Advertisement

ಕಿರಿಯ ವಯಸ್ಸಿನಲ್ಲೇ ವಿಶ್ವದಾಖಲೆ ಪುಟಕ್ಕೆ ಸೇರ್ಪಡೆಯಾದ ಯಕ್ಷ ಕಲಾವಿದೆ ತುಳಸಿ ಹೆಗಡೆ ಹೆಸರು

12:57 PM Jul 02, 2024 | Team Udayavani |

ಶಿರಸಿ: ಅತ್ಯಂತ‌ ಕಿರಿಯ ವಯಸ್ಸಿನಲ್ಲೇ ವಿಶ್ವಶಾಂತಿಗೆ ಯಕ್ಷ ನೃತ್ಯ ಮೂಲಕ ಕೊಡುಗೆ ನೀಡುತ್ತಿರುವ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆ ಹೆಸರು ಇದೀಗ ಜಾಗತಿಕ ಮಟ್ಟದಲ್ಲೂ ದಾಖಲಾಗಿದೆ.

Advertisement

ಲಂಡನ್ ಮೂಲದ ಪ್ರತಿಷ್ಠಿತ ವಲ್ಡ್೯ ರೆಕಾರ್ಡ್ ಸಂಸ್ಥೆಯು ತುಳಸಿ ಹೆಗಡೆ ಹೆಸರನ್ನು ತನ್ನ ವಿಶ್ವದಾಖಲೆಯ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿಕೊಂಡಿದೆ. ಯಕ್ಷಗಾನ ಕಲಾ‌ ಪ್ರಕಾರದ ಮೂಲಕ ವಿಶ್ವಶಾಂತಿಗೆ ಈವರೆಗೆ 9 ಕಲಾ ಕುಸುಮದ ಮೂಲಕ ನೀಡುತ್ತಿರುವ ಕೊಡುಗೆಗಳನ್ನು ಗಮನಿಸಿ ಮಕ್ಕಳ ವಿಭಾಗದ ತನ್ನ ದಾಖಲಾತಿಯಲ್ಲಿ ಸೇರಿಸಿಕೊಂಡಿದೆ.

ಬೆರಳ ತುದಿಯಲ್ಲಿ ನರ್ತನ ಮಾಡುವ ವಿದೇಶವೊಂದರ ನೃತ್ಯ ಕಲಾ ಪ್ರಕಾರ ಹೊರತು ಪಡಿಸಿದರೆ ಈವರೆಗೆ ಪ್ರಪಂಚದ ಯಾವುದೇ ಕಲಾ ಪ್ರಕಾರ ಈ‌ ದಾಖಲಾತಿ ಪಟ್ಟಿಗೆ ಸೇರ್ಪಡೆ ಆಗಿರಲಿಲ್ಲ ಎಂದು ಈ ಸಂಸ್ಥೆ ತಿಳಿಸಿದೆ. ಈ ದಾಖಲೆಗೆ ತುಳಸಿ ಹೆಗಡೆ ಹೆಸರು ಸೇರ್ಪಡೆಯಿಂದ ಯಕ್ಷ ರೂಪಕದ ಮೂಲಕ ಯಕ್ಷಗಾನದ ಹೆಸರೂ ಇದೇ ಪ್ರಥಮ ಬಾರಿಗೆ ಸೇರಿದಂತಾಗಿದೆ.

ಶಿರಸಿ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯಲ್ಲಿ 10ನೇಯ ವರ್ಗ ಓದುತ್ತಿರುವ ತುಳಸಿ ಹೆಗಡೆ ತನ್ನ ಮೂರು ವರ್ಷದಿಂದಲೇ ಯಕ್ಷಗಾನ ಕ್ಷೇತ್ರಕ್ಕೆ ಬಾಲ ಹೆಜ್ಜೆ ಇಟ್ಟವಳು.

ಐದೂವರೆ ವರ್ಷದಿಂದ ವಿಶ್ವ ಶಾಂತಿ ರೂಪಕಗಳನ್ನು ಪ್ರಸ್ತುತಗೊಳಿಸುತ್ತಿದ್ದಾಳೆ. ಪೌರಾಣಿಕ ಆಖ್ಯಾನಗಳ 9 ರೂಪಕಗಳನ್ನು ಪ್ರಸ್ತುತಗೊಳಿಸುವ ಈಕೆ, ರಾಜ್ಯ, ಹೊರ ರಾಜ್ಯಗಳಲ್ಲಿ 850ಕ್ಕೂ ಅಧಿಕ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾಳೆ. ಹಿರಿಯ ಕಲಾವಿದರ ಜೊತೆ ಬೇರೆ ಬೇರೆ ಯಕ್ಷಗಾನ ಆಖ್ಯಾನಗಳಲ್ಲೂ ಪಾತ್ರ ಮಾಡುತ್ತಿದ್ದಾಳೆ.

Advertisement

ಈಗಾಗಲೇ ಇಂಡಿಯಾ ಬುಕ್ ಆಪ್ ರೆಕಾರ್ಡನಲ್ಲಿಯೂ ದಾಖಲಾಗಿದ್ದು, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ನೀಡುವ ರಾಜ್ಯ ಮಟ್ಟದ ಬಾಲ ಗೌರವ ಪ್ರಶಸ್ತಿ, ಟೈಮ್ಸಆಫ್ ಇಂಡಿಯಾದ ದೇಶ ಮಟ್ಟದ 21 ವರ್ಷದೊಳಗಿನ ಅನ್ ಸ್ಟಾಪೇಬಲ್ 21 ಅವಾರ್ಡ ಸೇರಿದಂತೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಅರಸಿ ಬಂದಿವೆ.

ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೂ ಅವಕಾಶ ಸಿಕ್ಕಿತ್ತು. ಈಗಿನ ವಿಶ್ವ ದಾಖಲಾತಿಗೆ ಸೇರಲು ದಿ ಟೈಮ್ಸ್ ಆಫ್ ಇಂಡಿಯಾ ಬಳಗ‌ ಕಳೆದ ಅಕ್ಟೋಬರ್ ನಲ್ಲಿ ನೀಡಿದ ಅನ್ ಸ್ಟಾಪೇಬಲ್‌ 21 ಪ್ರಶಸ್ತಿ ನೆರವಾಗಿದೆ ಎಂಬುದೂ ಉಲ್ಲೇಖನೀಯ.

ಇಂಥದೊಂದು ಗುರುತು ಸಿಕ್ಕಿದ್ದು ಖುಷಿ, ಸಂಭ್ರಮ. ಯಕ್ಷಗಾನದಿಂದಲೇ ಈ ಅವಕಾಶ ಸಿಕ್ಕಿದ್ದು ಅದಕ್ಕೇ ಇದನ್ನು ಅರ್ಪಿಸುವೆ. ಈ ದಾರಿಯಲ್ಲಿ ಸಹಕಾರ ನೀಡಿದ ಎಲ್ಲರಿಗೂ ಪ್ರೀತಿಯ ಕೃತಜ್ಞತೆ.
– ತುಳಸಿ ಹೆಗಡೆ, ಕಲಾವಿದೆ.

ಇದನ್ನೂ ಓದಿ: ಅನುದಾನದ ಹಂಚಿಕೆ ವಿಚಾರ: ಪ.ಪಂ.ಸಭೆಯಲ್ಲಿ ಆಡಳಿತಾಧಿಕಾರಿ, ಸದಸ್ಯರ ನಡುವೆ ಜಟಾಪಟಿ

Advertisement

Udayavani is now on Telegram. Click here to join our channel and stay updated with the latest news.

Next