Advertisement

ತುಳುಕೂಟ ಐರೋಲಿ: ಸರಣಿ ಯಕ್ಷಗಾನ ಸಮಾರೋಪ

10:35 AM Oct 25, 2017 | |

ನವಿಮುಂಬಯಿ: ತುಳುಕೂಟ ಐರೋಲಿಯು ಸಮಸ್ತ ತುಳುವರ ಸಂಸ್ಥೆ ಯಾಗಿದೆ. ಸಂಸ್ಥೆಯು ದಶಮಾನೋತ್ಸವ ಸಂಭ್ರಮದಲ್ಲಿದ್ದು, ಅದಕ್ಕಾಗಿ ಹಲವು ಯೋಜನೆಗಳು ನಮ್ಮ ಮುಂದಿದೆ. ಪ್ರಮುಖವಾಗಿ 50 ಲಕ್ಷ ರೂ. ಗಳನ್ನು ಸಂಗ್ರಹಿಸಿ ಮಕ್ಕಳ ಶೈಕ್ಷಣಿಕ ಕಾರ್ಯಕ್ಕೆ ವಿನಿಯೋಗಿಸುವ ಯೋಜನೆಯು ನಮ್ಮದಾಗಿದೆ. ಈಗಾಗಲೇ 30 ಲಕ್ಷ ರೂ.ಗಳನ್ನು ಸಂಗ್ರಹಿಸಲಾಗಿದ್ದು, ಇನ್ನೂ 20 ಲಕ್ಷ ರೂ. ಗಳ ಸಂಗ್ರಹವಾಗಬೇಕಿದೆ. ತುಳು-ಕನ್ನಡಿಗರು ಈ ನಮ್ಮ ಕನಸಿನ ಯೋಜನೆಗೆ ಸಹಕರಿಸಬೇಕು. ಮುಂದಿನ ಜನವರಿ 7ರಂದು ಸಂಸ್ಥೆಯ ದಶಮಾನೋತ್ಸವ ಸಂಭ್ರಮವು ಅದ್ದೂರಿಯಾಗಿ ಜರಗಲಿದ್ದು, ತುಳು-ಕನ್ನಡಿಗರೆಲ್ಲರ ಒಮ್ಮತದ ಸಹಕಾರ ನಮ್ಮೊಂದಿಗಿರಲಿ ಎಂದು ತುಳುಕೂಟ ಐರೋಲಿಯ ಅಧ್ಯಕ್ಷ ಹರೀಶ್‌ ಶೆಟ್ಟಿ ಪಡುಬಿದ್ರೆ ನುಡಿದರು.

Advertisement

ಅ. 15ರಂದು ಸಂಜೆ ಘನ್ಸೋಲಿಯ ಶ್ರೀ ಮೂಕಾಂಬಿಕ ಮಂದಿರದಲ್ಲಿ ತುಳುಕೂಟ ಐರೋಲಿ ಇದರ ಸಾಂಸ್ಕೃತಿಕ ಸಮಿತಿಯ ಆಶ್ರಯದಲ್ಲಿ ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ತವರೂರ ಕಲಾವಿದರ ಕೂಡುವಿಕೆಯಲ್ಲಿ ಜರಗಿದ ತ್ರಿಜನ್ಮ ಮೋಕ್ಷ ಯಕ್ಷಗಾನ ಪ್ರದರ್ಶನದ ಮಧ್ಯೆ ಜರಗಿದ ಸರಣಿ ಯಕ್ಷಗಾನ ಪ್ರದರ್ಶನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತುಳುಕೂಟ ಐರೋಲಿಯ ದಶಮಾನೋತ್ಸವ ಸಂಭ್ರಮದ ಯಶಸ್ಸಿಗೆ ಒಗ್ಗಟ್ಟಿನಿಂದ ಮುಂದುವರಿಯೋಣ ಎಂದರು.

ಗೌರವ ಅತಿಥಿಯಾಗಿ ಪಾಲ್ಗೊಂಡ ಹೆಗ್ಗಡೆ ಸೇವಾ ಸಂಘ ಮುಂಬಯಿ ಇದರ ಮಾಜಿ ಕಾರ್ಯದರ್ಶಿ ಪ್ರಭಾಕರ ಎಸ್‌. ಹೆಗ್ಡೆ ಅವರು ಮಾತನಾಡಿ, ಕಳೆದ ಒಂದು ವಾರದಿಂದ ನವಿ ಮುಂಬಯಿ ಪರಿಸರದಲ್ಲಿ ಮೂರು ಯಕ್ಷಗಾನ ತಂಡಗಳಿಂದ ಯಕ್ಷಗಾನ ಸುಗ್ಗಿಯೇ ನಡೆದಿದೆ. ಎಲ್ಲ ಕಡೆಯ ಪ್ರದರ್ಶನಗಳಿಗೂ ಕಲಾರಸಿಕರ ಕೊರತೆ ಇರಲಿಲ್ಲ. ಆದ್ದರಿಂದ ಯಕ್ಷಗಾನಕ್ಕೆ ಭವಿಷ್ಯವಿಲ್ಲ ಎಂಬ ಮಾತು ಸುಳ್ಳಾಗಿದೆ ಎಂದು ನುಡಿದು, ತುಳುಕೂಟ ಐರೋಲಿಯು ಯಕ್ಷಗಾನ ಕಲೆಗೆ ನೀಡುತ್ತಾ ಬಂದಿರುವ ವಿಶೇಷ ಸಹಕಾರವನ್ನು ಶ್ಲಾಘಿಸಿದರು.

ಬಂಟರ ಸಂಘ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಸಮನ್ವಯಕ ಭಾಸ್ಕರ್‌ ಶೆಟ್ಟಿ ತಾಳಿಪಾಡಿಗುತ್ತು ಮಾತನಾಡಿ, ಮುಂಬಯಿಯಲ್ಲಿ ಅತೀ ಹೆಚ್ಚು ಯಕ್ಷಗಾನ ಪ್ರದರ್ಶನ ನಡೆಯುವ ಸ್ಥಳ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಸನ್ನಿಧಾನ ಎನ್ನಲು ಹೆಮ್ಮೆ ಎನಿಸುತ್ತಿದೆ. ಇಲ್ಲಿ ವರ್ಷಕ್ಕೆ 80ಕ್ಕೂ ಅಧಿಕ ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದರೆ, ಅದಕ್ಕೆ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರ ಸಹಕಾರ ಅವಿಸ್ಮರಣೀಯವಾಗಿದೆ. ಅದೇ ರೀತಿಯಲ್ಲಿ ತುಳುಕೂಟ ಐರೋಲಿ ಸಂಸ್ಥೆ ಕೂಡಾ ಹರೀಶ್‌ ಶೆಟ್ಟಿ ಅವರ ಮುಂದಾಳತ್ವದಲ್ಲಿ ಉತ್ತಮ ಕೆಲಸ ಮಾಡುತ್ತಾ ಬಂದಿದೆ ಎಂದರು.

ಶ್ರೀದೇವಿ ಕ್ಯಾಟರರ್ನ ರಾಜೀವ್‌ ಶೆಟ್ಟಿ ಅವರು ಮಾತನಾಡಿ, ಯಕ್ಷಗಾನವನ್ನು ಬಾಲ್ಯದಿಂದ ತನ್ನ ತವರೂರಾದ ಮಂದಾರ್ತಿ ಕ್ಷೇತ್ರದಿಂದ ಕಂಡುಕೊಂಡಿದ್ದೇನೆ. ಮಂದಾರ್ತಿ ಮೇಳ ಐದು ಮೇಳಗಳೊಂದಿಗೆ ಕಲಾಸೇವೆಯಲ್ಲಿ ನಿರತವಾಗಿದೆ ಎನ್ನಲು ಹೆಮ್ಮೆಯಾಗುತ್ತಿದೆ. ಯಕ್ಷಗಾನದಲ್ಲಿ ಹೆಚ್ಚು ಹೆಚ್ಚು ಕಲಾವಿದರು ಹುಟ್ಟಿ ಬರಲಿ. ಯಕ್ಷಗಾನವನ್ನು ಉಳಿಸಿ-ಬೆಳೆಸುವಲ್ಲಿ ಎಲ್ಲರ ಸಹಕಾರವಿರಲಿ ಎಂದರು.

Advertisement

ಈ ಸಂದರ್ಭದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ಮುಂದಾಳು ಬಾಲಕೃಷ್ಣ ಶೆಟ್ಟಿ ಅಜೆಕಾರು, ಕಟೀಲು ಮೇಳದ ಜನಪ್ರಿಯ  ಕಲಾವಿದ ಹರಿನಾರಾಯಣ ಭಟ್‌ ಎಡನೀರು ಹಾಗೂ ಅನ್ನದಾನ ಪ್ರಾಯೋಜಕತ್ವವನ್ನು ವಹಿಸಿದ್ದ ಅನಿಲ್‌ ಶೆಟ್ಟಿ ಪಾಂಗಾಳ ಅವರನ್ನು ತುಳುಕೂಟ ಐರೋಲಿ ವತಿಯಿಂದ ಗಣ್ಯರ ಉಪಸ್ಥಿತಿಯಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು.
ವೇದಿಕೆಯಲ್ಲಿ ಅತಿಥಿಗಳಾಗಿ ಕಲಾಪೋಷಕ, ಉದ್ಯಮಿ ಕಾಪು ಬೈರು
ಗುತ್ತಿನ ಗುತ್ತಿನಾರ್‌ ರಮೇಶ್‌ ಎಸ್‌. ಶೆಟ್ಟಿ, ಹೊಟೇಲ್‌ ಉದ್ಯಮಿ ಸತೀಶ್‌
ಶೆಟ್ಟಿ ಮೂಡುಕೊಟ್ರಪಾಡಿ, ನೊರ್ಡಿಕ್‌ ಲಾಜಿಸ್ಟಿಕ್‌ನ ಆಡಳಿತ ನಿರ್ದೇಶಕ ಪ್ರಮೋದ್‌ ಕರ್ಕೇರ ಅಡ್ವೆ, ದೇವಿ ಹಾಸ್ಪಿಟಾಲಿಟಿಯ ಅಶೋಕ್‌ ಶೆಟ್ಟಿ, ತುಳುಕೂಟ ಐರೋಲಿಯ ಪದಾಧಿಕಾರಿಗಳಾದ ಕೆ. ಕೆ. ಹೆಬ್ಟಾರ್‌, ನಾಗೇಶ್‌ ಶೆಟ್ಟಿ, ರಾಜೇಶ್‌ ಶೆಟ್ಟಿ,ಬಾಲಕೃಷ್ಣ ಶೆಟ್ಟಿ ಕಟೀಲು, ಕಳತ್ತೂರು ಅಮರ್‌ನಾಥ್‌ ಶೆಟ್ಟಿ, ಪ್ರಕಾಶ್‌ ಆಳ್ವ, ಗಂಗಾಧರ ಬಂಗೇರ ಮೊದಲಾದವರು ಉಪಸ್ಥಿತರಿದ್ದರು. ಅತಿಥಿ-
ಗಣ್ಯರನ್ನು ಪದಾಧಿಕಾರಿಗಳು ಗೌರವಿಸಿದರು.

ತುಳುಕೂಟ ಐರೋಲಿಯ ಮಾಜಿ ಅಧ್ಯಕ್ಷ ಜಗದೀಶ್‌ ಶೆಟ್ಟಿ ನಾಡಾಜೆಗುತ್ತು ಅವರು ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ಗಂಗಾಧರ ಬಂಗೇರ ಅವರು ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ತ್ರಿಜನ್ಮ ಮೋಕ್ಷ ಯಕ್ಷಗಾನ ಪ್ರದರ್ಶನಗೊಂಡಿತು. ಕೊನೆಯಲ್ಲಿ ಜಗದೀಶ್‌ ಶೆಟ್ಟಿ ಮೂಲ್ಕಿ ಮತ್ತು ಅನಿಲ್‌ ಶೆಟ್ಟಿ ಪಾಂಗಾಳ ಅವರ ಸೇವಾರ್ಥವಾಗಿ ಅನ್ನದಾನ ನಡೆಯಿತು.

ತುಳುಕೂಟ ಐರೋಲಿಯು ಕಳೆದ 10 ವರ್ಷಗಳಿಂದ ನಿರಂತರವಾಗಿ ಉತ್ತಮ ಕಾರ್ಯವನ್ನು ಮಾಡುವುದರ ಜೊತೆಗೆ ಯಕ್ಷಗಾನ ಕಲೆಗೆ ವಿಶೇಷ ಪ್ರೋತ್ಸಾಹ ನೀಡುತ್ತಿದೆೆ. ತುಳು ಭಾಷೆಯನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನಶೀಲರಾಗಿರುವುದು ಅಭಿನಂದನೀಯ. ದಶಮಾನೋತ್ಸವ ಸಂಭ್ರಮದಲ್ಲಿರುವ ಈ ಸಂಸ್ಥೆ ಸಮಾಜಕ್ಕೆ ವಿಶೇಷ ಕೊಡುಗೆ ನೀಡುವಲ್ಲೂ ಯಶಸ್ವಿಯಾಗಿದೆ. ಸಂಸ್ಥೆಯ ಕಾರ್ಯಕ್ರಮಗಳಿಗೆ ಶ್ರೀ ಮೂಕಾಂಬಿಕೆಯ ಅನುಗ್ರಹ ಸದಾಯಿರಲಿ 
 – ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ (ಅಧ್ಯಕ್ಷರು: ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರ).

Advertisement

Udayavani is now on Telegram. Click here to join our channel and stay updated with the latest news.

Next