Advertisement

ಜೇಸಿಐಯಿಂದ ಸೌಹಾರ್ದಯುತ ವಾತಾವರಣ ಬೆಳೆಯಲು ಸಾಧ್ಯ: ಅರವಿಂದ ಬೋಳಾರ್‌

04:49 PM Jan 02, 2020 | Hari Prasad |

ಉಪ್ಪಿನಂಗಡಿ: ಜೇಸಿಐ ಶಿಸ್ತು, ಸಮಯಪ್ರಜ್ಞೆಯನ್ನು ಕಲಿಸುವುದರೊಂದಿಗೆ ಸಮಾಜದಲ್ಲಿ ಒಗ್ಗಟ್ಟು ಹಾಗೂ ಸೌಹಾರ್ದತೆಯ ವಾತಾವರಣವನ್ನು ಬೆಳೆಸುತ್ತದೆ ಎಂದು ರಂಗಭೂಮಿ ಕಲಾವಿದ, ಚಲನಚಿತ್ರ ನಟ ಅರವಿಂದ ಬೋಳಾರ್‌ ತಿಳಿಸಿದರು. ನೆಕ್ಕಿಲಾಡಿಯ ಶ್ರೀ ಗುರು ರಾಘವೇಂದ್ರ ಮಠದ ಸಭಾಂಗಣದಲ್ಲಿ ನಡೆದ ಜೇಸಿಐ ನೆಕ್ಕಿಲಾಡಿ ಘಟಕದ ಪದಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

Advertisement

ಜೇಸಿಐಯಂತಹ ಸಂಘಟನೆಗಳಿಂದ ಉತ್ತಮ ಸಮಾಜಮುಖೀ ಕಾರ್ಯಗಳು ನಡೆಯುತ್ತಿದ್ದು, ಇದು ಪರಿಸರದಲ್ಲಿ ಸೌಹಾರ್ದಯುತ ವಾತಾವರಣವನ್ನು ಬೆಳೆಸುತ್ತದೆ. ಸಮಾಜ ಸೇವೆ ಮಾಡಲು ರಾಜಕೀಯಕ್ಕೆ ಸೇರಬೇಕೆಂದೇನಿಲ್ಲ. ಜೇಸಿಐಯಂತಹ ಸಂಘಟನೆ ಸೇರಿದಂತೆ ಉತ್ತಮ ಸಮಾಜಮುಖಿ ಕೆಲಸಗಳನ್ನು ಮಾಡುವ ಮನೋಭಾವ ನಮ್ಮಲ್ಲಿ ಬೆಳೆಯಲು ಸಾಧ್ಯ ಎಂದರು.

ನೂತನ ಪದಾಧಿಕಾರಿಗಳಿಗೆ ಪದಪ್ರದಾನ ನೆರವೇರಿಸಿ ಮಾತನಾಡಿದ ಜೇಸಿಐಯ ನಿಕಟಪೂರ್ವ ಇವಿಪಿ ಮುರಳೀ ಶ್ಯಾಂ ಮಾತನಾಡಿ, ಜೇಸಿಐ ನಾಯಕತ್ವ ಗುಣವನ್ನು ಬೆಳೆಸುವುದಲ್ಲದೇ, ವ್ಯಕ್ತಿಯೋರ್ವನನ್ನು ಸಮಾಜದಲ್ಲಿ ಉತ್ತಮ ನಾಗರಿಕನನ್ನಾಗಿ ರೂಪಿಸುತ್ತದೆ. ನೆಕ್ಕಿಲಾಡಿ ಜೇಸಿಐಯ ಸಮಾಜಮುಖೀ ಕಾರ್ಯಗಳು ನಿರಂತರ ಮುಂದುವರಿಯಲಿ ಎಂದರು.

ಜೇಸಿಐ ವಲಯ 15ರ ಅಧ್ಯಕ್ಷ ಮುರಳೀ ಶ್ಯಾಂ ಮಾತನಾಡಿ, ಜೇಸಿಐಗೆ ಸೇರುವುದರಿಂದ ನಮ್ಮಲ್ಲಿ ಗುಣಾತ್ಮಕ ಬದಲಾವಣೆ ಸಾಧ್ಯ. ಸಂಸ್ಥೆಯ ಸ್ಥಾಪಕಾಧ್ಯಕ್ಷ ಶಿವಕುಮಾರ್‌ ಬಾರಿತ್ತಾಯ ಹಾಗೂ 2019ರ ಅಧ್ಯಕ್ಷ ವಿನೀತ್‌ ಶಗ್ರಿತ್ತಾಯ ಜೋಡೆತ್ತುಗಳಂತಿದ್ದು, ಎಲ್ಲರ ಪರಿಶ್ರಮದಿಂದಾಗಿ ನೆಕ್ಕಿಲಾಡಿ ಜೇಸಿಐಯು ಪುಟ್ಟ ಮಗುವಾಗಿದ್ದರೂ ನಿರೀಕ್ಷೆಗೂ ಮೀರಿದ ಸಮಾಜಮುಖಿ ಕೆಲಸಗಳು ಅದರಿಂದಾಗಿವೆ. ಹಾಗಾಗಿ ಈ ಸಂಸ್ಥೆಯಿಂದ ಇಬ್ಬರು ವಲಯಾಧಿಕಾರಿಗಳು ಆಯ್ಕೆಯಾಗುವಂತಾಗಿದೆ. ಇದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಎಂದರು.

ನೂತನ ಅಧ್ಯಕ್ಷ ರಮೇಶ್‌ ಸುಭಾಶ್‌ನಗರ ಮಾತನಾಡಿ, ನನ್ನ ಅವಧಿಯಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಮಾಡುವ ಕನಸಿದ್ದು, ಇದಕ್ಕೆ ಎಲ್ಲರ ಸಹಕಾರ ಕೋರಿದರು. ಈ ಸಂದರ್ಭ ರಂಗಭೂಮಿ ಕಲಾವಿದ ಅರವಿಂದ ಬೋಳಾರ್‌ ಹಾಗೂ ಸಾಮಾಜಿಕ ಕಾರ್ಯಕರ್ತ ದಿವಾಕರ ಕೊಳಂಜಿಲಡ್ಡ ಅವರನ್ನು ಸನ್ಮಾನಿಸಲಾಯಿತು. ಸಹಕಾರ ನೀಡಿದವರನ್ನು ಗೌರವಿಸಲಾಯಿತು.

Advertisement

ಉಪ್ಪಿನಂಗಡಿ ವಿಜಯ – ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಗೌರವಾಧ್ಯಕ್ಷ ಉಮೇಶ್‌ ಶೆಣೈ, ವಲಯ 15ರ ರೀಜನ್‌ ಜಿಯ ಝೆಡ್‌ವಿಪಿ ಪ್ರದೀಪ್‌ ಬಾಕಿಲ, ನಿಕಟಪೂರ್ವ ವಲಯಾಧ್ಯಕ್ಷ ಅಶೋಕ್‌ ಚೂಂತಾರು, ನೆಕ್ಕಿಲಾಡಿ ಜೇಸಿಐಯ ಸ್ಥಾಪಕಾಧ್ಯಕ್ಷ ಶಿವಕುಮಾರ್‌ ಬಾರಿತ್ತಾಯ ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಐಪಿಪಿ ಅಮೀತಾ ಹರೀಶ್‌, ಜೇಸಿರೇಟ್‌ ನಾಗವೇಣಿ ಉಪಸ್ಥಿತರಿದ್ದರು.
ಜೇಸಿಐ ನೆಕ್ಕಿಲಾಡಿಯ ನಿಕಟ ಪೂರ್ವಾಧ್ಯಕ್ಷ ವಿನೀತ್‌ ಶಗ್ರಿತ್ತಾಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜೇಸಿಐ ನೂತನ ಕಾರ್ಯದರ್ಶಿ ಅನಿ ಮಿನೇಜಸ್‌ ವಂದಿಸಿದರು.

ನೆಕ್ಕಿಲಾಡಿ ಜೇಸಿಐ ಸಂಸ್ಥೆಯು ಮೂರನೇ ವರ್ಷವನ್ನು ಪೂರೈಸಿದ್ದರೂ ಉತ್ತಮ ಸಮಾಜಮುಖಿ ಕೆಲಸ ಕಾರ್ಯಗಳ ಮೂಲಕ ಎಲ್ಲೆಡೆ ಉತ್ತಮ ಕ್ರಿಯಾಶೀಲ ಸಂಸ್ಥೆಯೆಂದು ಗುರುತಿಸಿಕೊಂಡಿದೆ. 2019ರ ಅವಧಿಯಲ್ಲಿ ಹಲವು ಸಮಾಜಮುಖಿ ಕಾರ್ಯಗಳು ನಡೆದಿದ್ದು, ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ತನ್ನದಾಗಿಸಿಕೊಂಡಿದೆ. ಇದರಿಂದಾಗಿ ಈ ಸಂಸ್ಥೆಯಿಂದ ಇಬ್ಬರನ್ನು ಈ ಬಾರಿ ವಲಯಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಇದರ ಕ್ರಿಯಾಶೀಲತೆಗೆ, ಉತ್ತಮ ಸಮಾಜಮುಖಿ ಕೆಲಸಗಳಿಗೆ ಕಾರ್ಯಕ್ರಮದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂತು.

Advertisement

Udayavani is now on Telegram. Click here to join our channel and stay updated with the latest news.

Next