರಾಧಾಕೃಷ್ಣ ರಾವ್ ಸಂಗೀತ ನಿರ್ದೇಶನದ ‘ಉಡಲ್ದ ತುಡರ್’ ಸಿನೆಮಾದಲ್ಲಿ ಜೇಸುದಾಸ್ ಹಾಡಿರುವ ‘ ಉಡಲ್ದ ತುಡರ್‌ಗ್ ಮನಸ್ಸ್ ಉರ್ಕರು.. ಬಾನೊದ ತುಡರ್‌ಗ್ ಕಡಲ್ ಉರ್ಕರ್..’ ಹಾಡು ಬರೆದದ್ದು ಕೂಡ ಕುಲಾಲರು. ವಿಶೇಷವೆಂದರೆ, ಕುಲಾಲರ ‘ಹೃದಯ ಜ್ಯೋತಿ’ ಎಂಬ ಕನ್ನಡ ನಾಟಕದ ಕಥೆಯುಳ್ಳ ‘ಸತ್ಯನೇ ದೇವೆರ್’ ಎಂಬ ತುಳು ನಾಟಕವನ್ನು ಆಧರಿಸಿ ‘ಉಡಲ್ದ ತುಡರ್’ ಸಿನೆಮಾ ಮಾಡಲಾಗಿತ್ತು. ಈ ಸಿನೆಮಾದ ‘ಸಾರ ವರ್ಸೊಲ ಸುಖೋನು ಪಡೆಲ.. ಪರಪುನ ತುದೆಯಾದ್ ಊರುನು ತೆರಿಲ’ ಹಾಡು, ‘ಪೊಣ್ಣ ತೆಲಿಕೆಗ್ ಅರಳು ಮಲ್ಲಿಗೆ’ ಹಾಡು ಕೂಡ ಹಿಟ್ ಆಗಿತ್ತು.
1977ರಲ್ಲಿ ಸಂಜೀವ ದಂಡೆಕೇರಿಯವರ ‘ಬೊಳ್ಳಿದೋಟ’ ಸಿನೆಮಾದಲ್ಲಿಯೂ ಸೀತಾರಾಮ ಕುಲಾಲ್ ಗೀತ ಸಾಹಿತ್ಯ ಬಹಳಷ್ಟು ಫೇಮಸ್ ಆಗಿತ್ತು. ಅಶೋಕ್-ಚರಣ್ ಸಂಗೀತದ ಪಿ.ಬಿ.ಶ್ರೀನಿವಾಸ್ ಹಾಡಿರುವ ‘ಪರಶುರಾಮನ ಕುಡರಿಗ್ ಪುಟ್ಟಿನ ತುಳುನಾಡ್.. ಕಡಲ್ ಪಾರ್‌ದ್ ಉಡಲ ಬುಲೆಯಿನ ತುಳುವೆರೆ ಬೂಡು’ ಹಾಡಿಗೆ ಸೀತಾರಾಮ ಕುಲಾಲ್ ಅವರೇ ಸಾಹಿತ್ಯ ಬರೆದಿದ್ದಾರೆ. ಇದೇ ಸಿನೆಮಾದಲ್ಲಿ ಕುಲಾಲ್ ಅವರು ಬರೆದ ‘ನೀರ್‌ಡ್ ನೀಲ ಬಾನದ ಬಿಂಬೋ.. ಉಡಲ್ಡ್ ನಿನ್ನ ರೂಪೊದ ಬಿಂಬೋ’ ಹಾಡು ಕೂಡ ಫೇಮಸ್ ಆಗಿತ್ತು.
ದಿನೇಶ್ ಇರಾ