ನಗರ : ತುಳು ಭಾಷೆಗೆ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಇದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ನ್ಯಾಯಾವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಹೇಳಿದರು.
ಶಿವಳ್ಳಿ ಸಂಪದ ಪುತ್ತೂರು ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದೊಂದಿಗೆ ಶನಿವಾರ ಪುತ್ತೂರಿನಲ್ಲಿ ನಡೆದ ಅರುಣಾಬjನ ಮಹಾಭಾರತೋ ಕೃತಿ ವಿಮರ್ಶೆ ಮತ್ತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತ್ಯ ಮತ್ತು ಸಾಮಾಜಿಕ ಚಟು ವಟಿಕೆಗಳಲ್ಲಿ ಎಲ್ಲರೂ ಒಗ್ಗೂಡಿದಾಗ ಅದಕ್ಕೆ ಸಾರ್ಥಕತೆ ಲಭಿಸುತ್ತದೆ. ತುಳುವಿಗೆ ಈ ನಾಡಿನಲ್ಲಿ ಮಾನ್ಯತೆ ಇದೆ. ತುಳುವಿಗೆ ಸ್ವತಂತ್ರ ಅಕಾಡೆಮಿ ಇದೆ. ಸಿನೆಮಾ ಮತ್ತು ನಾಟಕ ರಂಗದಲ್ಲೂ ತುಳುವಿನ ಸಮೃದ್ಧ ಕೆಲಸಗಳು ನಡೆಯುತ್ತಾ ಇವೆ ಎಂದರು.
ತುಳುಭಾಷೆ ಎಲ್ಲರಿಗೂ ಸೇರಿದ ಭಾಷೆಯಾಗಿದೆ. ಈ ಭಾಷೆಯನ್ನು ಯಾವುದೇ ಜಾತಿಯ ಅಥವಾ ಧರ್ಮದ ಮಾನದಂಡದಿಂದ ಅಳೆಯ ಲಾಗುವುದಿಲ್ಲ ಎಂದರು.
ಮುಖ್ಯ ಅತಿಥಿಯಾಗಿದ್ದ ಪಾಲ್ಗೊಂಡ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಮಾತನಾಡಿ, ಅರುಣಾಬj ಪ್ರಾಚೀನ ತುಳುವಿನಲ್ಲಿ ಸಾಹಿತ್ಯ ಸಾಧನೆ ಮಾಡಿದ ಮಹಾನ್ ವ್ಯಕ್ತಿ. ತುಳು ಭಾಷೆಯ ಪ್ರಾಚೀನ ಕೃತಿಗಳ ಮೇಲೆ ಚಿಂತನ ಮಂಥನ ನಡೆಯುವುದು ಭಾಷೆಯ ಬೆಳವಣಿಗೆಗೆ ಪೂರಕ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ರಾಧಾಕೃಷ್ಣ ಬೆಳ್ಳೂರು ಪಾಲ್ಗೊಂಡಿದ್ದರು. ಶಿವಳ್ಳಿ ಸಂಪದದ ಗೌರವಾಧ್ಯಕ್ಷ ಎನ್. ಸುಬ್ರಹ್ಮಣ್ಯಂ ಕೊಳತ್ತಾಯ, ಶಿವಳ್ಳಿ ಸಂಪದ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಲತಾ ರಾವ್ ಉಪಸ್ಥಿತರಿದ್ದರು.
ಪುತ್ತೂರು ಶಿವಳ್ಳಿ ಸಂಪದದ ಅಧ್ಯಕ್ಷ ಟಿ. ರಂಗನಾಥ ಉಂಗ್ರುಪುಳಿತ್ತಾಯ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಪಿ. ಲಕ್ಷ್ಮೀನಾರಾಯಣ ಕಡಂಬಳಿತ್ತಾಯ ವಂದಿಸಿದರು. ಕವಿತಾ ಅಡೂರು ಕಾರ್ಯಕ್ರಮ ನಿರೂಪಿಸಿದರು.