ಹೊಸದಿಲ್ಲಿ: ಚಿನ್ನಾಭರಣ, ಕಾರು, ಬೈಕು ಕಳ್ಳತನ ಆಗಿರುವುದನ್ನು ನೀವು ನೋಡಿರುತ್ತೀರಿ. ಆದರೆ, ಎಲ್ಲಾದರೂ ಗಿಡಮೂಲಿಕೆಗಳು ಕಳವಾಗಿದ್ದನ್ನು ಕೇಳಿದ್ದೀರಾ?
ಅಚ್ಚರಿಯಾದರೂ ಇದು ಸತ್ಯ. ಹರ್ಯಾಣ ಮತ್ತು ಚಂಡಿಗಡಗಳಲ್ಲಿ ಇತ್ತೀಚೆಗೆ ಇಂಥ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಲೇ ಇವೆ. ಅಂದ ಹಾಗೆ ಇಲ್ಲಿ ಕಳವಾಗುತ್ತಿರುವುದು ತುಳಸಿ ಗಿಡಗಳು!
ಕೋವಿಡ್ 19 ಸೋಂಕು ವ್ಯಾಪಿಸುತ್ತಿರುವ ಕಾರಣ, ಜನರು ಔಷಧೀಯ ಸಸ್ಯಗಳು, ಗಿಡಮೂಲಿಕೆಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಕಾಣುತ್ತಿದ್ದಾರೆ.
ಈ ಪೈಕಿ ಅತಿ ಹೆಚ್ಚು ಇಮ್ಯುನಿಟಿ ಬೂಸ್ಟರ್ ಎಂಬ ಖ್ಯಾತಿಗೆ ತುಳಸಿ ಪಾತ್ರವಾಗಿದೆ. ಇದೇ ಕಾರಣಕ್ಕಾಗಿ ಕೆಲವರು ಎಲ್ಲಿ ತುಳಸಿ ಗಿಡ ಕಣ್ಣಿಗೆ ಬೀಳುತ್ತದೆಯೇ ತಕ್ಷಣ ಅಲ್ಲಿಂದ ಅದನ್ನು ಲಪಟಾಯಿಸುತ್ತಿದ್ದಾರೆ. ಚಂಡಿಗಡ, ಫರೀದಾಬಾದ್, ಕರ್ನಾಲ್, ಹಿಸಾರ್ ಮತ್ತು ಗುರುಗ್ರಾಮಗಳಲ್ಲಿ ತುಳಸಿ ಕಳ್ಳತನ ಅವ್ಯಾಹತವಾಗಿ ನಡೆಯುತ್ತಿದೆಯಂತೆ.
ಆರಂಭದಲ್ಲಿ ಎಲ್ಲರೂ ತಮ್ಮ ನೆರೆಹೊರೆಯವರ ಮನೆಯಿಂದ ತುಳಸಿ ಎಲೆಗಳನ್ನು ಕೇಳಿ ಪಡೆದುಕೊಂಡು ಹೋಗುತ್ತಿದ್ದರು. ಆದರೆ, ಇತ್ತೀಚೆಗೆ ಇಡೀ ಗಿಡಗಳೇ ನಾಪತ್ತೆಯಾಗುತ್ತಿವೆ ಎನ್ನುತ್ತಾರೆ ಸ್ಥಳೀಯರು. ನರ್ಸರಿಗಳಲ್ಲೂ ತುಳಸಿ ಗಿಡಗಳಿಗೆ ಭಾರೀ ಡಿಮ್ಯಾಂಡ್ ಬಂದಿದೆಯಂತೆ. ಮೊದಲು ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದ ಈ ಗಿಡಗಳಿಗೆ ಈಗ 250 ರೂ. ದರ ನಿಗದಿಪಡಿಸಲಾಗಿದೆ ಎಂದೂ ಸ್ಥಳೀಯರು ತಿಳಿಸಿದ್ದಾರೆ.