Advertisement
ಪ್ರಸಿದ್ಧ ನಾಟಕಕಾರ ಶೇಕ್ಸ್‌ಪಿಯರ್‌ನ ‘ಮ್ಯಾಕ್‌ಬೆತ್’ ನಾಟಕದಿಂದ ಸ್ಫೂರ್ತಿ ಪಡೆದು ‘ಪಡ್ಡಾಯಿ’ ತಯಾರಿಸಲಾಗಿದೆ. ಮೊಗವೀರ ಸಮುದಾಯದ ಬದುಕು ಬವಣೆಯನ್ನು ಈ ಸಿನೆಮಾದಲ್ಲಿ ಕಟ್ಟಿಕೊಡಲಾಗಿದೆ. ತುಳುನಾಡಿನ ಜನಪದ ಸಂಸ್ಕೃತಿ, ಪ್ರದರ್ಶನ ಕಲೆಗಳು ಸಮೃದ್ಧವಾಗಿ ಚಿತ್ರಣಗೊಂಡಿವೆ. ಒಂದು ಗಂಟೆ 40 ನಿಮಿಷ ಅವಧಿಯ ಈ ಸಿನೆಮಾದಲ್ಲಿ ಮೋಹನ್ ಶೇಣಿ, ಬಿಂದು ರಕ್ಷಿದಿ, ಗೋಪಿನಾಥ್ ಭಟ್, ಚಂದ್ರಹಾಸ್ ಉಳ್ಳಾಲ್, ರವಿ ಭಟ್, ಸದಾಶಿವ ಧರ್ಮಸ್ಥಳ, ಶ್ರೀನಿಧಿ ಆಚಾರ್, ಅವಿನಾಶ್ ರೈ, ಮಲ್ಲಿಕಾ ಜ್ಯೋತಿಗುಡ್ಡೆ, ವಾಣಿ ಪೆರಿಯೋಡಿ, ಸಂತೋಷ್ ಶೆಟ್ಟಿ, ಪ್ರಭಾಕರ್ ಕಾಪಿಕಾಡ್ ಪ್ರಮುಖ ಭೂಮಿಕೆಗಳಲ್ಲಿದ್ದಾರೆ.
ತುಳುವಿನಲ್ಲಿ ‘ಪಡ್ಡಾಯಿ’ ಅಂದರೆ ಪಶ್ಚಿಮ ಎಂದರ್ಥ. ಕರಾವಳಿ ಭಾಗದಲ್ಲಿ ಮೀನುಗಾರರು, ಮೀನುಗಾರಿಕೆಗೆ ಹೋಗುವುದನ್ನು ‘ಪಡ್ಡಾಯಿ’ಗೆ ಹೋಗುವುದು ಎಂದೇ ಹೇಳುತ್ತಾರೆ. ಮಲ್ಪೆಯ ಪಡುಕರೆಯಲ್ಲಿ 19 ದಿನ ಶೂಟಿಂಗ್ ನಡೆಸಲಾಗಿತ್ತು. ಉಳಿದಂತೆ ಮಂಗಳೂರು ಹಾಗೂ ಉಡುಪಿಯಲ್ಲಿ ಚಿತ್ರೀಕರಣವಾಗಿದೆ. ಮೀನುಗಾರ ಕುಟುಂಬ ಮಾತನಾಡುವ ತುಳುವಿನ ಶೈಲಿ ಹಾಗೂ ಅವರ ಹಾವಭಾವದ ಅಧ್ಯಯನಕ್ಕಾಗಿ ಒಂದು ವಾರ ಈ ಸಿನೆಮಾದ ಎಲ್ಲ ಕಲಾವಿದರು ಮಲ್ಪೆಯ ಮೀನುಗಾರ ಕುಟುಂಬದ ಜತೆಗಿದ್ದರು. ತುಳುವಿನಲ್ಲಿ ಮೊದಲ ಬಾರಿಗೆ ಸಿಂಕ್ ಸೌಂಡ್‌ನಲ್ಲಿ ಈ ಸಿನೆಮಾ ಮಾಡಲಾಗಿದೆ. ಮೌಲ್ಯಯುತ ಹಾಗೂ ಸಾಮಾಜಿಕ ಕಳಕಳಿಯ ಸಿನೆಮಾ ಮಾಡಬೇಕೆಂಬ ತುಡಿತದೊಂದಿಗೆ ನಿರ್ಮಾಪಕರಾದ ಕಾರ್ಕಳದ ನಿತ್ಯಾನಂದ ಪೈ ಅವರು ಈ ಸಿನೆಮಾಕ್ಕೆ ಹೊಸ ಆಯಾಮ ಒದಗಿಸಿದ್ದಾರೆ. ಪ್ರಸ್ತುತ ಸಿನೆಮಾ ರಾಷ್ಟ್ರೀಯ ಪ್ರಶಸ್ತಿ ಗೆದ್ದಿರುವುದು ಸಂಭ್ರಮ ತಂದಿದೆ’ ಎನ್ನುತ್ತಾರೆ ನಿರ್ದೇಶಕ ಅಭಯಸಿಂಹ.
Related Articles
Advertisement
ತುಳು ಸಿನೆಮಾ ಕ್ಷೇತ್ರಕ್ಕೆ ದೊರೆತ ಗೌರವಅತ್ಯಂತ ಅಪೂರ್ವ ನೆಲೆಯಲ್ಲಿ ‘ಪಡ್ಡಾಯಿ’ ಮೂಡಿ ಬಂದಿದ್ದು, ಈಗ ರಾಷ್ಟ್ರೀಯ ಗೌರವಕ್ಕೆ ಪಾತ್ರವಾಗಿರುವುದು ನಮಗೆಲ್ಲ ಖುಷಿ ತಂದಿದೆ. ಒಟ್ಟು ತಂಡದ ನಿರ್ವಹಣೆಯ ಮೂಲಕ ಗೆಲುವು ದೊರೆತಿದೆ. ಇದು ತುಳು ಸಿನೆಮಾ ಕ್ಷೇತ್ರಕ್ಕೆ ದೊರೆತ ಗೌರವವಾಗಿದೆ.
– ನಿತ್ಯಾನಂದ ಪೈ, ‘ಪಡ್ಡಾಯಿ’ ನಿರ್ಮಾಪಕರು