ಮಂಗಳೂರು: ಚಾಲಿ ಪೋಲಿಲು ತುಳು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶನಕ್ಕೆ ಕಾಲಿಟ್ಟಿದ್ದ ವೀರೇಂದ್ರ ಶೆಟ್ಟಿಯವರು ಸ್ಯಾಂಡಲ್ ವುಡ್ ನಲ್ಲಿ ತಮ್ಮ ಛಾಪನ್ನು ಮೂಡಿಸಿದ್ದು ಇದೀಗ ಏಳು ವರ್ಷಗಳ ಬಳಿಕ “ಮಗನೇ ಮಹಿಷ” ಎಂಬ ತುಳು ಚಿತ್ರದ ಮೂಲಕ ಸಿನಿ ಪ್ರಿಯರನ್ನು ರಂಜಿಸಲು ಸಜ್ಜಾಗಿದ್ದಾರೆ.
ವೀರೇಂದ್ರ ಶೆಟ್ಟಿಯವರ ಎರಡನೇ ತುಳು ಚಿತ್ರ ಮಗನೇ ಮಹಿಷ ಏಪ್ರಿಲ್ 29ರಂದು ತೆರೆ ಕಾಣಲು ಸಿದ್ಧವಾಗಿದೆ. ಈ ಬಾರಿಯೂ ಹಲವು ವೈಶಿಷ್ಟ್ಯತೆಗಳನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.
ಮಗನೇ ಮಹಿಷ ಚಿತ್ರದಲ್ಲಿ ಕನ್ನಡದ ಹೆಸರಾಂತ ಸಂಗೀತ ನಿರ್ದೇಶಕ ಮನೋ ಮೂರ್ತಿ ಅವರು ಪ್ರಥಮ ಬಾರಿಗೆ ತುಳು ಚಿತ್ರದಲ್ಲಿ ಸಂಗೀತ ನಿರ್ದೇಶಿಸಿದ್ದಾರೆ. ಅಷ್ಟೇ ಅಲ್ಲ ಬಿ.ಜಯಶ್ರೀಯವರು ಕೂಡಾ ಮೊದಲ ಬಾರಿಗೆ ಕೋಸ್ಟಲ್ ವುಡ್ ಸಿನಿಮಾದಲ್ಲಿ ಹಾಡನ್ನು ಹಾಡಿರುವುದು ವಿಶೇಷತೆಯಾಗಿದೆ.
ವೀರೇಂದ್ರ ಶೆಟ್ಟಿಯವರ ಕಥೆ, ಚಿತ್ರಕಥೆ, ನಿರ್ದೇಶನದ ಮಗನೇ ಮಹಿಷ ಚಿತ್ರದಲ್ಲಿ ಕೋಸ್ಟಲ್ ವುಡ್ ನ ನಟ, ನಟಿಯರು, ನಿರ್ದೇಶಕರು ಸೇರಿದಂತೆ ನೂರು ಮಂದಿ ಕಲಾವಿದರು ಒಂದು ಹಾಡಿನಲ್ಲಿ ಜತೆಗೂಡುತ್ತಿರುವುದು ಇದೇ ಪ್ರಥಮ ಬಾರಿಗೆ ಎಂಬುದು ವಿಶೇಷತೆಯಾಗಿದೆ.
ಈಗಾಗಲೇ ಮಗನೇ ಮಹಿಷ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಭೋಜರಾಜು ವಾಮಂಜೂರು, ಅರವಿಂದ್ ಬೋಳಾರ್ ಹಾಗೂ ಶಿವಧ್ವಜ ಶೆಟ್ಟಿ, ಜ್ಯೋತಿ ರೈ ಸೇರಿದಂತೆ ಇತರರು ತಾರಾಬಳಗದಲ್ಲಿದ್ದಾರೆ.
ತುಳುವಿನ ಚಾಲಿ ಪೋಲಿಲು ಚಿತ್ರದ ಮೂಲಕ ಖ್ಯಾತಿ ಗಳಿಸಿದ್ದ ವೀರೇಂದ್ರ ಶೆಟ್ಟಿ ಕಾವೂರ್ ಅವರು ಕನ್ನಡದ ಸವರ್ಣ ದೀರ್ಘ ಸಂಧಿ ಚಿತ್ರವನ್ನು ನಿರ್ದೇಶಿಸುವ ಮೂಲಕ ಸ್ಯಾಂಡಲ್ ವುಡ್ ನಲ್ಲಿಯೂ ಹೆಸರು ಗಳಿಸಿದ್ದರು.
2014ರಲ್ಲಿ ತೆರೆಕಂಡಿದ್ದ ಚಾಲಿ ಪೋಲಿಲು ತುಳು ಸಿನಿಮಾ ತುಳು ಚಲನಚಿತ್ರೋದ್ಯಮದಲ್ಲಿ ಸುಮಾರು 500 ದಿನಗಳ ಕಾಲ ದೀರ್ಘ ಪ್ರದರ್ಶನ ಕಂಡ ಚಿತ್ರವಾಗಿದೆ. ಅಂದಹಾಗೆ ಚಾಲಿ ಪೋಲಿಲು ಸಿನಿಮಾ ತೆರೆಕಂಡ ಏಳು ವರ್ಷದ ನಂತರ ಇದೀಗ ಬಿಡುಗಡೆಗೆ ಸಜ್ಜಾಗಿರುವ ಮಗನೇ ಮಹಿಷ ತುಳು ಚಿತ್ರದಲ್ಲಿ ಬೋಳಾರ್, ದೇವದಾಸ್ ಕಾಪಿಕಾಡ್, ಭೋಜರಾಜ್ ವಾಮಂಜೂರು, ಪಡೀಲ್ ಮತ್ತೆ ಒಂದೇ ಸಿನಿಮಾದಲ್ಲಿ ನಟಿಸುತ್ತಿರುವುದು ವಿಶೇಷತೆಯಾಗಿದೆ.