ಮುಂಬಯಿ, ಸೆ. 19: ಮುಂಬಯಿ ಮಹಾನಗರದ ಅಭಿವೃದ್ಧಿಯಲ್ಲಿ ತುಳು- ಕನ್ನಡಿಗರು ಅದರಲ್ಲೂ ಬಂಟ್ಸ್ ಸಮಾಜದ ಕೊಡುಗೆ ಅಪಾರವಾಗಿದೆ. ಇಲ್ಲಿ ಎಲ್ಲರೂ ಒಬ್ಬರಿಗೊಬ್ಬರು ಆತ್ಮೀಯತೆಯಿಂದ ಬದುಕಿ ಉತ್ತಮ ಸಮಾಜದ ನಿರ್ಮಾಣದಲ್ಲಿ ತೊಡಗಿದ್ದಾರೆ. ಯುವ ಪೀಳಿಗೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಮುಲುಂಡ್ ಬಂಟ್ಸ್ ಆಯೋಜಿಸುತ್ತಿರುವ ಫುಟ್ಬಾಲ್ ಪಂದ್ಯಾಟವು ಅಭಿನಂದನೀಯ. ಯುವ ವರ್ಗವನ್ನು ಒಗ್ಗೂಡಿಸಿ ಅವರಲ್ಲಿ ಕ್ರೀಡಾ ಮನೋಭಾವವನ್ನು ಹೆಚ್ಚಿಸುವ ಕಾರ್ಯ ಮಾದರಿಯಾಗಿದೆ ಎಂದು ಸಂಸದ ಮನೋಜ್ ಕೋಟಕ್ ಅವರು ನುಡಿದರು.
ಸೆ. 15ರಂದು ಮುಲುಂಡ್ ಬಂಟ್ಸ್‌ನ ಯುವ ವಿಭಾಗದ ವತಿಯಿಂದ ಮುಲುಂಡ್ ಪಶ್ಚಿಮದ ಎನ್‌ಇಎಸ್ ಇಂಟರ್‌ನ್ಯಾಶನಲ್ ಸ್ಕೂಲ್ ಟರ್ಫ್ ಮೈದಾನದಲ್ಲಿ ದಿನಪೂರ್ತಿ ನಡೆದ ಅಖೀಲ ಭಾರತ “ಬಂಟ್ಸ್ ಟರ್ಫ್ ಫುಟ್ಬಾಲ್ ಪಂದ್ಯಾಟ’ದ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ ಶುಭಹಾರೈಸಿದರು. ಬಂಟ ಸಮಾಜದ ಒಟ್ಟು 24 ತಂಡಗಳು ಭಾಗವಹಿಸಿದ ಪಂದ್ಯಾಟದಲ್ಲಿ ರತ್ನಾಕರ ಶೆಟ್ಟಿ ವಸಾಯಿ ಇವರ ಪ್ರಾಯೋಜಕತ್ವದ ವಸಾಯಿ ಡಹಾಣೂ ಯುವ ವಿಭಾಗದ ಎ ತಂಡ ಪ್ರಥಮ ಪ್ರಶಸ್ತಿಯನ್ನು ಪಡೆದು 51 ಸಾವಿರ ರೂ. ನಗದು ಬಹುಮಾನವನ್ನು ಮುಡಿಗೇರಿಸಿಕೊಂಡಿತು.
ಮುಲುಂಡ್ ಬಂಟ್ಸ್‌ನ ಅಧ್ಯಕ್ಷ ಪಲಿಮಾರು ವಸಂತ್ ಎನ್. ಶೆಟ್ಟಿ ಅವರ ಪ್ರಾಯೋಜಕತ್ವದ ಮುಲುಂಡ್ ಬಂಟ್ಸ್ ಯುವ ವಿಭಾಗ ಎ ತಂಡವು ದ್ವಿತೀಯ ಪ್ರಶಸ್ತಿಯೊಂದಿಗೆ 30 ಸಾವಿರ ರೂ. ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು. ಉತ್ತಮ ಗೋಲ್
ಕೀಪರ್ ಆಗಿ ಬಂಟರ ಸಂಘ ಮುಂಬಯಿ ಯುವ ವಿಭಾಗದ ರವಿ ಅವರು ಬಹುಮಾನ ಪಡೆದರು. ಪಂದ್ಯಶ್ರೇಷ್ಠ ಪುರಸ್ಕಾರವನ್ನು ವಸಾಯಿ-ಡಹಾಣೂ ಯುವ ವಿಭಾಗದ ನಿಮೇಶ್ ಶೆಟ್ಟಿ, ಪಂದ್ಯಾವಳಿಯ ಶ್ರೇಷ್ಠ ಬಹುಮಾನವನ್ನು ವಸಾಯಿ-ಡಹಾಣೂ ಯುವ ವಿಭಾಗದ ಶ್ರಾವಣ್ ಅವರು ಪಡೆದರು. ಸಮಾರಂಭದಲ್ಲಿ ಅತಿಥಿಗಳಾಗಿ ಶಾಸಕ ಸುನಿಲ್ ರಾವುತ್, ಉದ್ಯಮಿ ಸುನಿಲ್ ಆಳ್ವ
ಅವರು ಉಪಸ್ಥಿತರಿದ್ದರು. ಕ್ರೀಡಾಕೂಟದ ರೂವಾರಿಗಳಾದ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಕಡಂದಲೆ ಸುರೇಶ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷೆ ಶ್ರುತಿಕಾ ಶೆಟ್ಟಿ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿ ಇದರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಉಳೂ¤ರು ಮೋಹನ್ ದಾಸ್ ಶೆಟ್ಟಿ, ಮುಲುಂಡ್ ಬಂಟ್ಸ್‌ನ ಉಪಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ, ಕೋಶಾಧಿಕಾರಿ ರತ್ನಾಕರ ಜಿ. ಶೆಟ್ಟಿ, ಜತೆ ಕಾರ್ಯದರ್ಶಿಗಳಾದ
ವೇಣುಗೋಪಾಲ್ ಎಂ. ಶೆಟ್ಟಿ, ಕೃಷ್ಣ ಪ್ರಸಾದ್ ಶೆಟ್ಟಿ, ಜತೆ ಕೋಶಾಧಿಕಾರಿ ಪ್ರಕಾಶ್ ಪಿ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದಾ ಆರ್. ಕೆ. ಚೌಟ, ಮಾಜಿ ಅಧ್ಯಕ್ಷರು, ಟ್ರಸ್ಟಿಗಳಾದ ಎಸ್. ಬಿ. ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಪ್ರಾಯೋಜಕರನ್ನು, ವಿವಿಧ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳನ್ನು ಗೌರವಿಸಲಾಯಿತು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನುತಾ ಎಸ್. ಶೆಟ್ಟಿ ಅವರು ಪ್ರಾರ್ಥನೆಗೈದರು. ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ರಂಗನಟ ಕೃಷ್ಣ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು.
ಚಿತ್ರ-ವರದಿ: ಸುಭಾಷ್ ಶಿರಿಯಾ