Advertisement

ತುಳುಕೂಟ ಐರೋಲಿ ದಶಮಾನೋತ್ಸವ ಸಮಾಲೋಚನ ಸಭೆ

04:58 PM Mar 22, 2017 | Team Udayavani |

ನವಿಮುಂಬಯಿ: ಕಳೆದ ಒಂಭತ್ತು ವರ್ಷಗಳು ಒಂಭತ್ತು ತಿಂಗಳಂತೆ ಭಾಸವಾಗುತ್ತಿದೆ. ನಿನ್ನೆ ಸಸಿಯಾಗಿ ನಿಂತಿದ್ದ ತುಳುಕೂಟ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಇದಕ್ಕೆ ಮುಖ್ಯ ಕಾರಣ ತುಳುಕೂಟದ ಸದಸ್ಯರ ಒಕ್ಕೂಟದ ಆತ್ಮೀಯತೆ ಹಾಗೂ ಅವರ ಹೃದಯ ವೈಶಾಲ್ಯ. ಮನುಷ್ಯನು ತನ್ನ ಉತ್ತಮ ಕಾರ್ಯದ ಮೂಲಕ ತಾನು ಹಾಗೂ ತನ್ನ ಪರಿವಾರದೊಂದಿಗೆ ಶ್ರೇಷ್ಠನಾಗುತ್ತಾನೆ. ತನ್ನ ಒಳ್ಳೆಯ ಕೆಲಸ ಕಾರ್ಯಗಳಿಂದ ಸಮಾಜಕ್ಕೆ ಆದರ್ಶಪ್ರಾಯನಾಗಿ ಬದುಕುತ್ತಾನೆ. ತುಳು

Advertisement

ಕೂಟದಂತಹ ಸಮಾಜಪರ ಕಾರ್ಯಕ್ರಮಗಳನ್ನು ಮಾಡುವ ಸಂಸ್ಥೆಗೆ ತಮ್ಮ ಕೊಡುಗೆಯನ್ನು ನೀಡುತ್ತಾನೆ. ಸಂಸ್ಥೆಯ ಅಧ್ಯಕ್ಷ ಹರೀಶ್‌ ಶೆಟ್ಟಿ ಪಡುಬಿದ್ರೆ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ವಿದ್ಯಾನಿಧಿ ಕುಂಭದ ಯೋಜನೆಯು ನಿಜವಾಗಿಯೂ ಸದುದ್ದೇಶ ಪೂರಿತವಾಗಿದೆ. ಬಡ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿ, ಅವರ  ಹನ್ನೆರಡನೇ ತರಗತಿಯವರೆಗಿನ ವ್ಯಾಸಂಗದ ಶುಲ್ಕವನ್ನು ಭರಿಸುವುದು ಉತ್ತಮ ಕಾರ್ಯವಾಗಿದೆ. ಈಗಾಗಲೇ ಈ ಯೋಜನೆಯಡಿ ಸುಮಾರು 25 ಲಕ್ಷ ರೂ. ಗಳನ್ನು ಸಂಗ್ರಹಿಸಲಾಗಿರುವುದು ಹೆಮ್ಮೆಯ ವಿಷಯವಾಗಿದೆ. ಸಂಸ್ಥೆಯ ಎಲ್ಲಾ ಸದಸ್ಯರು ಈ ಯೋಜನೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಎಂದು ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರು ನುಡಿದರು.

ಮಾ. 19ರಂದು ಸಂಜೆ ಐರೋಲಿಯ ಹೆಗ್ಗಡೆ ಭವನದಲ್ಲಿ ತುಳುಕೂಟ ಐರೋಲಿ ವತಿಯಿಂದ ನಡೆದ ಸಂಸ್ಥೆಯ ದಶಮಾನೋತ್ಸವ ಸಮಾಲೋಚನ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ದಶಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರನ್ನಾಗಿ ಚಂದ್ರಹಾಸ ರೈ ಬೊಲಾ°ಡುಗುತ್ತು ಅವರನ್ನು ಆಯ್ಕೆ ಮಾಡಿರುವುದು ಸಂತಸ ತಂದಿದೆ. ಅವರೋರ್ವ ದಾನಿಯಾಗಿ, ಅನುಭವಿ ಸಮಾಜ ಸೇವಕರಾಗಿದ್ದು, ಈ ಗೌರವವನ್ನು ಅವರು ಯಶಸ್ವಿಯಾಗಿ ಅಲಂಕರಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ನುಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತುಳುಕೂಟ ಐರೋಲಿಯ ಅಧ್ಯಕ್ಷ ಹರೀಶ್‌ ಶೆಟ್ಟಿ ಪಡುಬಿದ್ರೆ ಅವರು ಮಾತನಾಡಿ, ಕಳೆದ ಒಂಭತ್ತು ವರ್ಷಗಳಿಂದ ವಿವಿಧ ಕಾರ್ಯಚಟುವಟಿಕೆಗಳನ್ನು ಮಾಡಿ, ಅಪಾರ ಜನಮನ್ನಣೆಯನ್ನು ಪಡೆದು ಇಂದು ದಶಮಾನೋತ್ಸವ ಸಂಭ್ರಮದಲ್ಲಿರುವ ತುಳುಕೂಟಕ್ಕೆ ನಿವಾಜದ ಸಹಾಯ ಕಾರ್ಯಕಾರಿ ಸಮಿತಿಯ ಸದಸ್ಯರು, ಹೃದಯವಂತ ದಾನಿಗಳಿಂದ ಲಭಿಸಿದೆ. ಸಂಸ್ಥೆಯು ಇತರ ಜಾತ್ಯತೀಯ ಸಂಸ್ಥೆಗಳಿಗೆ ಮಾದರಿಯಾಗಿದೆ. ಮಾಜಿ ಅಧ್ಯಕ್ಷರಾದ ಮಧು ಎನ್‌. ಕೋಟ್ಯಾನ್‌, ಲ್ಯಾನ್ಸಿ ಡಿಕುನ್ಹಾ, ಪ್ರಕಾಶ್‌ ಆಳ್ವ, ಜಗದೀಶ್‌ ಶೆಟ್ಟಿ ನಾಡಾಜೆಗುತ್ತು  ಅವರ ಮುನ್ನೋಟದ ಫಲ ಇಂದು ದಶಮಾನೋತ್ಸವ ಸಂಭ್ರಮವಾಗಿದೆ. ವಿದ್ಯಾನಿಧಿ ಕುಂಭ ಯೋಜನೆಯ ಸಫಲತೆಗಾಗಿ ದುಡಿಯುತ್ತಿರುವ ಎಲ್ಲಾ ಸದಸ್ಯರಿಗೂ ವಿಶೇಷವಾಗಿ ಹಿರಿಯ ಸದಸ್ಯರು, ಮಹಿಳಾ ವಿಭಾಗದವರ ಶ್ರಮಕ್ಕೆ ಋಣಿಯಾಗಿದ್ದೇನೆ. ಮುಂದಿನ ಕಾಲಾವಧಿಯಲ್ಲಿ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲು ಎಲ್ಲರ ಸಹಕಾರವಿರಲಿ ಎಂದರು.

ನೂತನ ಗೌರವಾಧ್ಯಕ್ಷರಾಗಿ ನೇಮಕಗೊಂಡ ಬೊಲಾ°ಡುಗುತ್ತು ಚಂದ್ರಹಾಸ ರೈ ಅವರು ಮಾತನಾಡಿ, ನಾನು ಅನೇಕ ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಕೆಲಸದ ಒತ್ತಡದಲ್ಲಿದ್ದರೂ ಕೂಡಾ ನಮ್ಮ ಪ್ರಿಯ ಸಂಸ್ಥೆಯಾಗಿರುವ ತುಳುಕೂಟದ ಮನವಿಯನ್ನು ಪರಿಗಣಿಸಿ ಈ ಪದವಿಯನ್ನು ಸ್ವೀಕರಿಸಿದ್ದೇನೆ. ದಶಮಾನೋತ್ಸವದ ಯಶಸ್ಸಿಗಾಗಿ ಪ್ರಯತ್ನಿಸುತ್ತೇನೆ. ಮಹಿಳೆಯರು ಕೂಡಾ ಇಲ್ಲಿ ವಿದ್ಯಾನಿಧಿಗೆ ಸಹಕರಿಸುತ್ತಿರುವುದನ್ನು ಕಂಡು ಸಂತೋಷವಾಯಿತು. ದಶಮಾನೋತ್ಸವ ಸಂದರ್ಭದಲ್ಲಿ ತುಳುನಾಡಿನ ಏಳ್ಗೆಗಾಗಿ ಶ್ರಮಿಸಿದ ತುಳುವರ ಭಾವಚಿತ್ರ ಅಥವಾ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿ ಅವರ ಕೊಡುಗೆಯನ್ನು ಸ್ಮರಿಸುವ ಪ್ರಯತ್ನ ಮಾಡೋಣ. ತಮ್ಮೆಲ್ಲರ ಸಹಕಾರದಿಂದ ದಶಮಾನೋತ್ಸವ ಉತ್ತಮ ರೀತಿಯಿಂದ ಸಾಗಲಿ ಎಂದರು.

Advertisement

ಮಾಜಿ ಅಧ್ಯಕ್ಷರಾದ ಲ್ಯಾನ್ಸಿ ಕುನ್ಹಾ, ಜಗದೀಶ್‌ ಶೆಟ್ಟಿ ನಾಡಾಜೆಗುತ್ತು ಅವರು ವಿದ್ಯಾನಿಧಿಯ ದೇಣಿಗೆ ಸಂಗ್ರಹದ ಬಗ್ಗೆ ಮಾಹಿತಿ ನೀಡಿದರು. ಶ್ರೀ ಶನೀಶ್ವರ ಮಂದಿರ ನೆರೂಲ್‌ ಅಧ್ಯಕ್ಷ ಧರ್ಮದರ್ಶಿ ರಮೇಶ್‌ಎನ್‌. ಪೂಜಾರಿ, ಶ್ರೀ ಮಣಿಕಂಠ ಸೇವಾ ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷ ಸಂಜೀವ ಎನ್‌. ಶೆಟ್ಟಿ, ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಮಾಜಿ ಅಧ್ಯಕ್ಷ ಶ್ಯಾಮ್‌ ಎನ್‌. ಶೆಟ್ಟಿ, ರಂಗಭೂಮಿ ಫೈನ್‌ಆರ್ಟ್ಸ್ ಅಧ್ಯಕ್ಷ ವಿ. ಕೆ. ಸುವರ್ಣ ಅವರು ಮಾತನಾಡಿ ಶುಭ ಹಾರೈಸಿದರು.

ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಅಮರನಾಥ್‌ ಶೆಟ್ಟಿ ಕಳತ್ತೂರು ದಶಮಾನೋತ್ಸವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕೋಶಾಧಿಕಾರಿ ಗಂಗಾಧರ ಬಂಗೇರ ಬಂಟ್ವಾಳ ಲೆಕ್ಕಪತ್ರ ಮಂಡಿಸಿದರು. ವೇದಿಕೆಯಲ್ಲಿ ಕೆ. ಕೆ. ಹೆಬ್ಟಾರ್‌, ನಾಗೇಶ್‌ ಶೆಟ್ಟಿ ಬೈಕಾಡಿ ಹೆದ್ದಾರಿಮನೆ, ಜಗದೀಶ್‌ ಶೆಟ್ಟಿ ನಾಡಾಜೆಗುತ್ತು, ರಾಜೇಶ್‌ ಬಿ. ಶೆಟ್ಟಿ, ವಿಜಯ ಕೆ. ಶೆಟ್ಟಿ, ಉದಯ ಎನ್‌. ಶೆಟ್ಟಿ ಅವರು ಉಪಸ್ಥಿತರಿದ್ದರು. ಸನ್ನಿಧಿ ವಿ. ಶೆಟ್ಟಿ ಪ್ರಾರ್ಥನೆಗೈದರು. ರಮೇಶ್‌ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. 

ಸಭೆಯಲ್ಲಿ ಬಂಟರ ಸಂಘ ಮುಂಬಯಿ ಜ್ಞಾನ ಮಂದಿರದ ಕಾರ್ಯಾಧ್ಯಕ್ಷ, ಉದ್ಯಮಿ ಚಂದ್ರಹಾಸ ರೈ ಬೊಲಾ°ಡುಗುತ್ತು ಅವರನ್ನು ದಶಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರನ್ನಾಗಿ ನೇಮಿಸಲಾಯಿತು. ವಿಜಯ ಕೆ. ಶೆಟ್ಟಿ ಅವರನ್ನು ಸಂಚಾಲಕರನ್ನಾಗಿ ಹಾಗೂ ಉದಯ ಎನ್‌. ಶೆಟ್ಟಿ ಅಂಗಡಿಗುತ್ತು ಅವರನ್ನು ಲೆಕ್ಕಪತ್ರ ಮೇಲ್ವಿಚಾರಕರನ್ನಾಗಿ ನೇಮಿಸಲಾಯಿತು. ನೂತನ ಗೌರವಾಧ್ಯಕ್ಷರನ್ನು ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರು ಸ್ವಾಗತಿಸಿ ಗೌರವಿಸಿ ಅಭಿನಂದಿಸಿದರು. ವಿಜಯ ಕೆ. ಶೆಟ್ಟಿ ಹಾಗೂ ಉದಯ ಎನ್‌. ಶೆಟ್ಟಿ ಅವರನ್ನು ಗೌರವಿಸಿ ಅಭಿನಂದಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next