Advertisement

ಪೂಜೆಯಲ್ಲಿ ತುಳಸಿಯ ಮಹತ್ವ ಅನನ್ಯ: ಧರ್ಮದರ್ಶಿ ಅಶೋಕ ದಾಸು ಶೆಟ್ಟಿ

10:06 AM Nov 30, 2020 | Suhan S |

ಡೊಂಬಿವಲಿ, ನ. 29: ಡೊಂಬಿವಲಿ ಪರಿಸರದ ಪ್ರತಿಷ್ಠಿತ ಧಾರ್ಮಿಕ ಹಾಗೂ ಸಾಮಾಜಿಕ ಸಂಸ್ಥೆಗಳಲ್ಲಿ ಒಂದಾದ ಡೊಂಬಿವಲಿ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯ ವತಿಯಿಂದ ಮಂದಿರದ ಸಭಾಂಗಣದಲ್ಲಿ ಕಾರ್ತಿಕ ಮಾಸದ ದ್ವಾದಶಿಯ ನಿಮಿತ್ತ ಶ್ರೀ ತುಳಸಿ ಪೂಜೆಯು ನ. 27ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

Advertisement

ವೇದಮೂರ್ತಿ ಪಂಡಿತ್‌ ಶುಭಕರ ಭಟ್‌ ಮತ್ತು ರಾಜೇಶ್‌ ಭಟ್‌ ಅವರ ಪೌರೋಹಿತ್ಯದಲ್ಲಿ ವೇದ ಘೋಷಗಳ ಮಧ್ಯೆ ಮಂಡಳದ ಧರ್ಮದರ್ಶಿ ಅಶೋಕ್‌ ದಾಸು ಶೆಟ್ಟಿ ಮತ್ತು ಚಾರುಲತಾ  ಅಶೋಕ್‌ ಶೆಟ್ಟಿ ದಂಪತಿ ತುಳಸಿ ಪೂಜೆಯ ವಿವಿಧ ಪೂಜಾ ಕೈಂಕರ್ಯಗಳ ಯಜಮಾನತ್ವ  ವಹಿಸಿದ್ದರು. ತುಳಸಿ ಪೂಜೆಯ ನಿಮಿತ್ತ ತುಳಸಿ ಕಟ್ಟೆಯ ಪರಿಸರವನ್ನು ದೀಪಗಳಿಂದ ಸಿಂಗರಿಸಲಾಗಿತ್ತು. ಡೊಂಬಿವಲಿ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯ ಮಹಿಳಾ ವಿಭಾಗದಿಂದ ಭಜನ ಕಾರ್ಯಕ್ರಮ ನಡೆಯಿತು.

ತುಳಸಿ ಪೂಜೆಯ ಬಳಿಕ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಮಂಡಳದ ಧರ್ಮದರ್ಶಿ ಅಶೋಕ ದಾಸು ಶೆಟ್ಟಿ ಅವರು, ಪರಮಾತ್ಮನ ಪೂಜೆಯಲ್ಲಿ ತುಳಸಿಯ ಮಹತ್ವ ಅನನ್ಯವಾಗಿದೆ. ನಮ್ಮ ಸನಾತನ ಭಾರತೀಯ ಸಂಸ್ಕೃತಿ ಹಾಗೂ ಆಯುರ್ವೇದದಲ್ಲಿಯೂ ತುಳಸಿ ಮಹತ್ವ ಪಡೆದ ದಿವ್ಯೌಷಧೀಯು ಹೌದು ಎಂದು ಹೇಳಿದ ಅವರು, ತುಳಸಿ ಪೂಜೆಯನ್ನು ಪ್ರತೀ ವರ್ಷ ನಡೆಸುವ ಮೂಲಕ ನಮ್ಮ ಹಿರಿಯರು ಭಾವೈಕ್ಯತೆಗೆ ಭದ್ರ ಬುನಾದಿಯನ್ನು ಹಾಕಿದ್ದಾರೆ. ನಮ್ಮ ಹಿರಿಯರು ಹಾಕಿ ಕೂಟ್ಟ ಮಾರ್ಗದಲ್ಲಿ ನಡೆದು ಸಾರ್ಥಕ ಜೀವನ ಸಾಗಿಸೋಣ. ಮಂಡಳಿಯ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ತುಳು, ಕನ್ನಡಿಗರು, ಭಕ್ತಾದಿಗಳು ಪಾಲ್ಗೊಂಡು ಸಹಕರಿಸಿ, ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿ ಶುಭಕೋರಿದರು.

ಮಂಡಳದ ಅಧ್ಯಕ್ಷ ಗೋಪಾಲ ಕೆ. ಶೆಟ್ಟಿ ಅವರು ಮಾತನಾಡಿ, ನಮ್ಮ ಸನಾತನ ಭಾರತೀಯ ಸಂಸ್ಕೃತಿಯಲ್ಲಿ ದೀಪಾವಳಿಗೆ ಮಹತ್ವವಿದೆ. ನಾವೆಲ್ಲರೂ ದೀಪಗಳನ್ನು ಹಚ್ಚುವ ಮೂಲಕ ನಮ್ಮ ಮನದ ಅಂಧಕಾರವನ್ನು ದೂರಗೂಳಿಸಿ ಸಾರ್ಥಕ ಜೀವನ ಸಾಗಿಸೋಣ ಎಂದು ಶುಭಹಾರೈಸಿದರು.

ಕೊನೆಯಲ್ಲಿ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಪ್ರಾರಂಭದಲ್ಲಿ ಮಂಡಳದ ಆರಾಧ್ಯ ದೇವರಾದ ದೇವಿಗೆ ವಿಶೇಷ ಪೂಜೆ ನಡೆಸಲಾಯಿತು. ಮಂಡಳದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯ-ಸದಸ್ಯೆಯರು, ಭಕ್ತರು ಉಪಸ್ಥಿತರಿದ್ದು ಸಹಕರಿಸಿದರು. ಸ್ಥಳೀಯ ವಿವಿಧ ಸಮುದಾಯ ಮತ್ತು ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು, ಉದ್ಯಮಿಗಳು, ತುಳು, ಕನ್ನಡಿಗರು ಉಪಸ್ಥಿತರಿದ್ದು ಕೋವಿಡ್‌ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಪ್ರಸಾದ ಸ್ವೀಕರಿಸಿದರು.

Advertisement

 

ಚಿತ್ರ-ವರದಿ: ಗುರುರಾಜ ಪೊತನೀಸ್‌

 

Advertisement

Udayavani is now on Telegram. Click here to join our channel and stay updated with the latest news.

Next