ಕಾಸರಗೋಡು: ಕಾಸರಗೋಡು ಸಂಸ್ಕೃತಿ ವೈವಿಧ್ಯತೆಯ ತುಳುನಾಡಿನ ಕಲಾ ಪ್ರಕಾರಗಳಾದ ಚೆನ್ನು ಕುಣಿತ, ಕನ್ಯಾಪು, ಕಂಗೀಲು, ಮಾದಿರೆ, ಕರಂಗೋಲು, ಪಿಲಿ ಪಂಜಿ ನಲಿಕೆ, ಪಾಡªನಗಳನ್ನು ಶಾಲಾ ಕಲೋತ್ಸವಗಳ ಸ್ಪರ್ಧೆಗಳಲ್ಲಿ ಅಳವಡಿಸಬೇಕೆಂದು ಸ್ಟೇಜ್ ಆರ್ಟಿಸ್ಟ್ ಆ್ಯಂಡ್ ವರ್ಕರ್ ಅಸೋಸಿಯೇಶನ್ ಆಫ್ ಕೇರಳ (ಸವಾಖ್) ಜಿಲ್ಲಾ ಸಮಿತಿ ಸಭೆ ಆಗ್ರಹಿಸಿದೆ.
ಕಲಾವಿದರ ಬದುಕಿನ ಸ್ಥಿತಿಗತಿಗಳನ್ನು ಅಭಿವೃದ್ಧಿಪಡಿಸಲು ಇರುವ ಆರ್ಥಿಕ ಸಹಾಯ ಹಾಗು ಸಬ್ಸಿಡಿಯನ್ನು ಸರಕಾರ ಅಂಗೀಕರಿಸಬೇಕೆಂದು ಸಮಿತಿ ಅಭಿಪ್ರಾಯಪಟ್ಟಿದೆ.
ಸವಾಖ್ ರಾಜ್ಯ ಸಮಿತಿ ಅಧ್ಯಕ್ಷ ವಿಶಾಗನ್ ಸಭೆಯನ್ನು ಉದ್ಘಾಟಿಸಿದರು. ರಾಜ್ಯ ಸಮಿತಿ ಉಪಾಧ್ಯಕ್ಷ ರಾಜೇಶ್ ಪಾಲಂ ಗಾಡ್ ಅಧ್ಯಕ್ಷತೆ ವಹಿಸಿದರು.
ಕಲ್ಮಾಡಿ ಸದಾಶಿವ ಆಚಾರ್ಯ, ಹರಿದಾಸ್ ಚೆರುಗುನ್ನು, ಬಿಂದು ಸಜಿತ್ ಕುಮಾರ್, ಆರ್.ಗೋವಿಂದ್, ರವೀಂದ್ರ ರೈ ಮಲ್ಲಾವರ, ಕೆ. ಮುರಳೀಧರ ಮೊದಲಾದವರು ಮಾತನಾಡಿದರು.
ನೂತನ ಜಿಲ್ಲಾ ಸಮಿತಿಗೆ ಪದಾಧಿಕಾರಿಗಳಾಗಿ ಕಲ್ಮಾಡಿ ಸದಾ ಶಿವ ಆಚಾರ್ಯ (ರಕ್ಷಾಧಿಕಾರಿ), ಉಮೇಶ್ ಸಾಲಿಯಾನ್ (ಅಧ್ಯಕ್ಷರು), ಆರ್ಟಿಸ್ಟ್ ಅಬ್ದುಲ್ಲ, ದಿವಾಣ ಶಿವಶಂಕರ್, ಕೆ.ವಿ. ರಮೇಶ್ (ಉಪಾಧ್ಯಕ್ಷರು), ಡಾ| ರಾಜೇಶ್ ಆಳ್ವ ಬದಿಯಡ್ಕ (ಕಾರ್ಯದರ್ಶಿ), ವಿಜಯ ಮಯ್ಯ, ಕೃಷ್ಣ ಜಿ. ಮಂಜೇಶ್ವರ, ಲತಾ ಶಶಿಧರನ್, ಕೆ. ಶ್ರೀಲತಾ (ಜೊತೆ ಕಾರ್ಯದರ್ಶಿ). ಉಲ್ಸಾನ್ ಸಿ.ಎಚ್. (ಕೋಶಾಧಿಕಾರಿ) ಆಯ್ಕೆಯಾದರು.
ಅ. 20 ಮತ್ತು 21ರಂದು ಕಣ್ಣೂರಿನಲ್ಲಿ ನಡೆಯಲಿರುವ ರಾಜ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಲು ತೀರ್ಮಾನಿಸಲಾಯಿತು.
ಸವಾಖ್‌ನ ನೂತನ ಕಚೇರಿಯನ್ನು ಕಾಸರಗೋಡಿನಲ್ಲಿ ತೆರೆದು ಕಾರ್ಯಾಚರಿಸಲು ಹಾಗು ಅ. 9ರಂದು ಸಂಜೆ 4 ಗಂಟೆಗೆ ಮಂಜೇಶ್ವರ ಶಾರದಾ ಆರ್ಟ್ಸ್ ಕಚೇರಿಯಲ್ಲಿ ಜಿಲ್ಲಾ ಸಮಿತಿ ಸಭೆ ಹಾಗೂ ತಾಲೂಕು ಸಮಿತಿ ರಚನೆ ನಡೆಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.