Advertisement

ತುಳು ಸಂಸ್ಕೃತಿ ಇತರ ಸಂಸ್ಕೃತಿಗಳಿಗೆ ಮಾದರಿ: ದಯಾನಂದ ಕತ್ತಲಸಾರ್‌ 

07:15 AM Apr 19, 2018 | Team Udayavani |

ಮಡಿಕೇರಿ:ತುಳು ಭಾಷೆ ಶ್ರೀಮಂತ ಹಾಗೂ ಸಮೃದ್ಧ ಭಾಷೆಯಾಗಿದ್ದು, ಅದನ್ನು ಅನುಭವಿಸುವ ಮನಸ್ಸು ನಮಗೆ ಇರಬೇಕು. ದೈವಾರಾಧನೆಯ ಮೂಲಕ ಪ್ರಕೃತಿಯನ್ನು ಪ್ರೀತಿಸುವ ತುಳು ಸಂಸ್ಕೃತಿ ಇತರ ಎಲ್ಲಾ ಸಂಸ್ಕೃತಿಗೆ ಮಾದರಿಯಾಗಿದೆ ಎಂದು ಸಾಹಿತಿ ಹಾಗೂ ವಾಗ್ಮಿ ದಯಾನಂದ ಕತ್ತಲಸಾರ್‌ ಬಣ್ಣಿಸಿದ್ದಾರೆ.

Advertisement

ತುಳುವೆರ ಜನಪದ ಕೂಟದ ಕೊಡಗು ಜಿಲ್ಲಾ ಘಟಕದ ಆಶ್ರಯದಲ್ಲಿ ನಗರದ ಕಾವೇರಿ ಹಾಲ್‌ನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಪ್ರಥಮ ವರ್ಷದ ಬಿಸು ಪರ್ಬ ಸಂತೋಷಕೂಟ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.

ಅವರು, ತುಳುವರು ಹಾಗೂ ಪ್ರಕೃತಿಗಿರುವ ಸಂಬಂಧ, ನಾಗಾರಾಧನೆ ಮತ್ತು ದೈವಾರಾಧನೆಯ ಮುಖ್ಯ ಆಶಯಗಳ ಕುರಿತು ಯುವ ಪೀಳಿಗೆಗೆ ಮನದಟ್ಟಾಗುವಂತೆ ವಿವರಿಸಿದರಲ್ಲದೆ, ತುಳು ಭಾಷೆಯನ್ನು 8ನೇ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಮೂಲಕ ಅದಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವಂತಾಗಬೇಕು ಎಂದವರು  ಆಶಿಸಿದರು. 

ತುಳುವರು ಬದುಕಿನಲ್ಲಿ ಕಷ್ಟವಿದ್ದರೂ ಸಂತೋಷ ದಿಂದ ಅನುಭವಿಸುವವರಾಗಿದ್ದು, ವರ್ಷದ 12 ತಿಂಗಳುಗಳಲ್ಲಿಯೂ  ಅವರಿಗೆ ಹಬ್ಬಗಳಿವೆ. ಇಂದು ತುಳುನಾಡು ಎಂದು ಕರೆಯಲಾಗುವ ಪ್ರದೇಶ ಹಿಂದೆ ತುಳು ರಾಜ್ಯವಾಗಿತ್ತು. ಇಲ್ಲಿ 16 ಜನಾಂಗಗಳು 48 ವಿಭಾಗಗಳಲ್ಲಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದರು. ಅದಕ್ಕಾಗಿಯೇ ಇಂದು ಕೂಡ ತುಳುವರಲ್ಲಿ 16 ಸಂಖ್ಯೆಗೆ ಹೆಚ್ಚಿನ ಮಹತ್ವವಿದೆ ಎಂದು ವಿವರಿಸಿದರು.

ತುಳುನಾಡಿನ ನೆಲದಲ್ಲಿ 108 ಖಾಯಿಲೆಗಳನ್ನು ಗುಣಪಡಿಸುವ ಗುಣವುಳ್ಳ 1008ಕ್ಕೂ ಅಧಿಕ ಔಷಧೀಯ ಗಿಡ ಮರಗಳಿದ್ದು, ನಾಗ ಬನ ದೈವ ಬನಗಳ ಸಂರಕ್ಷಣೆಯ ಹಿಂದೆ ಈ ಔಷಧೀಯ ಗಿಡಮರಗಳನ್ನುಉಳಿಸಿ ಬೆಳೆಸುವ ಉದ್ದೇಶ ಅಡಗಿದೆ ಎಂದು ಹೇಳಿದರು. ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಕಳಸಿಗೆಗೆ ಭತ್ತ ಸುರಿದು ಹಿಂಗಾರ ಅರಳಿಸುವ ಮೂಲಕ ತುಳುವೆರ ಜನಪದ ಕೂಟದ ಜಿಲ್ಲಾಧ್ಯಕ್ಷ ಕಿಲ್ಪಾಡಿ ಶೇಖರ ಭಂಡಾರಿ ಅವರು ಉದ್ಘಾಟಿಸಿದ. ಪ್ರಸ್ತಾವನೆಗೈದ ಕೂಟದ ಗೌರವ ಸಲಹೆಗಾರ ಬಾಲಕೃಷ್ಣ ರೈ ಅವರು, ಕೇವಲ 4-5 ಮಂದಿ ಸೇರಿ ಚರ್ಚಿಸಿ ಎರಡು ವರ್ಷಗಳ ಹಿಂದೆ ಆರಂಭಿಸಿದ ಈ ಸಂಸ್ಥೆ ಇಂದು ಜಿಲ್ಲೆಯಾದ್ಯಂತ ಉತ್ತಮವಾಗಿ ಸಂಘಟಿತವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಳೆಯಲಿ ಎಂದು ಆಶಿಸಿದರು. ಮುಖ್ಯ ಅತಿಥಿಯಾಗಿದ್ದ ಅಪ್ಪೆ ಟೀಚರ್‌ ತುಳು ಚಿತ್ರದ ನಾಯಕ ನಟ ಸುನಿಲ್‌ ಬಜೆಗುಂಡಿ ಮಾತನಾಡಿ, ಕೊಡಗಿನಲ್ಲಿ ಭಾಷೆಯ ಹೆಸರಿನಲ್ಲಿ ಎಲ್ಲ ತುಳುವರ ಒಗ್ಗಟ್ಟಾಗಿರುವುದು ಸಂತೋಷದ ಸಂಗತಿ ಎಂದು ಹೇಳಿದರು.

Advertisement

ಕೂಟದ ಉಪಾಧ್ಯಕ್ಷ ಬಿ.ವೈ.ಆನಂದ ರಘು ಬೆಂಗಳೂರಿನ ಉದ್ಯಮಿ ಜಯಂತಿ ಆರ್‌. ಶೆಟ್ಟಿ, ಕೂಟದ ಸ್ಥಾಪಕ ಕಾರ್ಯದರ್ಶಿ ಹರೀಶ್‌ ಆಳ್ವ, ಸಂಚಾಲಕ ಶ್ರೀಧರ್‌ ನೆಲ್ಲಿತ್ತಾಯ ಮತ್ತಿತರರು ಮಾತನಾಡಿದರು.

ಬಿಸು ಪರ್ಬ ಆಚರಣಾ ಸಮಿತಿ ಕಾರ್ಯಾಧ್ಯಕ್ಷ ಬಿ. ಬಿ. ಐತಪ್ಪ ರೈ ಅಧ್ಯಕ್ಷತೆ ವಹಿಸಿದ್ದರು.  ಪ್ರಥಮ ವರ್ಷದ ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸುವ ಗುರಿ ಹೊಂದಲಾಗಿತ್ತಾದರೂ  ಚುನಾ ವಣಾ ನೀತಿ ಸಂಹಿತೆಯಿಂದ ಸಾಧ್ಯವಾಗಲಿಲ್ಲ.ಮುಂದಿನ ದಿನಗಳಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು. 

ಉಪಾಧ್ಯಕ್ಷ ಬಿ.ಡಿ.ನಾರಾಯಣ ರೈ, ಸಲಹೆ ಗಾರ ಎಂ.ಡಿ.ನಾಣಯ್ಯ, ಮಡಿಕೇರಿ ತಾಲೂಕು ಅಧ್ಯಕ್ಷ ಪ್ರಭು ರಐ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ದಿನೇಶ್‌ ಕುಲಾಲ್‌, ವಿರಾಜಪೇಟೆ ತಾಲೂಕು ಅಧ್ಯಕ್ಷ ದಾಮೋದರ ಆಚಾರ್ಯ, ಮಡಿಕೇರಿ ನಗರ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ ರವಿ ಶೆಟ್ಟಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ ಸ್ವಾಗತಿಸಿದರು. ಬಿ.ಎಸ್‌. ಜಯಪ್ಪ ಕಾರ್ಯಕ್ರಮ ನಿರ್ವಹಿಸಿದರು. ಸಿನಿಮಾ ಮತ್ತು ಜನಪದ ನೃತ್ಯ, ಉಮೇಶ್‌ ಮಿಜಾರು ತಂಡದಿಂದ ತೆಲಿಕೆದ ಗೊಂಚಿಲ್‌ ಹಾಸ್ಯ ನಾಟಕ ಪ್ರದರ್ಶನಗೊಂಡಿತು.

ತುಳುವರ ಸಹಕಾರ ಸಂಘ
ಕಡಲ ತಟದಿಂದ ಕಾವೇರಿ ನಾಡಿಗೆ ಬಂದಿರುವ ತುಳು ಭಾಷೆಯನ್ನಾಡುವ ಎಲ್ಲ ಜಾತಿ-ಜನಾಂಗದ ಬಾಂಧವರು ಭಾಷೆಯ ಹೆಸರಿನಲ್ಲಿ ಒಗ್ಗಟ್ಟಾಗಿ ಒಂದೆಡೆ ಸೇರಿರುವ ಈ ದಿನ  ಇಲ್ಲಿನ ತುಳುವರ ಚರಿತ್ರೆಯಲ್ಲಿ ಇತಿಹಾಸ ಸೃಷ್ಟಿದ ದಿನವಾಗಿದೆ ಎಂದು ಬಣ್ಣಿಸಿದರಲ್ಲದೆ, ತುಳುವರ ಸಹಕಾರ ಸಂಘವನ್ನು ಸ್ಥಾಪಿಸುವ ಉದ್ದೇಶವಿದೆ.

– ಕಿಲ್ಪಾಡಿ ಶೇಖರ ಭಂಡಾರಿ
ತುಳುವೆರ ಜನಪದ ಕೂಟದ ಜಿಲ್ಲಾಧ್ಯಕ್ಷ 

ಪರಂಪರೆ ಉಳಿಸುವ ಉದ್ದೇಶ
ತುಳು ಭಾಷಿಗರನ್ನು ಒಗ್ಗೂಡಿಸುವ ಹಾಗೂ ನಮ್ಮ ಆಚಾರ-ವಿಚಾರ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ತುಳುವೆರ ಜನಪದ ಕೂಟ ಸ್ಥಾಪನೆಯಾಗಿದ್ದು, ಸಂಘಟನೆ ಇನ್ನಷ್ಟು ಬೆಳೆಯಬೇಕಿದೆ 
– ಬಿ.ವೈ.ಆನಂದ ರಘು 
ಉಪಾಧ್ಯಕ್ಷ ತುಳುವೆರ ಜನಪದ ಕೂಟ

Advertisement

Udayavani is now on Telegram. Click here to join our channel and stay updated with the latest news.

Next