Advertisement

ಪ್ರಸೀದ ಹರಿವಲ್ಲಭೆ

06:00 AM Nov 18, 2018 | |

ನಾಡಿದ್ದು ಮಂಗಳವಾರ ಊರಿನಲ್ಲೆಲ್ಲ ತುಳಸೀ ಪೂಜೆಯ ಸಂಭ್ರಮ. ಕಾರ್ತೀಕ ಮಾಸದಲ್ಲಿ ಬರುವ ದೀಪಾವಳಿಯು ದೀಪಗಳ ಹಬ್ಬವಾದರೆ ನಂತರದ ದ್ವಾದಶಿಯಂದು ಬರುವ ಉತ್ಥಾನ ದ್ವಾದಶಿಯು ಹೆಂಗಳೆಯರ ಹಬ್ಬ. ಉತ್ಥಾನ ಎಂದರೆ ಏಳು, ಎಚ್ಚರಗೊಳ್ಳು ಎಂದು ಅರ್ಥ. ಚಾತುರ್ಮಾಸದ ಕಡೆಯ ದಿನವಾದ ಇದು ವಿಷ್ಣುವನ್ನು ಜಾಗೃತಗೊಳಿಸುವ ದಿನ. 

Advertisement

ಉತ್ಥಾನ ದ್ವಾದಶಿಯ ಅರ್ಥ
ಶಂಖಾಸುರನೆಂಬ ರಾಕ್ಷಸನನ್ನು ಕೊಂದ ವಿಷ್ಣುವು ಆಷಾಢಮಾಸದ ಏಕಾದಶಿಯಂದು ಆಯಾಸದ ಪರಿಹಾರಕ್ಕೋಸ್ಕರ ದೀರ್ಘ‌ ನಿದ್ರೆಗೊಳಗಾದವನು ನಾಲ್ಕು ತಿಂಗಳ ನಂತರ ಕಾರ್ತೀಕ ಮಾಸ ಶುಕ್ಲ ದ್ವಾದಶಿಯಂದು ಎಚ್ಚರಗೊಳ್ಳುತ್ತಾನೆ. ಆದ್ದರಿಂದಲೇ ಈ ಹಬ್ಬಕ್ಕೆ “ಉತ್ಥಾನ ದ್ವಾದಶಿ’ ಎಂಬ ಹೆಸರು ಬಂದಿರಬಹುದು.

ಕಿರು ದೀಪಾವಳಿ
ಆಶ್ವಯುಜ ಮಾಸದ ನರಕ ಚತುರ್ದಶಿಯ ನಂತರ ಪಾಡ್ಯದಂದು ಶುರುವಾಗುವ ತುಳಸಿ ಅರ್ಚನೆಯು ನಿರಂತರವಾಗಿ 12 ದಿನಗಳವರೆಗೆ ಮುಂದುವರೆಯುತ್ತದೆ. ಎಲ್ಲರ ಮನೆಗಳಲ್ಲೂ ರಾತ್ರಿಯ ವೇಳೆ ತುಳಸೀ ಗಿಡದ ಬಳಿ ಕೃಷ್ಣನ ವಿಗ್ರಹವನ್ನಿಟ್ಟು , ಅದಕ್ಕೆ ಅರ್ಚನೆ, ಆರತಿ ಮಾಡಿ, ತುಳಸೀ ಸಂಕೀರ್ತನೆಯೊಂದಿಗೆ ಭಜನೆ ಮಾಡುತ್ತಾರೆ. ದ್ವಾದಶಿಯಂದು ಬೆಳಿಗ್ಗೆ ತುಳಸೀಕಟ್ಟೆಯನ್ನು ವಿಶೇಷವಾಗಿ ಬಾಳೆಕಂದು, ಹೂವು, ರಂಗೋಲಿಗಳಿಂದ ಅಲಂಕರಿಸಿ, ನೆಲ್ಲಿಗಿಡ, ಅಗಸೆಗಿಡವನ್ನು ಕಟ್ಟೆಯೊಳಗೆ ನೆಡುತ್ತಾರೆ. ನಂತರ ನೆಲ್ಲಿಕಾಯಿಗಳು, ಬಾಳೆದಿಂಡನ್ನು ಕೊರೆದು ಸೊಡರಿನಂತೆ ಮಾಡಿ ತುಪ್ಪಹಾಕಿ ದೀಪಗಳನ್ನು  ಬೆಳಗಿಸಿ ದೋಸೆ, ಪಂಚಕಜ್ಜಾಯಗಳ ಸಮರ್ಪಣೆಯೊಂದಿಗೆ ದೇವಿಯನ್ನು ಆರಾಧಿಸುತ್ತಾರೆ. ಮತ್ತೂಮ್ಮೆ ಮುಸ್ಸಂಜೆಯಲ್ಲಿ ಪೂಜಿಸಿ ಪಟಾಕಿ, ದುರುಸುಗಳನ್ನು ಸಿಡಿಸಿ ಸಂಭ್ರಮಿಸುತ್ತಾರೆ. ಹಾಗಾಗಿ, ತುಳಸೀಹಬ್ಬವನ್ನು “ಕಿರುದೀಪಾವಳಿ’ ಎಂದೂ ಕರೆಯುತ್ತಾರೆ. ಸನಾತನ ಸಂಪ್ರದಾಯದ ಪ್ರಕಾರ ಎಲ್ಲರ ಮನೆಗಳಲ್ಲೂ ತುಳಸೀಕಟ್ಟೆಯು ಇದ್ದೇ ಇರುತ್ತದೆ. ಮನೆಯ ಗೃಹಿಣಿಯರು ದಿವಸವೂ ಬೆಳಿಗ್ಗೆ ಮತ್ತು ಸಾಯಂಕಾಲ ತುಳಸೀ ದೇವಿಗೆ ದೀಪವಿಟ್ಟು ಮುತ್ತೈದೆತನಕ್ಕಾಗಿ ಬೇಡಿಕೊಳ್ಳುತ್ತಾರೆ.

ಬೃಂದಾವನದ ಹಿನ್ನೆಲೆ
ತುಳಸಿಯ ಹುಟ್ಟಿಗೆ ಅನೇಕ ಕತೆಗಳು ಪ್ರತೀತಿಯಲ್ಲಿವೆ. ತುಳಸಿಯನ್ನು ವೃಂದಾ, ಬೃಂದಾ, ಪ್ರಸೀದ ಹೀಗೆ ನಾನಾ ಹೆಸರುಗಳಿಂದಲೂ ಕರೆಯುತ್ತಾರೆ. ಸಂಸ್ಕೃತದಲ್ಲಿ “ಮಂಜರಿ’ ಎನ್ನುತ್ತಾರೆ. ಸ್ವಲ್ಪ ಕೆಂಪಾಗಿರುವ ತುಳಸಿಯನ್ನು ಕೃಷ್ಣ ತುಳಸಿ ಎನ್ನುತ್ತಾರೆ. ಪಚ್ಚೆ ಬಣ್ಣದ ತುಳಸಿ ಶ್ರೀತುಳಸಿ ಎಂಬ ಹೆಸರು ಪಡೆದುಕೊಂಡಿದೆ.

ವೃಂದಾವನ ಎಂದು ಹೆಸರು ಬರಲು ಒಂದು ಪೌರಾಣಿಕ ಹಿನ್ನೆಲೆ ಇದೆ. ಹಿಂದೆ ವೃಂದಾ ಎಂಬ ಹೆಸರಿನ ಒಬ್ಬಳು ಸ್ತ್ರೀಯು ಜಲಂಧರ ಎಂಬ ರಾಕ್ಷಸನ ಪತ್ನಿಯಾಗಿದ್ದಳು. ಅವಳು ಮಹಾ ಪತಿವ್ರತೆ ಕೂಡ. ಅವಳ ಪಾತಿವ್ರತ್ಯವನ್ನು ಭಂಗಗೊಳಿಸದ ಹೊರತು ಆ ರಾಕ್ಷಸನ ಸಂಹಾರ ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ, ದೇವತೆಗಳೆಲ್ಲ ವಿಷ್ಣುವಿನ ಮೊರೆ ಹೋಗುತ್ತಾರೆ.

Advertisement

ಯುದ್ಧ ನಡೆಯುತ್ತಿರುವ ಸಮಯದಲ್ಲಿ ವಿಷ್ಣುವು ಜಲಂಧರನ ವೇಷವನ್ನು ಹಾಕಿ ವೃಂದಾಳ ಬಳಿ ಬಂದು ಮೋಸದಿಂದ ಅವಳೊಂದಿಗೆ ಸಮಾಗಮ ಹೊಂದಿದ ತಕ್ಷಣ ಆ ಕಡೆ ಜಲಂಧರನ ವಧೆಯಾಗಿರುತ್ತದೆ. ವಿಷ್ಣುವಿನ ಮೋಸದಿಂದ ಕೋಪಗೊಂಡ ವೃಂದಾ “ನಿನಗೂ ಪತ್ನಿ ವಿಯೋಗ ಉಂಟಾಗಲಿ’ ಎಂದು ವಿಷ್ಣುವಿಗೆ ಶಾಪಕೊಟ್ಟು ಚಿತೆಯೇರುತ್ತಾಳೆ. ಆ ಚಿತೆಯ ಸುತ್ತ ಪಾರ್ವತಿಯು ನೆಲ್ಲಿ ಮತ್ತು ತುಳಸೀಗಿಡಗಳಿಂದ ಬೃಂದಾವನವನ್ನು ನಿರ್ಮಿಸುತ್ತಾಳೆ. ಮುಂದೆ ತುಳಸಿಯೇ ರುಕ್ಮಿಣಿಯಾಗಿ ಕೃಷ್ಣನನ್ನು ವರಿಸುತ್ತಾಳೆಂದು ಪ್ರತೀತಿಯಿದೆ.

ಹರಿವಲ್ಲಭೆ ತುಳಸಿ
ಹಿಂದೆ ಅಮೃತಮಥನ ಕಾಲದಲ್ಲಿ ಅಮೃತದ ಕಲಶವನ್ನು ವಿಷ್ಣು ಹಿಡಿದುಕೊಂಡಾಗ ಅವನ ಕಣ್ಣಿನಿಂದ ಉದುರಿದ ಆನಂದಭಾಷ್ಪದ ಒಂದೆರಡು ಹನಿಗಳು ಈ ಕಲಶದಲ್ಲಿ ಬಿದ್ದಾಗ ಅಲ್ಲಿ ತುಳಸಿ ಹುಟ್ಟಿತು ಎಂದೂ ಹೇಳುತ್ತಾರೆ. ಅಲ್ಲಿ ಉದ್ಭವಿಸಿದ ತುಳಸಿಯು ವಿಷ್ಣುವಿನಿಂದ ಮೋಹಿತಳಾಗಿ ತನ್ನನ್ನು ಮದುವೆಯಾಗುವಂತೆ ಆಗ್ರಹಪಡಿಸುತ್ತಾಳೆ. ಅವಳ ವರ್ತನೆಯಿಂದ ಕೋಪಗೊಂಡ ಶ್ರೀಲಕ್ಷ್ಮಿಯು ತುಳಸಿಗೆ ಗಿಡವಾಗುವಂತೆ ಶಾಪಕೊಡುತ್ತಾಳೆ. ಆದರೆ, ಭಕ್ತಬಾಂಧವನಾದ ವಿಷ್ಣುವು ತುಳಸಿಗೆ ಸಮಾಧಾನ ಮಾಡುತ್ತ ತಾನು ಸಾಲಿಗ್ರಾಮದ ರೂಪದಲ್ಲಿರುವಾಗ ನಿನ್ನನ್ನು ಜೊತೆಯಲ್ಲಿಟ್ಟುಕೊಳ್ಳುತ್ತೇನೆ ಎಂದು ಹೇಳಿ ಒಪ್ಪಿಸುತ್ತಾನೆ. ಆದ್ದರಿಂದ ಎಲ್ಲರ ಮನೆಗಳಲ್ಲೂ ವಿಷ್ಣುರೂಪದ ಸಾಲಿಗ್ರಾಮದ ಮೇಲೆ ತುಳಸೀದಳವನ್ನಿಟ್ಟು ಪೂಜಿಸುತ್ತಾರೆ. ಹಾಗಾಗಿ, ತುಳಸಿಯನ್ನು “ಹರಿವಲ್ಲಭೆ’ ಎಂದೂ ಕರೆಯುತ್ತಾರೆ.

ಶ್ರೀಕೃಷ್ಣ ಪರಮಾತ್ಮನ ತುಲಾಭಾರದ ಸಮಯದಲ್ಲಿ ಸತ್ಯಭಾಮೆಯು ತನ್ನ ಮೈಮೇಲಿನ ವಜ್ರ ವೈಢೂರ್ಯ, ಧನಕನಕಗಳನ್ನೆಲ್ಲ ಇಟ್ಟರೂ ಕೃಷ್ಣನನ್ನು ಹೊತ್ತ ತಕ್ಕಡಿಯು ಕೆಳಗೆ ಇಳಿಯದಿದ್ದಾಗ ರುಕ್ಮಿಣಿಯು ಭಕ್ತಿಭಾವದಿಂದ ಅದರ ಮೇಲೆ ಇರಿಸಿದ ಒಂದೇ ಒಂದು ದಳ ಶ್ರೀತುಳಸಿಯು ತಕ್ಕಡಿಯನ್ನು ಮೇಲೇರಿಸಿದುದು ಎಲ್ಲರಿಗೂ ತಿಳಿದ ಕತೆಯೇ.

ಪ್ರಸೀದ ತುಲಸೀ ದೇವಿ
ಪ್ರಸೀದ ಹರಿವಲ್ಲಭೇ |
ಕ್ಷೀರೋದ ಮಥನೋದ್ಭುತೇ |
ತುಲಸೀ ತ್ವಾಂ ನಮಾಮ್ಯಹಮ್‌||
ಹೀಗೆಂದು ಸಂಸ್ಕೃತ ಶ್ಲೋಕವಿದೆ. ಎಲ್ಲರೂ ತುಳಸೀ ಪ್ರದಕ್ಷಿಣೆಯ ಸಮಯದಲ್ಲಿ ಈ ಶ್ಲೋಕವನ್ನು ಪಠಿಸುತ್ತಾರೆ.

ಪುಷ್ಪಾ ಎನ್‌. ಕೆ. ರಾವ್‌ 

Advertisement

Udayavani is now on Telegram. Click here to join our channel and stay updated with the latest news.

Next