ಫಳ್ನೀರ್: ದೂರದ ಅಮೆರಿಕಕ್ಕೂ ತುಳುನಾಡಿನ ತುಳಸಿ ಪೂಜೆಗೂ ಎಲ್ಲಿಯ ಸಂಬಂಧ? ಎಂದು ಯಾರಾದರೂ ಪ್ರಶ್ನೆ ಕೇಳಿದರೆ, ಸಂಬಂಧವಿದೆ ಎಂದು ತೋರಿಸಿಕೊಟ್ಟಿದ್ದಾರೆ ಅಮೆರಿಕ ಪ್ರಜೆ ಕೈಲಿ ಸ್ಟೋಜ್!
ಆಯುರ್ವೇದಕ್ಕೆ ಸಂಬಂಧಿಸಿದ ಸಂಶೋಧನ ಉದ್ದೇಶದಿಂದ ಸುಮಾರು 8 ತಿಂಗಳುಗಳಿಂದ ಮಂಗಳೂರಿನಲ್ಲಿ ನೆಲೆಸಿರುವ ಕೈಲಿ ಅವರು ಈ ಬಾರಿಯ ತುಳಸಿ ಪೂಜೆಯನ್ನು ಸಂಭ್ರಮದಿಂದಲೇ ಆಚರಿಸಿದ್ದಾರೆ. ತಮ್ಮ ಸ್ನೇಹಿತೆ, ನಗರದ ಫಳ್ನೀರ್ ನಿವಾಸಿ, ಸುಲಕ್ಷಣಾ ಕಾರ್ಕಳ ಅವರ ಮನೆಯಲ್ಲಿ ಪೂಜೆಯ ಸಂಭ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಮಾರುಕಟ್ಟೆಗೆ ಹೋಗಿ ಕಬ್ಬು, ಹೂ-ಹಣ್ಣು ತರುವುದರಿಂದ ಹಿಡಿದು, ತುಳಸಿಕಟ್ಟೆಗೆ ಪೈಂಟ್ ಮಾಡುವುದು, ಕಬ್ಬು ಹೂವಿನ ಅಲಂಕಾರ, ರಂಗೋಲಿ ಹಾಕುವುದು ಎಲ್ಲವನ್ನೂ ಅವರೇ ಸ್ವತಃ ಮಾಡಿದ್ದಾರೆ. ರಾತ್ರಿ ಪೂಜೆಯಲ್ಲೂ ಭಾಗಿಯಾಗಿದ್ದಾರೆ. ಆ ಮೂಲಕ ತುಳುನಾಡಿನ ಸಂಸ್ಕೃತಿಯನ್ನು ಅರಿಯುವ ಪ್ರಯತ್ನದಲ್ಲಿದ್ದಾರೆ.
ಅಮೆರಿಕದ ಫುಲ್‌ಬ್ರೈಟ್ ನೆಹರೂ ರಿಸರ್ಚ್ ಸ್ಕಾಲರ್ ಆಗಿರುವ ಕೈಲಿ ಸ್ಟೋಜ್ ಅವರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಡಾ| ಶಶಿಕಿರಣ್ ಅವರ ಮಾರ್ಗದರ್ಶನದಲ್ಲಿ ಅನ್ವಯಿಕ ಜೀವಶಾಸ್ತ್ರ ಪ್ರಯೋಗಾಲಯದಲ್ಲಿ “ಇನ್ ವೆಸ್ಟಿಗೇಟಿಂಗ್ ಏನ್ಶಿಯಂಟ್ ಅಯುರ್ವೇದಿಕ್ ಮೆಡಿಸಿನ್ ಫ್ರಮ್ ದಿ ಐರನ್ ಏಜ್’ ವಿಷಯದಲ್ಲಿ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ತಮ್ಮ ಈ ಅವಧಿಯಲ್ಲಿ ತುಳು ಸಂಸ್ಕೃತಿಯನ್ನು, ಇಲ್ಲಿನ ಆಹಾರ ಆಚರಣೆ, ಜೀವನ ಕ್ರಮವನ್ನೂ ಅರಿಯುವ ಪ್ರಯತ್ನ ಮಾಡಿದ್ದಾರೆ. ಕಂಬಳ, ದೈವಾರಾಧನ ಸ್ಥಳಗಳಿಗೆ ಭೇಟಿ ನೀಡಿದ್ದು, ಯಕ್ಷಗಾನ ಮತ್ತು ಯೋಗ ಕಲಿಯುತ್ತಿದ್ದಾರೆ. ವಿಭಾಗದ ಸಂಶೋಧಕರಾದ ಸುಲಕ್ಷಣಾ ಕಾರ್ಕಳ ಮತ್ತು ಸುಧೀಕ್ಷಾ ಕಿರಣ್ ಅವರು ಕೈಲಿ ಅವರಿಗೆ ತುಳು ಸಂಸ್ಕೃತಿಯ ಪರಿಚಯ ಮಾಡಿಸುತ್ತಿದ್ದಾರೆ. ಸದ್ಯ ಮಂಗಳೂರಿನ ವೆಲೆನ್ಸಿಯಾದಲ್ಲಿ ವಾಸವಾಗಿದ್ದಾರೆ.