Advertisement
ಕಂಬಳ ಕೋರಿ ಎಂದರೆ…ಭೂದೇವಿಯನ್ನು ಆರಾಧಿಸುವುದು ಕೃಷಿ ಸಂಸ್ಕೃತಿಯ ಅವಿಭಾಜ್ಯ ಕ್ರಮ. ಅದರ ಒಂದು ಅಂಗವೇ ಕಂಬಳ ಕೋರಿ ಎನ್ನುವ ಗದ್ದೆ ಪೂಜೆ. ಈ ಹಿನ್ನೆಲೆಯಲ್ಲಿ ನಿಗದಿ ಪಡಿಸಿದ ದಿನದಂದು ರೈತರೆಲ್ಲಾ ಗ್ರಾಮದ ಪ್ರಮುಖನ ಮನೆಯಲ್ಲಿ ಸೇರಿ, ಜಾತಿ,ಪಂಗಡದ ಭೇದವಿಲ್ಲದೆ ಕಂಬಳಕೋರಿ ಆಚರಿಸುತ್ತಾರೆ. ದೈವಗಳ ಆರಾಧನೆಯೂ ಇದರಲ್ಲಿ ಪ್ರಧಾನವಾಗಿರುವುದರಿಂದ ಗ್ರಾಮಸ್ಥರೆಲ್ಲಾ ಶ್ರದ್ಧೆ , ಭಯ, ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ. ಕಂಬಳ ಕೋರಿಗೆ 2 ದಿನ ಮೊದಲು ಡೆಕ್ಕೋರಿ ಎಂಬ ಪೂರ್ವ ಸಿದ್ಧತಾ ಕಾರ್ಯಕ್ರಮವಿರುತ್ತದೆ.
ಅದಾಗಲೇ ಗದ್ದೆಯ ಬದಿಯಲ್ಲಿ ನಾಗಬ್ರಹ್ಮ ದೈವ ಅಣಿ ಏರಿಸಿ ಸಿದ್ಧಗೊಂಡಿರುತ್ತದೆ. ಅಲ್ಲಿ ಕಲ್ಲಿನ ಚಕ್ರವುಳ್ಳ ಸಾಗುವಾನಿ ಮರದ ಪಟ್ಟಿಗಳುಳ್ಳ ತೇರಿನಾಕಾರದ ಪೂಕರೆ ಬಂಡಿಯನ್ನು ಕೇಪುಳ ಹೂವುಗಳಿಂದ ಅಲಂಕರಿಸಿ ಸಿದ್ಧಗೊಳಿಸಲಾಗಿರುತ್ತದೆ. ಈ ಪೂಕರೆ ಬಂಡಿಯನ್ನು ಎಳೆಯಲು ಪಲ್ಲೆ ಎಂಬ ಬೀಳಲನ್ನೇ ಬಳಸಲಾಗುತ್ತದೆ. ಬಳಿಕ ಉಳುಮೆ ಮಾಡುತ್ತಿದ್ದ ಕೋಣಗಳನ್ನು ಮೇಲೆ ಬರುವಂತೆ ಹಾಗೂ ಪೂಕರೆ ಬಂಡಿಯನ್ನು ಎಳೆಯುವಂತೆ ನಾಗಬ್ರಹ್ಮ ದೈವ ಅಪ್ಪಣೆ ನೀಡುತ್ತದೆ. ಗ್ರಾಮಸ್ಥರೆಲ್ಲ ಸೇರಿ ಸಂಭ್ರಮದಿಂದ ಪೂಕರೆ ಬಂಡಿಯನ್ನು ಎಳೆದುಕೊಂಡು ಗದ್ದೆಯ ಮಧ್ಯ ಭಾಗಕ್ಕೆ ತಂದು ನಿಲ್ಲಿಸುತ್ತಾರೆ. ವಿಶಾಲ ಗದ್ದೆಗೆ ನಾಗಬ್ರಹ್ಮ ದೈವ ಎಲ್ಲರ ಜೊತೆ ಸುತ್ತು ಬಂದು ಉತ್ತಮ ಫಸಲು ಬರುವಂತೆ ಹರಸುತ್ತದೆ. ಕೋಣಗಳಿಂದ ಉಳುಮೆ
ಕಂಬಳ ಕೋರಿಯ ದಿನ ಮುಂಜಾನೆ ಗುತ್ತಿನ ಮನೆಯಿಂದ ಹೊರಟ ಕೊರಗಜ್ಜ ದೈವ ಗ್ರಾಮದ ವಿವಿಧ ಮನೆಗಳಿಂದ ಬಂದ ಕೋಣಗಳೊಂದಿಗೆ ಕಂಬಳ ಗದ್ದೆಗೆ ಬಂದು ಕೋಣಗಳನ್ನು ಗದ್ದೆಗೆ ಇಳಿಯಲು ಅಪ್ಪಣೆ ನೀಡುತ್ತದೆ. ಎಲ್ಲ ಕೋಣಗಳನ್ನೂ ಒಮ್ಮೆಲೆ ಗದ್ದೆಗೆ ಇಳಿಸಿ ಮಧ್ಯಾಹ್ನದ ತನಕ ಗದ್ದೆ ಉಳುತ್ತಾರೆ. ಈಗ ಕೋಣ ಸಾಕುವವರ ಸಂಖ್ಯೆ ವಿರಳವಾಗಿ, ಕೋಣಗಳನ್ನು ಸಾಂಕೇತಿಕವಾಗಿಯಷ್ಟೇ ಗದ್ದೆಗೆ ಇಳಿಸಲಾಗುತ್ತದೆ. ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಲಾಗುತ್ತದೆ. ಇತ್ತ ಗುತ್ತಿನ ಮನೆಯಲ್ಲಿ ಗ್ರಾಮ ದೈವಗಳಿಗೆ ಪರ್ವ(ವಿಧಿಪೂರ್ವಕ ಆಹಾರ) ಹಾಕಿಸಿ, ಪಂಜುರ್ಲಿ ದೈವದ ಹಗಲು ನೇಮ (ನರ್ತನ ಸೇವೆ) ನಡೆಯುತ್ತದೆ. ಒಂದು ಗಂಟೆಯ ಕಾಲ ನೇಮ ನಡೆದು, ದೈವ ಅಂಗಿ ಏರಿಸುವ (ತೊಡುವ) ಸಂದರ್ಭ ದೈವದ ಮುಕ್ಕಾಲ್ದಿ (ಪಾತ್ರಿ), ನಾಗಬ್ರಹ್ಮ ದೈವ(ವೇಷಧಾರಿ ಪಾತ್ರಿ), ಗುತ್ತಿನ ಯಜಮಾನ, ತಂತ್ರಿ ಬಳಗ ಹಾಗೂ ಗ್ರಾಮಸ್ಥರೊಂದಿಗೆ ಕೊಂಬು ವಾಲಗದ ಹಿಮ್ಮೇಳದೊಂದಿಗೆ ಕಂಬಳ ಗದ್ದೆಗೆ ಬರುತ್ತಾರೆ.