ಇತ್ತೀಚಿನ ಕೆಲವು ಸಮಯದಿಂದ ಕೋಸ್ಟಲ್‌ವುಡ್ ಕೊಂಚ ಸಪ್ಪೆಯಾಗಿತ್ತು ಎನ್ನುವ ಸಾಮಾನ್ಯ ಆರೋಪಗಳು ಕೇಳಿಬರುತ್ತಿತ್ತು. ತುಳು ಸಿನೆಮಾಗಳು ಬಂದರೂ ಅದು ಜನರ ಆಕರ್ಷಿಸುವಲ್ಲಿ ಒಂದಷ್ಟು ವಿಫಲವಾಗಿದೆ ಎಂಬ ಮಾತು ಪ್ರತಿಧ್ವನಿಸುತ್ತಿತ್ತು. ಕೆಲವೊಂದು ಲೋಪ ಹಾಗೂ ಜನರನ್ನು ಪೂರ್ಣ ಮಟ್ಟಿಗೆ ತಲುಪಲಾಗದೆ “ತುಳು ಸಿನೆಮಾ ಸಪ್ಪೆ’ ಎಂಬ ಮಾತು ಅಲ್ಲೊಮ್ಮೆ ಇಲ್ಲೊಮ್ಮೆ ಕೇಳಿಬರುತ್ತಿರುವ ಕಾಲದಲ್ಲಿಯೇ “ಗಿರಿಗಿಟ್’ ಸಿನೆಮಾ ಕೋಸ್ಟಲ್‌ವುಡ್‌ನಲ್ಲಿ ಬಿರುಗಾಳಿ ಎಬ್ಬಿಸುವಲ್ಲಿ ಸಕ್ಸಸ್ ಆಗಿದೆ.
ಶುಕ್ರವಾರ ಬಿಡುಗಡೆಯಾದ ಸಿನೆಮಾ ಮೂರೇ ದಿನದೊಳಗೆ ಕೋಸ್ಟಲ್‌ವುಡ್‌ನಲ್ಲಿ ಸಕ್ಸಸ್ ಗೆರೆ ಬರೆದಿದೆ. ಹೆಚ್ಚು ಕಡಿಮೆ 100ಕ್ಕಿಂತಲೂ ಹೆಚ್ಚು ಪ್ರದರ್ಶನಗಳು ಈಗಾಗಲೇ ನಡೆದಿವೆ. ರವಿವಾರವಂತೂ ಒಂದೇ ದಿನ ಕೇವಲ ಮಂಗಳೂರಿನಲ್ಲಿಯೇ 29 ಶೋ ಇತ್ತು. ವಾರದ ಮಧ್ಯೆ ರಾತ್ರಿ 10ರ ಸುಮಾರಿಗೂ ಒಂದೇ ಮಲ್ಟಿಪ್ಲೆಕ್ಸ್‌ನಲ್ಲಿ 3-4 ಶೋ ಇತ್ತು. ಉಡುಪಿ, ಸುಳ್ಯ, ಬೆಳ್ತಂಗಡಿ, ಪುತ್ತೂರಿನಲ್ಲಿಯೂ ಉತ್ತಮ ಗಳಿಕೆ ಕಂಡಿದೆ. ವಿಶೇಷವಾಗಿ ವಿದೇಶದಲ್ಲಿಯೂ ಸಿನೆಮಾ ಬಹಳಷ್ಟು ಸದ್ದು ಮಾಡಿದೆ. ಅಂತೂ ನಾಳೆಗೆ ಈ ಸಿನೆಮಾ ಒಟ್ಟು 1 ಕೋಟಿ ರೂ. ಗಳಿಸುವ ಎಲ್ಲಾ ಸಾಧ್ಯತೆಗಳಿವೆ.
“ಗಿರಿಗಿಟ್’ ಕಮಾಲ್ ಮಾಡಿದ್ದು ಹೇಗೆ? ನವಿರಾದ ಕಥೆಯೊಂದನ್ನು ಕಾಮಿಡಿಯ ಲಿಂಕ್ ಬೆಸೆದು ಹಾಸ್ಯ ಅಪಹಾಸ್ಯವಾಗದಂತೆ ನೋಡಿಕೊಂಡು ನೀಟಾಗಿ ಸಿನೆಮಾ ಮಾಡಿದ ಕಾರಚದಿಂದ ಗಿರಿಗಿಟ್ ಸದ್ದು ಮಾಡಿದೆ. ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಕದ್ರಿ ನಿರ್ದೇಶನಕ್ಕೆ ಎಲ್ಲೂ ಕಪ್ಪುಚುಕ್ಕೆಗಳೇ ಇಲ್ಲ. ಪಡೀಲ್, ಬೋಳಾರ್, ವಾಮಂಜೂರು ಹಿಂದಿನ ಎಲ್ಲಾ ಸಿನೆಮಾಕ್ಕಿಂತಲೂ ಕೊಂಚ ಭಿನ್ನವಾಗಿ ನಗಿಸಿದ್ದಾರೆ ಹಾಗೂ ತುಂಬ ಇಷ್ಟವಾಗುತ್ತಾರೆ. ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್ ಸೇರಿದಂತೆ ಎಲ್ಲ ಕಾಮಿಡಿ ನಟರು ಇಲ್ಲಿ ನ್ಯಾಯ ಕೊಟ್ಟಿದ್ದಾರೆ. ಕೋಸ್ಟಲ್‌ವುಡ್‌ಗೆ ರೋಶನ್ ಶೆಟ್ಟಿ ಎಂಬ ಹೊಸ ವಿಲನ್ ಎಂಟ್ರಿ ಪಡೆದಿದ್ದಾರೆ. ರೂಪೇಶ್ ಹಾಗೂ ಶಿಲ್ಪಾ ಕೂಡ ಸಿನೆಮಾ ಉದ್ದಕ್ಕೂ ಇಷ್ಟವಾಗುತ್ತಾರೆ. ಹೀಗೆ ಎಲ್ಲ ನಟರಿಗೂ ಇಲ್ಲಿ ಎಲ್ಲಾ ರೀತಿಯ ಪ್ರಾಶಸ್ಥ್ಯ ನೀಡಿ ಅವರಿಂದ ಹೊಸತನವನ್ನು ತರಿಸುವ ವಿಶೇಷ ಪ್ರಯತ್ನ ಕೆಲಸ ಮಾಡಿದೆ. ಜತೆಗೆ ಪ್ರಸನ್ನ ಶೆಟ್ಟಿ ಬೈಲೂರು ಅವರ ಸಂಭಾಷಣೆಯಂತು ಹೆಚ್ಚು ಕೆಲಸ ಮಾಡಿದೆ. ಕೆಮರಾ, ಎಡಿಟಿಂಗ್ ನೀಟಾಗಿ ಆಗಿರುವುದರಿಂದ ಈ ಬಗ್ಗೆ ಆಕ್ಷೇಪಗಳೇ ಇಲ್ಲ. ಸಂಗೀತ ಕೂಡ ಪರ್ಫೆಕ್ಟ್.
ನಿರ್ದೇಶಕ ರೂಪೇಶ್ ಈ ಸಿನೆಮಾಕ್ಕಾಗಿ ಹಗಲಿರುಳು ದುಡಿದಿದ್ದಾರೆ. ಅದರಲ್ಲಿಯೂ ರಿಲೀಸ್ ಆದ ಮೇಲೆ ಕೂಡ ಪ್ರೇಕ್ಷಕರ ಜತೆಗೆ ಸೇರಿಕೊಂಡು ಸಂಭ್ರಮಿಸುತ್ತಿದ್ದಾರೆ. ಸಾಮಾನ್ಯವಾಗಿ, ಸಿನೆಮಾ ಆದ ಮೇಲೆ ಪ್ರೇಕ್ಷಕರನ್ನು ತೆರೆಯ ಮುಂಭಾಗ ಚಿತ್ರತಂಡ ಬಿಟ್ಟುಬರುತ್ತಾರೆ. ಆದರೆ ಇಲ್ಲಿ ಹಾಗಿಲ್ಲ. ಪ್ರೇಕ್ಷಕರು ಇರುವಲ್ಲಿ ಚಿತ್ರತಂಡ ಹೋಗಿ ಜತೆಯಾಗಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾವನ್ನು ಅತ್ಯಂತ ಹೆಚ್ಚಾಗಿ ಪ್ರಚಾರದ ನೆಲೆಯಲ್ಲಿ ಬಳಸಿರುವುದು ಕೂಡ ಸಿನೆಮಾದ ವಿಸ್ತರಣೆಗೆ ಕಾರಣವಾಗಿದೆ.
ಕೋಸ್ಟಲ್‌ವುಡ್‌ನಲ್ಲಿ ಹಲವು ನಿರಾಶೆಯನ್ನೇ ಕಂಡಿರುವ ರೂಪೇಶ್ ಅವರು ತುಳು ಸಿನೆಮಾವನ್ನು ಈ ಬಾರಿ ಎದ್ದು ನಿಲ್ಲಿಸಿರುವುದು ವಿಶೇಷ. ಒಂದು ಹಂತದಲ್ಲಿ ಕೊಂಚ ಎಡವಿದ್ದ ಕೋಸ್ಟಲ್‌ವುಡ್‌ಗೆ ಭವಿಷ್ಯ ರೂಪಿಸುವಲ್ಲಿ ಅವರು ಸಕ್ಸಸ್ ಆಗಿದ್ದಾರೆ. ಈ ಧನಾತ್ಮಕ ಬೆಳವಣಿಗೆ ಕೋಸ್ಟಲ್‌ವುಡ್‌ನ ಮುಂದಿನ ದಿನಗಳಿಗೆ ಹೊಸ ವೇದಿಕೆ ಒದಗಿಸಿದಂತಿದೆ. ಮುಂದೆ ಬಹುನಿರೀಕ್ಷೆ ಬರೆಯಲಿರುವ ಕೆಲವು ಸಿನೆಮಾಗಳು ತೆರೆಗೆ ಬರಲು ಕಾತರವಾಗಿರುವ ಕಾಲದಲ್ಲಿ ಪ್ರೇಕ್ಷಕನನ್ನು ಥಿಯೇಟರ್‌ಗೆ ಕರೆತರುವ ವಿಶೇಷ ಪ್ರಯತ್ನದಲ್ಲಿ ರೂಪೇಶ್ ಪಾಸಾಗಿದ್ದಾರೆ.
- ದಿನೇಶ್ ಇರಾ