ಬರೋಡಾ: ಕರಾವಳಿ ಕನ್ನಡಿಗರು ಮೂಲತಃ ಪ್ರಕೃತಿ ಆರಾಧಕರು. ಪ್ರಕೃತಿ ಆರಾಧನೆ ಎಂಬುದು ವೈಚಾರಿಕವಾದುದು. ಭತ್ತದ ತೆನೆಯಿಂದ ಹಿಡಿದು ನಾಗರಾಧನೆಯವರೆಗೆ ಎಲ್ಲದರಲ್ಲೂ ದೇವರನ್ನು ಕಾಣುವ ಕರಾವಳಿಗರ ಶಕ್ತಿ-ಭಕ್ತಿ ದೈವದತ್ತವಾದುದು. ಈ ಜಗತ್ತಿನಲ್ಲಿ ಎರಡು ಬಗೆಯ ಮನುಷ್ಯರಿಗೆ ಮಾತ್ರ ವಿಗ್ರಹ ಆರಾಧನೆ ನಿಷಿದ್ಧ. ಯಾವ ಧರ್ಮವನ್ನು ಆಲೋಚಿಸಲಾರದ ಮೃಗೀಯ ಮಾನವ, ಮತ್ತೂಬ್ಬ ಇವುಗಳೆಲ್ಲವನ್ನು ದಾಟಿ, ಪೂರ್ಣತೆಯನ್ನು ತಲುಪಿದ ಮುಕ್ತಾತ್ಮ ಇವರಿಗೆ ವಿಗ್ರಹ ಆರಾಧನೆ ಬೇಕಾಗಿಲ್ಲ. ಇವರಿಬ್ಬರ ಮಧ್ಯೆಯಿರುವ ನಮಗೆಲ್ಲಾ ಒಳಹೊರಗೂ ಯಾವುದಾದರೊಂದು ವಿಗ್ರಹ ಅವಶ್ಯ. ದೇವರನ್ನು ತಲುಪುವ ಸರಳ ಮಾರ್ಗವೇ ಪ್ರಕೃತಿ ಆರಾಧನೆಯಾಗಿದೆ ಎಂದು ಸ್ವಾಮಿ ವಿವೇಕಾನಂದರೇ ಹೇಳಿದ್ದಾರೆ. ಈ ದಿಸೆಯಲ್ಲಿ ತುಳು ಸಂಸ್ಕೃತಿ, ತುಳು ಪರಂಪರೆ, ದೇಶದಲ್ಲಿ ಇನ್ನೂ ಮುಂಚೂಣಿಯಲ್ಲಿದೆ ಎಂದು ಅಹ್ಮದಾಬಾದ್‌ನ ಆಧ್ಯಾತ್ಮಿಕ ಚಿಂತಕ, ಸಮಾಜ ಸೇವಕ ನಾರಾಯಣ ಎಂ. ರೈ ಅವರು ನುಡಿದರು.
ಸೆ. 30ರಂದು ಬರೋಡಾದ ತುಳು ಚಾವಡಿಯಲ್ಲಿ ಜರಗಿದ ವಾರ್ಷಿಕ ತೆನೆಹಬ್ಬ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ನಿಮ್ಮೆಲ್ಲರ ಉತ್ಸಾಹ, ಆನಂದ, ಶ್ರದ್ಧೆಯನ್ನು ಕಂಡಾಗ ಸಂತೋಷವಾಗುತ್ತಿದೆ. ಯುವ ಪೀಳಿಗೆಯನ್ನು ಇಂತಹ ಸಮಾರಂಭಗಳಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕಾದ ಅಗತ್ಯವಿದೆ ಎಂದು ನುಡಿದರು.
ಅತ್ಯಂತ ಸಂಭ್ರಮ, ಸಡಗರದೊಂದಿಗೆ ಜರಗಿದ ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ತುಳು ಸಂಘ ಬರೋಡಾದ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ ಅವರು ಮಾತನಾಡಿ, ಸ್ಥಳೀಯರಲ್ಲದೆ ರಾಜ್ಯದ ವಿಭಿನ್ನ ನಗರಗಳ ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿರುವುದು ಸಮಾರಂಭಕ್ಕೆ ಹೆಚ್ಚಿನ ಮೆರುಗು ತಂದಿದೆ ಎಂದು ನುಡಿದು ಶುಭ ಹಾರೈಸಿದರು.
ಆರಂಭದಲ್ಲಿ ತುಳುನಾಡಿನ ಪ್ರಾಚೀನ ಸಂಪ್ರದಾಯದಂತೆ ಚೆಂಡೆ-ಮದ್ದಳೆ, ಕೊಂಬು ವಾದ್ಯಗಳೊಂದಿಗೆ ಭತ್ತದ ತೆನೆಯನ್ನು ಮೆರವಣಿಗೆಯಲ್ಲಿ ವೇದಿಕೆಗೆ ತರಲಾಯಿತು. ಸಂಘದ ಹಿರಿಯರಾದ ರಾಮದಾಸ್ ಶೆಟ್ಟಿ ಅವರು ತೆನೆಗೆ ಹಾಲಿನ ಅಭಿಷೇಕಗೈದು, ಮಹಾಮಂಗಳಾರತಿ ಮಾಡಿ ವಿಧಿವತ್ತಾಗಿ ಭಕ್ತದ ತೆನೆಗಳನ್ನು ಎಲ್ಲರಿಗೂ ಹಂಚಿ ಶುಭ ಹಾರೈಸಿದರು.
ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ್ ಬಿ. ಶೆಟ್ಟಿ ಬೆಳ್ತಂಗಡಿ ಅವರು ಸ್ವಾಗತಿಸಿ, ತೆನೆಹಬ್ಬದ ಮಹತ್ವವನ್ನು ವಿವರಿಸಿ, ತೆನೆಹಬ್ಬ ರೈತಾಪಿ ಕರಾವಳಿ ಕನ್ನಡಿಗರ ಮಹತ್ವದ ಅರ್ಥಪೂರ್ಣವಾದ ಪ್ರಕೃತಿ ಆರಾಧನೆಯ ಹಬ್ಬವಾಗಿದೆ. ತುಳುನಾಡಿನಲ್ಲಿ ಅದನ್ನು ದಶಕದ ಹಿಂದೆಯೇ ಮರೆತು ಬಿಡಲಾಗಿದ್ದರೂ, ಬರೋಡಾದ ತುಳು ಸಂಘ ಅದಕ್ಕೆ ಮರುಜೀವ ನೀಡಿ, ಸಾಮೂಹಿಕ ಮಟ್ಟದಲ್ಲಿ ಅದನ್ನು ಆಚರಿಸಿಕೊಂಡು ಬರುತ್ತಿದೆ. ಇದು ತುಳು ಸಂಘದ ಸಂಕಲ್ಪವೂ ಆಗಿದೆ ಎಂದು ನುಡಿದರು.
ಅಹ್ಮದಾಬಾದ್‌ನ ಬಂಟರ ಸಂಘದ ಅಧ್ಯಕ್ಷ ಅಪ್ಪು ಶೆಟ್ಟಿ ಅವರು ಮಾತನಾಡಿ, ತುಳು ಸಂಘ ಬರೋಡದ ಸಂಸ್ಕೃತಿ ಯಜ್ಞ ಶ್ಲಾಘನೀಯವಾಗಿದೆ. ಇವು ಸಮಸ್ತ ತುಳು-ಕನ್ನಡಿಗರಿಗೆ ಮಾದರಿಯಾಗಿದೆ ಎಂದರು. ಹಿರಿಯರಾದ ಎಸ್ಕೆ ಹಳೆಯಂಗಡಿ ಅವರು ಮಾತನಾಡಿ, ತುಳು ಚಾವಡಿ ಮೂವತ್ತು ವರ್ಷಗಳ ಪರಿಶ್ರಮದ ಚೊಚ್ಚಲ ಕೂಸು. ಮುಂದಿನ ತುಳು ಪೀಳಿಗೆಗೆ ತುಳು ಕಲಿಕೆಯ ಗುರುಕುಲ ಇದಾಗಿದೆ ಎಂದರು. ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಮಂಜುಳಾ ಗೌಡ ವಂದಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.