Advertisement

ತುಳಸಿಗೇರಿ ಯಾತ್ರಿ ನಿವಾಸ ಉದ್ಘಾಟನೆ ಎಂದು?

05:34 PM Dec 13, 2018 | Team Udayavani |

ಕಲಾದಗಿ: ತುಳಸಿಗೇರಿ ಹನಮಪ್ಪನ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರ ವಾಸ್ತವ್ಯಕ್ಕೆ ನಿರ್ಮಾಣಗೊಂಡ ಹೈಟೆಕ್‌ ಅತಿಥಿಗೃಹ ಉದ್ಘಾಟನೆಗೆ ಮುಹೂರ್ತ ಎಂದು ಪ್ರಶ್ನೆ ಮೂಡಿದೆ. ಅತಿಥಿ ಗೃಹ ನಿರ್ಮಾಣಗೊಂಡು ಒಂದು ವರ್ಷ ಕಳೆದರೂ ಉದ್ಘಾಟನೆ ಭಾಗ್ಯವೇ ದೊರೆತಿಲ್ಲ. ಡಿ. 22ರಿಂದ 29ವರೆಗೆ ನಡೆಯುವ ಜಾತ್ರಾ ಮಹೋತ್ಸವಕ್ಕೆ ಮುನ್ನ ಉದ್ಘಾಟನೆಗೊಳ್ಳಬಹುದು ಎಂಬ ನಿರೀಕ್ಷೆಗಳಿವೆ. ಮುಜರಾಯಿ ಇಲಾಖೆಯ 1 ಕೋಟಿ ಅನುದಾನದಲ್ಲಿ ನಿರ್ಮಿಸಲಾಗಿರುವ ಯಾತ್ರಿ ನಿವಾಸದ ಶಂಕುಸ್ಥಾಪನೆಯನ್ನು 2016ರ ಸೆಪ್ಟೆಂಬರ್‌ 28ರಂದು ಅಂದಿನ ಶಾಸಕ ಜೆ.ಟಿ. ಪಾಟೀಲರು ನೆರವೇರಿಸಿದ್ದರು.

Advertisement

ಕಳೆದ ವರ್ಷದ ಜಾತ್ರಾ ಮಹೋತ್ಸವ ಮುಂಚೆ ಯಾತ್ರಿ ನಿವಾಸ ಪೂರ್ಣಗೊಂಡಿದ್ದರೂ ಉದ್ಘಾಟನೆಗೊಂಡಿರಲಿಲ್ಲ. ಜಾತ್ರಾ ಮಹೋತ್ಸಕ್ಕೆ ಆಗಮಿಸುವ ಭಕ್ತರಿಗೆ ಬಯಲೇ ಆಲಯ ಎನ್ನುವಂತಾಗಿ ಅಂದಿನ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತ್ತು.

ಉದ್ಘಾಟನೆಗೆ ವಿಳಂಬ ಏಕೆ?: ದೇವಾಲಯ ಆಡಳಿವನ್ನು ತಾಲೂಕು ಆಡಳಿತ ನಿರ್ವಹಿಸುತ್ತಿದೆ. ಯಾತ್ರಿ ನಿವಾಸದ ಭೂ ದಾನಿಗಳಾದ ಮಾಜಿ ಶಾಸಕ ಪಿ.ಎಚ್‌. ಪೂಜಾರ ಅವರು ಯಾತ್ರಿ ನಿವಾಸಕ್ಕೆ ತಮ್ಮ ತಾಯಿ ದಿ| ಕಾಶೀಬಾಯಿ ಹನಮಪ್ಪ ಪೂಜಾರಿ ಹೆಸರು ನಾಮಕರಣ ಮಾಡಲು ಭೂದಾನದ ವೇಳೆ ಕರಾರು ಒಪ್ಪಂದ ಮಾಡಿಕೊಂಡಿದ್ದರು. ನಾಮಕರಣದ ಸಣ್ಣ ಪುಟ್ಟ ಗೊಂದಲಗಳಿಂದ ನಡುವೆ ಯಾತ್ರಿ ನಿವಾಸ ಉದ್ಘಾಟನೆಯಾಗಿರಲಿಲ್ಲ.

ನಾಮಕರಣಕ್ಕೆ ನಿರ್ದೇಶನ: ಯಾತ್ರಿ ನಿವಾಸಕ್ಕೆ ದಿ| ಕಾಶೀಬಾಯಿ ಹನಮಪ್ಪ ಪೂಜಾರಿ ಯಾತ್ರಿ ನಿವಾಸ ಎಂದು ನಾಮಕರಣ ಮಾಡಿ ಉದ್ಘಾಟನೆ ಮಾಡಲು ದತ್ತಿ ಇಲಾಖೆಯ ಆಯುಕ್ತರು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ.

ಯಾತ್ರಿ ನಿವಾಸಕ್ಕೆ ಬೇಕಾದ ಮೂಲಭೂತ ಅವಶ್ಯಕತೆಗಳ ಮಾಹಿತಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಯಾತ್ರಿ ನಿವಾಸದಲ್ಲಿ ಅವಶ್ಯಕ ಸಲಕರಣೆಗಳ ಅಗತ್ಯತೆಯಿದೆ. ಅವುಗಳನ್ನು ಪೂರೈಕೆ ಮಾಡಿಕೊಂಡು ಶೀಘ್ರದಲ್ಲೇ ಯಾತ್ರಿ ನಿವಾಸ ಉದ್ಘಾಟಿಸಲಾಗುವುದು.
ಮೋಹನ ನಾಗಠಾಣ,
ಬಾಗಲಕೋಟೆ ತಹಶೀಲ್ದಾರ್‌.

Advertisement

ಚಂದ್ರಶೇಖರ ಹಡಪದ 

Advertisement

Udayavani is now on Telegram. Click here to join our channel and stay updated with the latest news.

Next