Advertisement

ತುಳು ಕನ್ನಡಿಗನ ‘ಸೈಕಲ್‌ ಸೇವೆ’

12:40 PM May 09, 2018 | |

ಮಣಿಪಾಲ: ಭಾಂಡೂಪ್‌ನ ಸೊಸೈಟಿಗಳಲ್ಲಿ ಮಕ್ಕಳು ಬಳಸಿದ ಬಳಿಕ ಮೂಲೆಪಾಲಾಗಿ ತುಕ್ಕು ಹಿಡಿಯುತ್ತಿದ್ದ ಸೈಕಲ್‌ ಗಳನ್ನು ಸಂಗ್ರಹಿಸಿ, ದುರಸ್ತಿ ಮಾಡಿ ಮುರ್‌ಬಾಡ್‌ನ‌ ಗ್ರಾಮೀಣ ಮಕ್ಕಳಿಗೆ ಕೊಡುಗೆಯಾಗಿ ನೀಡುವ ಮೂಲಕ ತುಳು ಕನ್ನಡಿಗ, ಕಲ್ಯಾಣ್‌ ನಿವಾಸಿ ನಿರಂಜನ್‌ ಸುವರ್ಣ ಮತ್ತು ತಂಡ ಮುಗ್ಧ ಮಕ್ಕಳಲ್ಲಿ ಮಂದಹಾಸ ಬೀರುವಂತೆ ಮಾಡಿದೆ.

Advertisement

ಮಕ್ಕಳು ಬೆಳೆದ ಬಳಿಕ ನಿರುಪಯುಕ್ತವಾಗಿದ್ದ ಸೈಕಲ್‌ಗ‌ಳು ಬಿಸಿಲು, ಮಳೆಗೆ ಮೈಯೊಡ್ಡಿ ಬಿದ್ದಿರುವುದನ್ನು ಗಮನಿಸಿದ ನಿರಂಜನ್‌ ಮತ್ತು ತಂಡದವರು, ಈ ಸೈಕಲ್‌ಗ‌ಳನ್ನು ದೂರದಿಂದ ಶಾಲೆಗೆ ನಡೆದು ಬರುವ ಮಕ್ಕಳಿಗೆ ಒದಗಿಸುವ ಯೋಜನೆ ಮಾಡಿದ್ದಾರೆ. ಇದಕ್ಕೆ ಹೌಸಿಂಗ್‌ ಸೊಸೈಟಿಗಳ ಸದಸ್ಯರಿಂದಲೂ ಉತ್ತಮ ಸ್ಪಂದನೆ ದೊರೆತಿದ್ದು, ಅವರು ತಮ್ಮಲ್ಲಿದ್ದ ಸೈಕಲ್‌ಗ‌ಳನ್ನು ಉದಾರವಾಗಿ ನೀಡಿದ್ದಾರೆ.

2 ಶಾಲೆಗಳ ಆಯ್ಕೆ: ಸೈಕಲ್‌ಗ‌ಳನ್ನು ದುರಸ್ತಿಗೊಳಿಸಿ ನೀಡುವುದಕ್ಕೆ ನಿರಂಜನ್‌ ಅವರ ತಂಡ ಕಲ್ಯಾಣ್‌-ಮುರ್‌ಬಾಡ್‌ನ‌ 2 ಶಾಲೆಗಳನ್ನು ಆಯ್ಕೆ ಮಾಡಿದೆ. ಬಂಗರ್‌ವಾಡಿ ಗ್ರಾಮದಿಂದ 3-4 ಕಿ.ಮೀ. ನಡೆದು ಮಕ್ಕಳು ಮಮ್ನೋಲಿ ಶಾಲೆಗೆ ಬರುತ್ತಾರೆ. ಖಾಂದಿಚಿವಾಡಿ ಗ್ರಾಮದಿಂದ ಮಕ್ಕಳು 4-5 ಕಿಮೀ ನಡೆದುಅಸೋಳೆ ಶಾಲೆಗೆ ಬರುತ್ತಾರೆ. ಈ ಎರಡು ಶಾಲೆಗಳ 32 ಮಕ್ಕಳಿಗೆ ಸೈಕಲ್‌ ಅಗತ್ಯವಿದೆ ಎಂಬುದು ತಿಳಿದು ಬಂತು. ಶಿಕ್ಷಕರಿಂದ ಮಕ್ಕಳ ಪಟ್ಟಿಯನ್ನು ತೆಗೆದುಕೊಂಡು ಕಾರ್ಯೋನ್ಮುಖರಾದೆವು ಎನ್ನುತ್ತಾರೆ ನಿರಂಜನ್‌. 

ದುರಸ್ತಿ ಮಾಡಿಯೂ ಕೊಟ್ಟರು
5 ಸೈಕಲ್‌ಗ‌ಳನ್ನು ದುರಸ್ತಿ ಮಾಡಲು ತಂಡಕ್ಕೆ ದುಬಾರಿ ವೆಚ್ಚ ತಗಲಿತು. ಈ ಬಗ್ಗೆ ತಿಳಿದ ಸೊಸೈಟಿಯವರು ತಂಡಕ್ಕೆ ಹೊರೆ ಆಗಬಾರದು ಎಂಬ ಉದ್ದೇಶದಿಂದ ಸೈಕಲ್‌ಗ‌ಳನ್ನು ದುರಸ್ತಿ ಮಾಡಿ ಕೊಟ್ಟರು. ಇದಕ್ಕಿಂತ ಸಂತೋಷದ ವಿಷಯ ಬೇರೆ ಬೇಕೇ? ಎನ್ನುತ್ತಾರೆ ನಿರಂಜನ್‌. ಎಪ್ರಿಲ್‌ 22ರಂದು ಸೈಕಲ್‌ಗ‌ಳನ್ನು ವಿತರಿಸಲಾಯಿತು.

ಗುಜುರಿಗೆ ಹಾಕಲು ಮನಸ್ಸಿಲ್ಲದೆ ಕೊಟ್ಟರು! 
ಕೆಲವು ಪೋಷಕರು ಸ್ವಯಂ ಪ್ರೇರಣೆಯಿಂದ ಸೈಕಲ್‌ಗ‌ಳನ್ನು ನೀಡಿದರೆ, ಇನ್ನು ಕೆಲವರು ಹಾಳಾಗುತ್ತಿದ್ದ ಸೈಕಲ್‌ ಗಳನ್ನು ಗುಜುರಿಗೆ ಹಾಕಲು ಮನಸ್ಸಿಲ್ಲದೆ ತಂಡಕ್ಕೆ ನೀಡಿದರು. ಕೆಲವು ಮಕ್ಕಳು ಅವರಾಗಿಯೇ ತಾವು ಹಿಂದೆ ಬಳಸುತ್ತಿದ್ದ ಸೈಕಲ್‌ಗ‌ಳನ್ನು ಕೊಡುಗೆಯಾಗಿ ನೀಡಿದರು.

Advertisement

ಊರಿನಲ್ಲೂ ಶಿಕ್ಷಣಕ್ಕೆ ಪ್ರೋತ್ಸಾಹ
ಮಣಿಪುರದ ಗುರುನಾರಾಯಣ ಮಂದಿರದಲ್ಲಿ ನಿರಂಜನ್‌ ಅವರು ತನ್ನ ತಾಯಿ ದಿ| ಶಾಂತಾ ಸುವರ್ಣ ಹಾಗೂ ಅಜ್ಜ ದಿ| ಕೊರಗಪ್ಪ ಸುವರ್ಣ ಅವರ ನೆನಪಿಗಾಗಿ ವಿದ್ಯಾರ್ಥಿಗಳಿಗೆ ಸಹಾಯಧನ ನೀಡುವ ಕಾರ್ಯ ಆರಂಭಿಸಿದ್ದಾರೆ. ಈ ನಿಟ್ಟಿನಲ್ಲಿ ತನ್ನ ದೇಣಿಗೆಯನ್ನೂ ನೀಡಿದ್ದಾರೆ. ಮುಂದೆ ಇಲ್ಲಿ ಗ್ರಾಮೀಣ ಮಕ್ಕಳಿಗೆ ಉಚಿತ ಕಂಪ್ಯೂಟರ್‌ ಶಿಕ್ಷಣ ನೀಡುವ ಯೋಜನೆಯೂ ಇದೆ ಎನ್ನುತ್ತಾರೆ ನಿರಂಜನ್‌. 

ಹಲವು ಯೋಜನೆ
ಇನ್ನಷ್ಟು ಯೋಜನೆಗಳು ನಮ್ಮ ಮುಂದಿವೆ. ಶಾಲೆಗೆ 11 ಸೈಕಲ್‌ಗ‌ಳನ್ನು ಒದಗಿಸಲು ಬಾಕಿ ಇದೆ. ಸೊಸೈಟಿಗಳಿಂದ ಮಕ್ಕಳ ಬಳಕೆಯಾಗದ ನೋಟ್‌ಬುಕ್‌, ಪೆನ್‌, ಪೆನ್ಸಿಲ್‌, ಸ್ಕೂಲ್‌ ಬ್ಯಾಗ್‌ಗಳು ಮತ್ತು ಉಪಯೋಗಿಸಬಹುದಾದ ಬಟ್ಟೆಗಳು, ಶೂಗಳನ್ನು ಅಗತ್ಯವಿರುವವರಿಗೆ ಒದಗಿಸುವ ಯೋಜನೆ ಇದೆ. 
-ನಿರಂಜನ್‌ ಸುವರ್ಣ

ಚಕಿತರಾದ ನಗರವಾಸಿ ಮಕ್ಕಳು
ಭಾಂಡೂಪ್‌ ನಗರ ಪ್ರದೇಶದ ಮಕ್ಕಳಿಗೆ ಮನೆ ಬಾಗಿಲಿಗೆ ಶಾಲಾ ವಾಹನ ಬರುವುದರಿಂದ ಕಿ.ಮೀ. ಗಟ್ಟೆಲೆ ನಡೆದು ಶಾಲೆಗೆ ಬರುವುದನ್ನು ಆಲೋಚಿಸಲೂ ಸಾಧ್ಯ ವಿರಲಿಲ್ಲ. ಅವರ ಬಳಿ ಹೋಗಿ ಮಮ್ನೋಲಿ ಮತ್ತು ಖಾಂದಿಚಿವಾಡಿ ಶಾಲೆಯ ಮಕ್ಕಳ ಸ್ಥಿತಿಯನ್ನು ವಿವರಿಸಿದಾಗ ಅವರಿಗೆ ಆಶ್ಚರ್ಯದೊಂದಿಗೆ ಕನಿಕರವೂ ಉಂಟಾಯಿತು. ಕೆಲವು ಪೋಷಕರಿಗೆ ತಾವು ನಡೆದು ಶಾಲೆಗೆ ಬರುತ್ತಿದ್ದುದನ್ನು ಮಕ್ಕಳಿಗೆ ಹೇಳುವ ಅವಕಾಶವೂ ಒದಗಿಬಂತು. ಇದನ್ನು ಕೇಳಿದ ಮಕ್ಕಳು ಖುಷಿಯಿಂದಲೇ ತಾವು ಬಳಸಿ ಬಿಸಾಡಿದ್ದ ಸೈಕಲ್‌ಗ‌ಳನ್ನು ನಮಗೆ ನೀಡಿದರು.

ಒಮ್ಮೆಗೇ 21 ಸೈಕಲ್‌ ದೊರೆತವು
ನಿರಂಜನ್‌ ಅವರು ವಾಸವಾಗಿರುವ ಭಾಂಡೂಪ್‌ನ ಮಯೂರೇಶ್‌ ಸೃಷ್ಟಿ ಸೊಸೈಟಿಯು ಅವರ ಉದಾತ್ತ ಕಾರ್ಯಕ್ಕೆ ಸದಾ ಬೆಂಬಲವಾಗಿ ನಿಂತಿದೆ. ಸೊಸೈಟಿಯವರು ತಮ್ಮಲ್ಲಿದ್ದ ಸೈಕಲ್‌ಗ‌ಳನ್ನು ಕೂಡಲೇ ಒದಗಿಸಿದರು. ಇದರೊಂದಿಗೆ ಭಾಂಡೂಪ್‌ನ ಸಾಯಿರಾಧಾ ಸೊಸೈಟಿಯವರೂ ಸೈಕಲ್‌ ಗಳನ್ನು ನೀಡಿದರು. ಹೀಗೆ ಒಮ್ಮೆಗೇ 21 ಸೈಕಲ್‌ಗ‌ಳನ್ನು ಈ 2 ಸೊಸೈಟಿಗಳಿಂದ ಪಡೆದು ದುರಸ್ತಿ ಮಾಡಿ ವಿತರಿಸಲಾಯಿತು. 

ಯಾರೀ ನಿರಂಜನ್‌ ಸುವರ್ಣ?
ನಿರಂಜನ್‌ ಸುವರ್ಣ ಮೂಲತಃ ಉಡುಪಿಯ ಕಟಪಾಡಿಯವರು. ಪ್ರಸ್ತುತ ಭಾಂಡೂಪ್‌ ನಿವಾಸಿಯಾಗಿರುವ ಅವರು ತೊಡರುಗಳನ್ನೇ ಸವಾಲಾಗಿ ಸ್ವೀಕರಿಸಿ ಬೆಳೆದವರು. ಭಾಂಡೂಪ್‌ನಲ್ಲಿ ಸ್ವಂತ ಫೈನಾನ್ಶಿಯಲ್‌ ಅದ್ವೈಜರಿ ಕಂಪೆನಿಯನ್ನು ಹೊಂದಿರುವ ಅವರು, ಆದರ್ಶ ವಿದ್ಯಾಲಯದಲ್ಲಿ 10ನೇ ತರಗತಿ ವರೆಗೆ ವ್ಯಾಸಂಗ ಮಾಡಿದರು. ಬಳಿಕ ಕನ್ನಡ ಭವನ್‌ನಲ್ಲಿ ಪಿಯುಸಿ ಪೂರೈಸಿದರು. ಸೈಂಟ್‌ ಕ್ಸೇವಿಯರ್ನಲ್ಲಿ ರಾತ್ರಿ ಅಧ್ಯಯನ ನಡೆಸಿ ಬಿ.ಕಾಂ. ಪದವಿ ಪಡೆದ ಅವರು, ಸಿಎಫ್ಸಿ ಕೋರ್ಸನ್ನೂ ಪೂರೈಸಿದ್ದಾರೆ. ಬಿಡುವಿಲ್ಲದ ವೃತ್ತಿ ಜೀವನದಲ್ಲೂ ಗ್ರಾಮೀಣ ಮಕ್ಕಳೆಡೆಗೆ ತುಡಿಯುವ ಅವರ ಮನಸ್ಸಿಗೆ ಶ್ಲಾಘನೆ ವ್ಯಕ್ತವಾಗಿದೆ.

ಅಶ್ವಿ‌ನ್‌ ಲಾರೆನ್ಸ್‌ ಮೂಡುಬೆಳ್ಳೆ

Advertisement

Udayavani is now on Telegram. Click here to join our channel and stay updated with the latest news.

Next