Advertisement

Tuberculosis ತಡೆ ಮುನ್ನೆಚ್ಚರಿಕೆ: 6 ಜಿಲ್ಲೆಗಳಲ್ಲಿ ವಯಸ್ಕರಿಗೂ ಬಿಸಿಜಿ ಲಸಿಕೆ

11:54 PM Dec 20, 2023 | Team Udayavani |

ಉಡುಪಿ: ಕ್ಷಯರೋಗ ತಡೆ ಮುನ್ನೆಚ್ಚರಿಕೆ ಸಲುವಾಗಿ ಮಕ್ಕಳಿಗೆ ನೀಡುತ್ತಿದ್ದ ಬಿಸಿಜಿ (Bacillus Calmette-Guerin) ಲಸಿಕೆಯನ್ನು ಈಗ ವಯಸ್ಕ ರಿಗೂ ನೀಡಲು ಕೇಂದ್ರ ಸರಕಾರ ನಿರ್ಧರಿಸಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ 6 ಜಿಲ್ಲೆಗಳಲ್ಲಿ ಪ್ರಾಯೋಗಿಕ ಅನುಷ್ಠಾನವಾಗಲಿದೆ.

Advertisement

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕೇಂದ್ರೀಯ ಕ್ಷಯರೋಗ ವಿಭಾಗ ಹಾಗೂ ಭಾರತೀಯ ಸಂಶೋ ಧನ ಮಂಡಳಿಯ ಸಹಭಾಗಿತ್ವದಲ್ಲಿ ಇದು ನಡೆಯಲಿದ್ದು ಉಡುಪಿ, ದಕ್ಷಿಣ ಕನ್ನಡ, ಬಾಗಲ ಕೋಟೆ, ಬೀದರ್‌, ಕಲಬುರಗಿ, ವಿಜಯಪುರ ಜಿಲ್ಲೆಗಳು ಆಯ್ಕೆಯಾಗಿವೆ.

5ರಿಂದ 8 ತಿಂಗಳೊಳಗೆ ಲಸಿಕೆ ವಿತರಣೆ ಆರಂಭಿಸಲಾಗುತ್ತಿದೆ. 60 ವರ್ಷ ಮೇಲ್ಪಟ್ಟವರಿಗೆ ಕ್ಷಯರೋಗ ಅಧಿಕವಿದ್ದು, ಹೈರಿಸ್ಕ್ ಆದ ಕಾರಣ ಆವರಿಗೆ ಆದ್ಯತೆ ನೀಡಲಾಗುತ್ತದೆ. ಜತೆಗೆ ಕ್ಷಯರೋಗ ಇದ್ದು ಗುಣಮುಖರಾದ 18 ವರ್ಷ ಮೇಲ್ಪಟ್ಟವರಿಗೂ ನೀಡಲಾಗುವುದು.

ಅಧ್ಯಯನ ಬಳಿಕ ವಿಸ್ತರಣೆ
ಲಸಿಕೆ ನೀಡಿರುವ ಜಿಲ್ಲೆಗಳನ್ನು ಬಳ್ಳಾರಿ, ಚಿತ್ರದುರ್ಗ, ಹಾಸನ, ಮಂಡ್ಯ, ತುಮಕೂರು, ವಿಜಯನಗರ ಜಿಲ್ಲೆಗಳಿಗೆ ಇದನ್ನು ಹೋಲಿಕೆ ಮಾಡಲಾಗುತ್ತದೆ. ಲಸಿಕೆ ನೀಡಿದ ಬಳಿಕ ಆ ಜಿಲ್ಲೆಗಳಲ್ಲಿ ಒಟ್ಟಾರೆ ಪ್ರಕರಣ ಎಷ್ಟು ಕಡಿಮೆ ಯಾಗಿವೆ ಹಾಗೂ ಲಸಿಕೆ ನೀಡದ ಇತರ ಜಿಲ್ಲೆಗಳಲ್ಲಿ ಕಂಡುಬರುತ್ತಿರುವ ಪ್ರಕರಣಗಳ ಸರಾಸರಿ ತಾಳೆ ಹಾಕಲಾಗುವುದು. ಅಧ್ಯಯನದ ಬಳಿಕ ಉಳಿದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸುವ ಉದ್ದೇಶವಿದೆ.

ಯಾಕಾಗಿ ಬಿಸಿಜಿ?
ಕ್ಷಯರೋಗ ತಡೆಗೆ ಮಕ್ಕಳಿಗೆ ನೀಡುತ್ತಿರುವ ಈ ಲಸಿಕೆ ಸುರಕ್ಷಿತ ಎಂದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ವಯಸ್ಕರಲ್ಲಿ ಮುಖ್ಯವಾಗಿ ಕ್ಷಯರೋಗ ಇದ್ದು ಗುಣಮುಖರಾದವರು, ಆ ಕಾಯಿಲೆಯಿಂದ ಬಾಧಿತ ಕುಟುಂಬದವರು, ಮಧುಮೇಹ ಇರುವವರಿಗೆ, ತಂಬಾಕು ಸೇವನೆ ಮಾಡುವವರು-ಹೀಗೆ ಆಯಾ ಜಿಲ್ಲೆಯ ಒಟ್ಟು ಜನಸಂಖ್ಯೆಯ ಶೇ. 20ರಷ್ಟು ಮಂದಿಗೆ ಅವರ ಒಪ್ಪಿಗೆ ಪಡೆದು ಪ್ರಾಯೋಗಿಕವಾಗಿ ಲಸಿಕೆ ನೀಡಲು ಉದ್ದೇಶಿಸಲಾಗಿದೆ ಎನ್ನುತ್ತಾರೆ ಇಲಾಖೆಯ ವೈದ್ಯರು.

Advertisement

ವಯಸ್ಕರಿಗೆ ಬಿಸಿಜಿ ಲಸಿಕೆ ನೀಡುವ ಬಗ್ಗೆ ಈಗಾಗಲೇ ಹಲವು ಸುತ್ತಿನ ಸಭೆಗಳನ್ನು ನಡೆಸಲಾಗಿದೆ. ಇಲಾಖೆಯ ಸಿಬಂದಿಗೆ ಈ ಬಗ್ಗೆ ಸೂಕ್ತ ತರಬೇತಿ ನೀಡಲಾಗುವುದು. ಆಯ್ಕೆಯಾಗಿರುವ ಜಿಲ್ಲೆಗಳಲ್ಲಿ ಇದನ್ನು ಏಕಕಾಲದಲ್ಲಿ ಅನುಷ್ಠಾನಕ್ಕೆ ಉದ್ದೇಶಿಸಲಾಗಿದೆ.
-ಡಾ| ಶಿವಯೋಗಿ,
ರಾಜ್ಯ ಮುಖ್ಯಸ್ಥರು, ಕ್ಷಯರೋಗ ವಿಭಾಗ

– ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next