ಕಾಪು: ಎನ್ಎಂಪಿಟಿ ಬಂದರಿನ ಹೊರವಲಯದ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಚಂಡಮಾರುತದ ಪರಿಣಾಮ ಆ್ಯಂಕರ್ ತುಂಡಾಗಿ ತೇಲಿ ಬಂದು, ಕಾಪು ಬಳಿಯಲ್ಲಿ ಅಪಘಾತಕ್ಕೊಳಗಾದ ಕೋರಮಂಡಲ ಎಕ್ಸ್ ಪ್ರೆಸ್ ಟಗ್ ನ 9 ಮಂದಿ ಸಿಬ್ಬಂದಿಗಳು ಇನ್ನೂ ಕೂಡಾ ರಕ್ಷಣೆಯಲ್ಲಿ ನಿರೀಕ್ಷೆಯಲ್ಲಿ ಸಮುದ್ರದಲ್ಲೇ ಬಾಕಿಯುಳಿದಿದ್ದಾರೆ.
ಶುಕ್ರವಾರ ಬೆಳಗ್ಗೆ11.30 ರಿಂದ ಕಡಲಲ್ಲಿ ತೇಲುತ್ತಿರುವ ಕೋರಮಂಡಲ ಎಕ್ಸ್‌ಪ್ರೆಸ್ ಟಗ್ ಶನಿವಾರ ಬೆಳಗ್ಗೆ 8.30 ಕ್ಕೆ ಕಾಪು ಲೈಟ್ ಬಳಿಯಿಂದ ಸುಮಾರು ಹದಿನೈದು ಕಿಲೋ ಮೀಟರ್ ದೂರದ ಕಾಪು ಪಾರ್ ಬಳಿ ಬಂಡೆಗೆ ಢಿಕ್ಕಿ ಹೊಡೆದು ನಿಂತಿರುವುದು ಪತ್ತೆಯಾಗಿತ್ತು. ಅಲ್ಲಿಂದ ತಮ್ಮನ್ನು ರಕ್ಷಿಸುವಂತೆ 9 ಮಂದಿ ಸಿಬ್ಬಂದಿಗಳು ಎಲ್ಲರಲ್ಲಿ ಅಂಗಲಾಚುತ್ತಿದ್ದಾರೆ.
ಟಗ್ ನಲ್ಲಿ ಇರುವ 9 ಮಂದಿ ಸಿಬ್ಬಂದಿಗಳು ತಮ್ಮ ಜೀವನದ ಅತ್ಯಮೂಲ್ಯವಾದ 40 ಗಂಟೆಗಳನ್ನು ಈಗಾಗಲೇ ಸಮುದ್ರ ಮಧ್ಯದಲ್ಲೇ ಕಳೆದಿದ್ದಾರೆ. ಈಗಾಗಲೇ ಟಗ್‌ನಲ್ಲಿ ಇರುವ ನೀರು, ಆಹಾರ ಪದಾರ್ಥಗಳು ಖಾಲಿಯಾಗಿದ್ದು, ಮಳೆ – ಗಾಳಿ ಮತ್ತು ಆತಂಕದಿಂದಾಗಿ ಎಲ್ಲರೂ ಅನಾರೋಗ್ಯಕ್ಕೆ ಒಳಗಾಗಲಾರಂಭಿಸಿದ್ದಾರೆ.
ಈ ಬಗ್ಗೆ ಟಗ್ ನಲ್ಲಿ ಇರುವ ಸಿಬಂದಿಗಳು ದೂರವಾಣಿಯ ಮೂಲಕ ಮಾತನಾಡಿ, ಕೋಸ್ಟ್ ಗಾರ್ಡ್ ಹಡಗು ನಮಗಿಂತ ದೂರದ 2 ಮೈಲ್ ನಲ್ಲಿ ನಿಂತು ಕೊಂಡಿದೆ. ಯಾವಾಗ ನಮ್ಮನ್ನು ರಕ್ಷಿಸುತ್ತಾರೆ ಎನ್ನುವುದನ್ನು ಜೀವ ಕೈಯ್ಯಲ್ಲಿ ಹಿಡಿದು ಕಾಯುತ್ತಿದ್ದೇವೆ. ದಯವಿಟ್ಟು ನಮ್ಮನ್ನು ಬದುಕಿಸಲು ಯಾವುದಾದರೂ ಪ್ರಯತ್ನವನ್ನು ಮಾಡಿ ಎಂದು ಉದಯವಾಣಿ ಪ್ರತಿನಿಧಿ ಬಳಿ ಸೋಮವಾರ ಬೆಳಗ್ಗೆ 7 ಗಂಟೆಗೆ ಮನವಿ ಮಾಡಿದ್ದಾರೆ.
ನಾವು ಸಮುದ್ರ ಮದ್ಯದಲ್ಲಿ ಸಿಲುಕಿಕೊಂಡಿದ್ದೇವೆ. ನಮಗೆ ಊಟ ತಿಂಡಿಗೂ ತೊಂದರೆ ಉಂಟಾಗಿದೆ. ದಯವಿಟ್ಟು ನಮ್ಮನ್ನು ಇಲ್ಲಿಂದ ರಕ್ಷಿಸುವ ವ್ಯವಸ್ಥೆ ಮಾಡಿ. ಟಗ್ ಗೆ ನೀರು ತುಂಬುತ್ತಿದ್ದು ಹೆದರಿಕೆಯಾಗುತ್ತಿದೆ. ನಮ್ಮರಕ್ಷಣೆಗೆ ಯಾರೂ ಬರುತ್ತಿಲ್ಲ. ಕೋಸ್ಟ್ ಗಾರ್ಡ್ ಕೂಡಾ ಬಂದಿಲ್ಲ. ಹೆಲಿಕಾಪ್ಡರ್ ಕೂಡಾ ಬಂದಿಲ್ಲ. ದೊಡ್ಡ ಅಲೆಗಳು ನಮ್ಮ ಟಗ್ ಗೆ ಬಡಿಯುತ್ತಿವೆ. ದಯವಿಟ್ಟು ನಮ್ಮನ್ನು ರಕ್ಷಿಸುವ ಪ್ರಯತ್ನ ಮಾಡಿ. ದೇವರ ಬಳಿ ನಮ್ಮ ರಕ್ಷಣೆಗಾಗಿ ದೇವರ ಮೊರೆ ಹೋಗಿ ಎಂದು ಟಗ್ ನ ಕುಕ್ ರೌದ್ ಅಹಮದ್ ಮತ್ತು ಸೆಕೆಂಡ್ ಇನ್ ಚಾರ್ಜ್ ಗೌರವ್ ಕುಮಾರ್ ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕೀರೋಜ್ ಕಂಪೆನಿ ಮ್ಯಾನೇಜರ್ ವೇಲು, ನಮ್ಮವರ ರಕ್ಷಣೆಗೆ ವಿಶೇಷ ಆದ್ಯತೆ ನೀಡಬೇಕಿದೆ. ಟಗ್ ನಲ್ಲಿ ಇರುವ 9 ಮಂದಿ ಸಿಬ್ಬಂದಿಗಳನ್ನು ಕಣ್ಣಾರೆ ನೋಡುವವರೆಗೂ ಚಿಂತೆ ಕಾಡುತ್ತಿದೆ. ನಮ್ಮ ಟಗ್ ನ್ನು ಬಂದರಿನ ಒಳಗೆ ಪ್ರವೇಶಿಸಲು ಅವಕಾಶ ನೀಡದ ಕಾರಣ ಹೀಗಾಗಿದೆ. ಚಂಡ ಮಾರುತದ ಪರಿಣಾಮ ನಮ್ಮ ಟಗ್ ಮತ್ತು ಟಗ್ ನಲ್ಲಿ ಇದ್ದವರು ಸಂಕಷ್ಟಕ್ಕೆ ಸಿಲುಕಿದ್ದು ಸರಕಾರ, ಜಿಲ್ಲಾಡಳಿತ, ಕೋಸ್ಟ್ ಗಾರ್ಡ್ ನಮ್ಮ ನೆರವಿಗೆ ಧಾವಿಸಬೇಕಿದೆ. ಟಗ್ ನಲ್ಲಿ ಇದ್ದವರು ಈಗಾಗಲೇ ಶುಕ್ರವಾರ ಬೆಳಗ್ಗೆ11.30 ರಿಂದಲೂ ಅಲ್ಲೇ ಉಳಿದು ಬಿಟ್ಟಿದ್ದು, ಅವರ ರಕ್ಣಣೆಗೆ ದೇವರ ಮೇಲೆ ಭಾರ ಹಾಕಿದ್ದೇವೆ. ಈ ಬಗ್ಗೆ ನಮ್ಮ ಕಂಪೆನಿಗೂ ಮನವಿ ಮಾಡುತ್ತಿದ್ದೇವೆ ಎಂದಿದ್ದಾರೆ.
ಕಾಪು ಲೈಟ್ ಹೌಸ್ ಗಿಂತ 15 ಕಿ.ಮೀ. ದೂರದ ಕಾಪು ಪಾರ್ ನಲ್ಲಿ ಬಂಡೆಗಳ ನಡುವೆ ಸಿಲುಕಿರುವ ವೆಸೆಲ್ ಟಗ್ ಮತ್ತು ಅದರಲ್ಲಿ ಅಪಾಯಕ್ಕೆ ಸಿಲುಕಿರುವ 9 ಮಂದಿ ಸಿಬಂದಿಗಳ ರಕ್ಷಣೆಗೆ ಬೇಕಾದ ವ್ಯವಸ್ಥೆಯ ಬಗ್ಗೆ ಉಡುಪಿ ಜಿಲ್ಲಾಧಿಕಾರಿ, ದಕ. ಜಿಲ್ಲಾಧಿಕಾರಿ ಮತ್ತು ಸಂಸದರೊಂದಿಗೆ ಮಾತುಕತೆ ನಡೆಸಲಾಗಿದೆ. ಶೀಘ್ರ ಏರ್ ಲಿಫ್ಟ್ ಮೂಲಕ ರಕ್ಷಿಸಲು ಪ್ರಯತ್ನಿಸಲಾಗುವುದು. ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೂ ಮನವಿ ಮಾಡಲಾಗಿದೆ ಎಂದು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮಾಹಿತಿ ನೀಡಿದ್ದಾರೆ.
ಕಾಪು ಸಮುದ್ರ ಮದ್ಯದಲ್ಲಿ ವೆಸೆಲ್ ಟಗ್ ಅಪಘಾತಕ್ಕೀಡಾಗಿರುವುದು ನೋವನ್ನುಂಟು ಮಾಡಿದೆ. ಅಪಾಯದಲ್ಲಿ ಸಿಲುಕಿರುವ 9 ಮಂದಿ ಸಿಬಂದಿಗಳ ರಕ್ಷಣೆಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ತುರ್ತು ಪರಿಹಾರ ಕಾರ್ಯಾಚರಣೆ ನಡೆಸಬೇಕಿವೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ. ಸಮುದ್ರ ಮಧ್ಯದಲ್ಲಿ ಸಿಲುಕಿರುವ ಸಿಬಂದಿಗಳ ರಕ್ಷಣೆಗೆ ಕೋಸ್ಟ್ ಗಾರ್ಡ್ ನ ಆಧುನಿಕ ವ್ಯವಸ್ಥೆ ಮತ್ತು ಸಿಬಂದಿಗಳನ್ನು ಬಳಸಿಕೊಂಡು ಶೀಘ್ರ ಪರಿಹಾರ ಕಾರ್ಯಾಚರಣೆ ನಡೆಸುವಂತೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮನವಿ ಮಾಡಿದ್ದಾರೆ.