ನರಿಮೊಗರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ತಾಲೂಕು ತುಳು ಸಾಹಿತ್ಯ ಸಮ್ಮೇಳನ ಸಮಿತಿಯ ಆಶ್ರಯದಲ್ಲಿ ನ. 3ರಂದು ಪುತ್ತೂರು ಸುದಾನ ವಿದ್ಯಾಸಂಸ್ಥೆಯಲ್ಲಿ ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ| ಬಿ.ಎ. ವಿವೇಕ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಭರದ ಸಿದ್ಧತೆ ನಡೆಯುತ್ತಿದೆ.
ಗ್ರಾಮೀಣ ಪ್ರದೇಶದಲ್ಲಿ ತುಳು ಸಾಹಿತ್ಯ, ಸಂಸ್ಕೃತಿ-ರಂಗಭೂಮಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಸಾಧಕರ ಗುರುತಿ ಸುವಿಕೆ, ತುಳು ಭಾಷೆ ಲಿಖಿತ ಸಾಹಿತ್ಯದ ಜತೆಯಲ್ಲಿ ಮೌಖಿಕ ಸಾಹಿತ್ಯ ಜಾನಪದ ಸಾಹಿತ್ಯದ ನೆಲೆಗಟ್ಟಿನಲ್ಲಿ ಪ್ರಧಾನವಾಗುತ್ತದೆ. ತುಳು ಜನಪದ ಸಾಹಿತ್ಯದಲ್ಲಿ ಪಾಡ್ಡನ-ಪಾರಿ, ಉರಲ್, ಬೀರ, ಸಂಧಿ ಮೊದಲಾದವುಗಳನ್ನು ಉಳಿಸಿಕೊಂಡಿರುವುದು ಗ್ರಾಮೀಣ ಭಾಗದ ಜನರು. ತುಳು ಭಾಷೆಯ ಪ್ರಾಚೀನತೆ, ಹಿರಿಮೆ, ಗರಿಮೆಯನ್ನು ತಿಳಿಸುವ ಲಿಖಿತ ಸಾಹಿತ್ಯಕ್ಕೂ ಮೌಖಿಕ ಸಾಹಿತ್ಯವು ಮೂಲ ಆಕರವಾಗಿ ಸಿಗುತ್ತದೆ.
ಆಧುನಿಕ ಕ್ರೀಡೆಗಳ ಭರಾಟೆಯೊಂದಿಗೆ ತುಳುವರ ಕ್ರೀಡೆಗಳು ಮರೆಯಾಗುತ್ತಿವೆ. ತುಳುವರ ಕ್ರೀಡೆಗಳನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಸಮ್ಮೇಳನದಲ್ಲಿ ‘ತುಳುವೆರೆ ಗೊಬ್ಬಲು’ ಎಂಬ ಪರಿಕಲ್ಪನೆಯಲ್ಲಿ ಅಗೋಳಿ ಮಂಞಣ ಗೊಬ್ಬುದ ಕಲ, (ಕ್ರೀಡಾಂಗಣ)ದಲ್ಲಿ ಲಗೋರಿ, ಜುಬಿಲಿ, ಕಣ್ಣಾಮುಚ್ಚಾಲೆ, ಪಾಲೆಡ್ ಒಯ್ಪುನೆ, ಟೈರ್ ತಿರುಗಿಸುವುದು, ಗೋಲಿ ಆಟ, ಕಲ್ಲಾಟ ಸ್ಪರ್ಧೆಗಳು ನಡೆಯಲಿದೆ.
ತುಳು ಸಮ್ಮೇಳನದ ಅಂಗವಾಗಿ ಕಿರಿಯ ಪ್ರಾಥಮಿಕ ಶಾಲಾ ಹೆಣ್ಣು ಮಕ್ಕಳಿಗೆ ಕಲ್ಲಾಟ, ಕುಪ್ಪಿಗ್ ನೀರ್ ದಿಂಜಾವುನೆ, ಹುಡುಗರಿಗೆ ಸೈಕಲ್ ಚಕ್ರ, ಪಾಲೆಡ್ ಒಯ್ಪುನ, ಪ್ರೌಢಶಾಲಾ ವಿಭಾಗದ ಹುಡುಗಿಯರಿಗೆ ಸೂಜಿ ನೂಲು, ಜುಬಿಲಿ, ಗಂಡು ಮಕ್ಕಳಿಗೆ ಗೋಣಿ ಚೀಲ ಓಟ, ನಾಯಿ ಎಲು, ಮಹಿಳೆಯರಿಗೆ ಚೆನ್ನೆಮಣೆ, ಲಗೋರಿ, ಹಗ್ಗಜಗ್ಗಾಟ, ಪುರುಷರಿಗೆ ಲಗೋರಿ, ಕೊತ್ತಲಿಂಗೆ ಕ್ರಿಕೆಟ್, ಹಗ್ಗಜಗ್ಗಾಟ, ವೇಗದ ನಡಿಗೆ ಸ್ಪರ್ಧೆಗಳು ನಡೆದಿವೆ. ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದಲ್ಲಿ ತುಳುನಾಡ ಶೈಲಿಯ ಊಟೋಹಾಚಾರ ಭಾರೀ ಆಕರ್ಷಣೆ ಹಾಗೂ ಜನಮನ್ನಣೆ ಗಳಿಸಿತ್ತು. ಅದನ್ನೇ ಮಾದರಿಯಾಗಿಟ್ಟುಕೊಂಡು ಇಲ್ಲೂ ಮಾಡಲಾಗುತ್ತದೆ. ಒಟ್ಟಿನಲ್ಲಿ ತುಳುನಾಡಿನ ಜನರೆಲ್ಲರೂ ತುಳು ಸಾಹಿತ್ಯ ಸಮ್ಮೇಳನದ ಅಪೂರ್ವ ಸನ್ನಿವೇಶವನ್ನು ಸಾರ್ವಜನಿಕರು ಎದುರು ನೋಡುತ್ತಿದ್ದಾರೆ.
8ನೇ ಪರಿಚ್ಛೇದ:ಠರಾವು
ತುಳು ಸಮ್ಮೇಳನ ಎಲ್ಲ ಜಾತಿ, ಧರ್ಮದವರನ್ನು ಸೇರಿಸಿಕೊಂಡು ವೈವಿಧ್ಯಮಯವಾಗಿ ನಡೆಯಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುವ ಈ ಸಮ್ಮೇಳನದಲ್ಲಿ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡುವ ಕುರಿತಾಗಿ ಠರಾವು ಅಂಗೀಕರಿಸಿ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗುವುದು. ಸಾಹಿತ್ಯ ಅಕಾಡೆಮಿ ಹಾಗೂ ತುಳುವರ ಪಾಲ್ಗೊಳ್ಳುವಿಕೆಯಿಂದ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಸವಣೂರು ಕೆ.ಸೀತಾರಾಮ ರೈ ತಿಳಿಸಿದ್ದಾರೆ.
ಪ್ರವೀಣ್ ಚೆನ್ನಾವರ