Advertisement
ಬಿಜೆಪಿ ಸರಕಾರದ ಅವಧಿಯಲ್ಲಿ ಕರಾವಳಿಗರೇ ಆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಮೇಲೆ ತುಳುನಾಡಿಗರಿಗೆ ಅಪಾರ ನಿರೀಕ್ಷೆ ಇತ್ತು. ತುಳುವನ್ನು 2ನೇ ಅಧಿಕೃತ ಭಾಷೆಯಾಗಿ ಘೋಷಿಸುವ ಭರವಸೆಯನ್ನೂ ನೀಡಿದ್ದರು. ಆದರೆ ಈಡೇರಲಿಲ್ಲ. ಇದೀಗ ಕಾಂಗ್ರೆಸ್ ನೂತನ ಸರಕಾರ ರಚನೆಯಾಗಿದ್ದು, ಮಂತ್ರಿಮಂಡಲವೂ ಅಸ್ತಿತ್ವಕ್ಕೆ ಬಂದಿದೆ. ಈಗ ಮತ್ತೆ ತುಳುನಾಡಿಗರ ಕೂಗು ಮುನ್ನೆಲೆಗೆ ಬಂದಿದೆ.
ತುಳು ರಾಜ್ಯ ಭಾಷೆಯಾಗಬೇಕು ಎಂಬ ಆಗ್ರಹಿಸಿದವರಲ್ಲಿ ಈಗ ಸ್ಪೀಕರ್ ಆಗಿರುವ ಯು.ಟಿ. ಖಾದರ್ ಕೂಡ ಒಬ್ಬರು. ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ತುಳು ಭಾಷೆ ಸ್ಥಾನಮಾನಕ್ಕೆ ಒತ್ತಾಯ ಮಾಡಿ “ತುಳು ಭಾಷೆ ಜಿಲ್ಲೆಯ ದೈವ ದೇವರು ಮಾತನಾಡುವ ಭಾಷೆಯಾಗಿದೆ. ಈ ಭಾಷೆಗೆ ಅದರದ್ದೇ ಆದ ಇತಿಹಾಸವಿದೆ, ಸಾಂಸ್ಕೃತಿಕ ನೆಲೆಗಟ್ಟು, ಸ್ವಂತ ಅಕಾಡೆಮಿ ಇದೆ. ರಾಜ್ಯ ಸರಕಾರ ತುಳು ಭಾಷೆಯನ್ನು ರಾಜ್ಯ ಭಾಷೆಯನ್ನಾಗಿ ಘೋಷಣೆ ಮಾಡಬೇಕು. ಅನೇಕ ವರ್ಷಗಳ ಇತಿಹಾಸ, ಸಾಹಿತ್ಯ, ಲಿಪಿ ಇರುವ ತುಳು ಭಾಷೆ ಅಧ್ಯಯನಕ್ಕೆ ಸಮಿತಿ ರಚಿಸಿ ಬಳಿಕ ಘೋಷಣೆ ಸರಿಯಲ್ಲ’ ಎಂದಿದ್ದರು.
Related Articles
ದೇಶದ 22 ಭಾಷೆಗಳು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಂಡಿದ್ದು, ಇನ್ನೂ 44 ಭಾಷೆಗಳಿಂದ ಬೇಡಿಕೆ ಇದೆ. ಅದರಲ್ಲಿ ರಾಜ್ಯದ ತುಳು, ಕೊಡವ ಭಾಷೆಯೂ ಸೇರಿವೆ. ಅದಕ್ಕೂ ಮುನ್ನ ತುಳು ರಾಜ್ಯ ಭಾಷೆಯಾಗಲಿ ಎಂಬ ಅಭಿಯಾನ ಕೆಲವು ವರ್ಷಗಳಿಂದ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ 5 ವರ್ಷಗಳ ಹಿಂದೆಯೇ ತುಳು ಸಾಹಿತ್ಯ ಅಕಾಡೆಮಿಯಿಂದ ಕರಾವಳಿ ಭಾಗದ ಶಾಸಕರಿಗೆ ಪತ್ರ ಬರೆಯಲಾಗಿತ್ತು. ಬಳಿಕ ಅನೇಕ ಸಂಘಟನೆಗಳು ಮನವಿ ಮಾಡಿದ್ದು, ಟ್ವೀಟ್ ಅಭಿಯಾನಗಳು ನಡೆದಿವೆ. ಕೆಲವು ಜನಪ್ರತಿನಿಧಿಗಳು ಈ ಕುರಿತು ವಿಧಾನಸಭೆಯಲ್ಲಿ ಧ್ವನಿ ಎತ್ತಿದ್ದಾರೆ. ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ.
Advertisement
ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯೆಂದು ಘೋಷಿಸುವ ಸಲುವಾಗಿ ಸಮಿತಿಯು ಈಗಾಗಲೇ ವರದಿ ಸಲ್ಲಿಸಿದ್ದು, ಕಾನೂನು ಇಲಾಖೆಗೆ ಕಳುಹಿಸಲಾಗಿದೆ. ಅವರ ಕಡೆಯಿಂದ ಅಭಿಪ್ರಾಯ ಬಂದ ಬಳಿಕ ವರದಿ ಕ್ಯಾಬಿನೆಟ್‌ಗೆ ಬರಬೇಕಿದೆ. ಹೊಸ ಸರಕಾರ ಈ ಎಲ್ಲ ಪ್ರಕ್ರಿಯೆಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಆಗ್ರಹಿಸುತ್ತೇನೆ.– ಸುನಿಲ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಜಿ ಸಚಿವ