Advertisement
ಮನೆ ಮುಂದೆ ತುಳಸಿ ಗಿಡ ಇರುತ್ತದೆ. ಕೆಲವು ಮನೆಗಳಲ್ಲಿ ನಾಲ್ಕಲ್ಲ, ಆರೇಳು ತುಳಸಿ ಗಿಡಗಳನ್ನು ನಾವೆಲ್ಲಾ ನೋಡಿದ್ದೇವೆ. ಆದರೆ ತೋಟದಲ್ಲಿ ತುಳಸಿ ಬೆಳೆಯೋದನ್ನು ಕೇಳಿದ್ದೀರಾ? ಹೌದು, ಇಂಥದೊಂದು ಪ್ರಯತ್ನವನ್ನು ಗದಗ ತಾಲೂಕಿನ ಕುರ್ತಕೋಟಿ ಗ್ರಾಮದ ರೈತ ಮೊನೇಶಪ್ಪ ಬಸಪ್ಪ ಮಲ್ಲಸಮುದ್ರ ಮಾಡಿದ್ದಾರೆ. ಎಕರೆಗಟ್ಟಲೇ ತುಳಸಿ ಬೆಳೆದು ತನ್ನ ಬಾಳನ್ನು ಬಂಗಾರವನ್ನಾಗಿಸಿಕೊಂಡಿದ್ದಾರೆ.
ಎಕರೆಗೆ ಒಂದು ಕೆ.ಜಿ ತುಳಸಿ ಬೀಜವನ್ನು ಚೆಲ್ಲಬಹುದು. ಇದಕ್ಕೂ ಮೊದಲು ನರ್ಸರಿಯಲ್ಲಿ 40 ದಿನ ಸಸಿ ಬೆಳೆಸಿರಬೇಕು. ನಾಟಿ ಮಾಡುವ ಮುನ್ನ ಜಮೀನನ್ನು ಕೊಟ್ಟಿಗೆ ಗೊಬ್ಬರ ಹಾಕಿ ಉಳುಮೆ ಮಾಡಬೇಕು. 24 ಇಂಚು ಹಾಗೂ 8-10 ಇಂಚು ಅಂತರದಲ್ಲಿ ನಾಟಿ ಮಾಡಬೇಕು. ನಂತರದ 40ನೇ ದಿನಕ್ಕೆ ತುಳಸಿ ಗಿಡ ಮೊದಲ ಕಟಾವಿಗೆ ಬರುತ್ತದೆ. ಇಳುವರಿ ಹೆಚ್ಚಿಸಲು ಆರು ತಿಂಗಳಿಗೆ ಕೊಟ್ಟಿಗೆ ಗೊಬ್ಬರ ಹಾಕಬೇಕು. ಬೇಸಿಗೆಯಲ್ಲಿ ವಾರಕ್ಕೊಮ್ಮೆ ನೀರು ಹಾಯಿಸಬೇಕು. ತುಳಸಿ ಗಿಡಕ್ಕೆ ಯಾವುದೇ ರೋಗ ಬಾರದಿರುವುದರಿಂದ ಕೀಟನಾಶಕ ಔಷಧದ ಅಗತ್ಯವೇ ಬೀಳುವುದಿಲ್ಲ. ಒಂದು ವರ್ಷಕ್ಕೆ 8-10 ಬಾರಿ ಕಟಾವು ಮಾಡಬಹುದು. ಎಕರೆಗೆ 28-30 ಕ್ವಿಂಟಲ್ ತುಳಸಿ ತಪ್ಪಲ (ಎಲೆ) ಬರುತ್ತದೆ. ಕಟಾವು ಮಾಡಿದ ತುಳಸಿಯನ್ನು ಮೂರ್‍ನಾಲ್ಕು ದಿನ ಒಣಗಿಸಿ ಮಾರಾಟಕ್ಕೆ ಸಿದ್ಧಪಡಿಸಲಾಗುತ್ತದೆ.
Related Articles
ಆರಂಭದಲ್ಲಿ ತುಳಸಿ ಎಲೆಗಳನ್ನು ಮಾರುವುದು ಹೇಗೆ ಎಂಬ ಅನಿಶ್ಚಿತತೆ ಮೊನೇಶಪ್ಪಗೂ ಕಾಡುತ್ತಿತ್ತು. ಅದಕ್ಕೂ ಮೊದಲು ಬಾಳೆ, ಕಬ್ಬು, ತರಕಾರಿ ಸೇರಿದಂತೆ ಇತರೆ ಬೆಳೆಗಳಿಗೂ ಮಾರಾಟದ ಸಮಸ್ಯೆ ಎದುರಾಗಿತ್ತು. ಇಂಥ ಸಂದರ್ಭದಲ್ಲಿ ಫಲದಾ ಮತ್ತು ಪತಂಜಲಿ ಆರ್ಯುವೇದಿಕ್ ಕಂಪನಿಯವರು ತುಳಸಿ ಬೆಳೆಯಲು ಕೋರಿಕೆ ಇಟ್ಟರು. 1-2 ಎಕರೆ ಬೆಳೆದು ಲಾಭ ಗಳಿಸಿದ್ದರಿಂದ ವರ್ಷದಿಂದ-ವರ್ಷಕ್ಕೆ ಹೆಚ್ಚು ಜಾಗದಲ್ಲಿ ತುಳಸಿ ಬೆಳೆಯಲು ಶುರು ಮಾಡಿದರು.
Advertisement
ಎಕರೆ ತುಳಸಿ ಬೆಳೆದರೆ 28-30 ಕ್ವಿಂಟಲ್ (ಹವಾಮಾನ ತಕ್ಕಂತೆ ಇಳುವರಿ ಹೆಚ್ಚಬಹುದು) ಇಳುವರಿ ಬರುತ್ತದೆ. ಒಂದು ಕ್ವಿಂಟಲ್ ತುಳಸಿ ಎಲೆ 5-6 ಸಾವಿರ ರೂ.ಗೆ ಮಾರಾಟವಾಗುತ್ತಿದೆ. ತುಳಸಿ ನಾಟಿಯಿಂದ ಕಟಾವಿನವರೆಗೆ ಖರ್ಚು-ವೆಚ್ಚ 50 ಸಾವಿರ ರೂ. ಆದರೂ ಎಕರೆಗೆ ಕನಿಷ್ಠ ಒಂದು ಲಕ್ಷ ರೂ. ಆದಾಯ ಕಟ್ಟಿಟ್ಟಬುತ್ತಿ.
ಮೊನೇಶಪ್ಪ ಸಧ್ಯ 8-10 ವಿಭಿನ್ನ ಔಷಧಿ ಬೆಳೆ ಬೆಳೆಯುತ್ತಿದ್ದಾರೆ. ಎಲ್ಲ ಬೆಳೆಗೂ ಡಿಮ್ಯಾಂಡ್ ಇದೆ. ಫಲದಾಆರ್ಯುವೇದಿಕ್ ಕಂಪನಿ , ಪತಂಜಲಿ ಕಂಪನಿ ಮತ್ತು ಹರ್ಬಲ್ ನ ಹೆಲ್ತ್ ಕಂಪನಿಯವರು ಜಮೀನಿಗೆ ಬಂದೇ ಬೆಳೆಯನ್ನು ಖರೀದಿಸುತ್ತಾರೆ. ಇಲ್ಲವೇ ಬೆಳೆಗಳನ್ನು ಕಂಪನಿಗೆ ಕಳುಹಿಸಿದರೆ ಸಾರಿಗೆ ವೆಚ್ಚ ಕಂಪನಿಯವರೇ ನೀಡುತ್ತಿದ್ದಾರೆ. ಭೋಗ್ಯದ ಬೆಳೆಗಾರ
ಮೊನೇಶಪ್ಪ ಇದೇ ಗ್ರಾಮದ ಬಿ.ವಿ. ಪಾಟೀಲ ಅವರ 40 ಎಕರೆ ಜಮೀನನ್ನು ಕೋರನಂಗೆ (ಲಾಭದಲ್ಲಿ ಸಮ ಪಾಲು) ಪಡೆದು ಅದರಲ್ಲಿ ವಿವಿಧ ಔಷಧೀಯ ಬೆಳೆ ಬೆಳೆಯುತ್ತಿದ್ದಾರೆ. ಜೊತೆಗೆ 10 ಎಕರೆ ಬಡ್ಡಿಯೊಳಗೆ, 4 ಎಕರೆ ಲವಣಿ, 6 ಎಕರೆ ಸ್ವಂತ ಜಮೀನು ಸೇರಿದಂತೆ ಒಟ್ಟು 60 ಎಕರೆಯಲ್ಲಿ ತುಳಸಿ, 25 ಎಕರೆಯಲ್ಲಿ ಔಷಧಿ ಬೆಳೆ, 35 ಎಕರೆ ಜಮೀನಿನಲ್ಲಿ ಕಬ್ಬು, ಶೇಂಗಾ, ಮೆಣಸಿನಕಾಯಿ, ಹೆಸರು, ಜೋಳ ಸೇರಿದಂತೆ ಮನೆಗೆ ಬೇಕಾದ ಆಹಾರ ಧಾನ್ಯಗಳನ್ನು ಬೆಳೆಯುತ್ತಿದ್ದಾರೆ. ಮೊನೇಶಪ್ಪ ಸಾವಯವ ಕೃಷಿಗೆ ಆದ್ಯತೆ ನೀಡಿದ್ದಾರೆ. 4 ಎತ್ತುಗಳ ಸಗಣಿ ಹಾಗೂ ಕೃಷಿ ತ್ಯಾಜ್ಯದಿಂದಲೇ ತಮಗೆ ಅಗತ್ಯವಿರುವ ಗೊಬ್ಬರ ತಯಾರಿಸುವುದು ಇವರ ಮತ್ತೂಂದು ವಿಶೇಷ. 3 ಬೋರ್‌ವೆಲ್‌ಗಳಿದ್ದು, ಅಗತ್ಯವಿದ್ದಾಗ ಮಾತ್ರ ಬೆಳೆಗಳಿಗೆ ನೀರು ಬಳಕೆ ಮಾಡುತ್ತಾರೆ. ವರ್ಷವಿಡೀ ಬೆಳೆ ಬೆಳೆಯುವುದರಿಂದ ಕನಿಷ್ಠ 20 ಕೂಲಿ ಆಳುಗಳಿಗೆ ಕೆಲಸ ಗ್ಯಾರಂಟಿ. ಕೇವಲ 4ನೇ ತರಗತಿ ಓದಿರುವ ಮೊನೇಶಪ್ಪ ಏನಾದರೂ ಸಾಧಿಸಬೇಕೆಂಬ ಛಲದಿಂದಾಗಿಯೇ ಇವತ್ತು ಎಲ್ಲರೂ ಮೆಚ್ಚುವ ರೈತರಾಗಿದ್ದಾರೆ. ಮಾಹಿತಿಗೆ– 9632015447 – ಶರಣು ಹುಬ್ಬಳ್ಳಿ