ಮಂಗಳೂರು, ಎ. 15: ವ್ಯಾವಹಾರಿಕ ಉದ್ದೇಶಕ್ಕಾಗಿ ಅನ್ಯ ಭಾಷಾ ಅಧ್ಯಯನ ಮಾಡಿದರೂ ನೆಲದ ತುಳು ಭಾಷೆಯ ಕುರಿತ ಪ್ರೀತಿ ನಮ್ಮಲ್ಲಿ ಇಮ್ಮಡಿಯಾಗಿರಬೇಕು. ಇದರಿಂದ ತುಳುನಾಡಿನ ಶ್ರೀಮಂತಿಕೆ ಇನ್ನಷ್ಟು ಸಮೃದ್ಧಗೊಳ್ಳಲು ಸಾಧ್ಯ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಹೇಳಿದರು.
ತುಳು ಕೂಟ ಕುಡ್ಲ ಮಂಗಳೂರು ವತಿಯಿಂದ ಶ್ರೀ ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ರವಿವಾರ ಸಂಜೆ ನಡೆದ “ಬಿಸು ಪರ್ಬ-2018′ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತುಳುನಾಡು ವಿವಿಧ ಸಂಸ್ಕೃತಿಯ ತವರು. ಇಲ್ಲಿನ ಎಲ್ಲ ವಿಧದ ಆಚರಣೆ, ನಂಬಿಕೆಗಳು ತುಳುನಾಡಿನ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತವೆ. ಆದರೆ ಪ್ರಸ್ತುತ ನಗರೀಕರಣದ ನೆಪದಲ್ಲಿ ತುಳು ಸಂಸ್ಕೃತಿ, ಆಚರಣೆಗಳನ್ನು ಮರೆಯುವ ಕಾಲಘಟ್ಟದಲ್ಲಿದ್ದೇವೆ. ಇಂತಹ ಸಂದರ್ಭ ಎದುರಾಗಬಾರದು. ತುಳು ಭಾಷಾ ಸಂಬಂಧಿ ಹಾಗೂ ಸಂಸ್ಕೃತಿ ಪೂರಕ ಚಟುವಟಿಕೆಗಳು ನಿತ್ಯ ನಿರಂತರ ನಡೆಯಬೇಕು ಎಂದರು.
ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ. ರಮಾನಾಥ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಬೋಳಾರ ಹಳೆಕೋಟೆ ಶ್ರೀ ಮಹಿಷಮರ್ದಿನಿ ಮಾರಿಯಮ್ಮ ದೇವಸ್ಥಾನದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಮುಖ್ಯ ಅತಿಥಿಯಾಗಿದ್ದರು. ತುಳು ಕೂಟದ ಅಧ್ಯಕ್ಷ ಬಿ. ದಾಮೋದರ ನಿಸರ್ಗ ಸ್ವಾಗತಿಸಿದರು.
ಪ್ರಶಸ್ತಿ ಪ್ರದಾನ
ಶ್ರೀ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಸಂಸ್ಮರಣೆಯ 42ನೇ ವರ್ಷದ ತುಳು ನಾಟಕ ಕೃತಿ ಪ್ರಶಸ್ತಿಯನ್ನು ಇದೇ ವೇಳೆ ಪ್ರದಾನ ಮಾಡಲಾಯಿತು. “ರಂಗ್ ಮಾಜಿನಗ’ ಕೃತಿಗೆ ರವಿ ಕುಮಾರ್ ಕಡೆಕಾರ್ ಉಡುಪಿ, “ಸತ್ಯ ಗೊತ್ತಾನಗ’ ಕೃತಿಗೆ ಶಶಿಧರ್ ಕೆ. ಬಂಡಿತ್ತಡ್ಕ, ಕನ್ಯಾನ ಹಾಗೂ “ಸ್ವಾಮಿ ಭೂಮಿ’ ಕೃತಿಗೆ ವಿಜಯಾ ಬಿ. ಶೆಟ್ಟಿ ಸಾಲೆತ್ತೂರು
ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.