Advertisement

ಮನೆ ಬಾಗಿಲಿಗೆ ಕ್ಷಯರೋಗ ತಪಾಸಣೆ

01:19 PM Nov 23, 2019 | Team Udayavani |

ಬೆಳಗಾವಿ: ಜಿಲ್ಲೆಯ ಎಲ್ಲ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನ. 25 ರಿಂದ ಮನೆ-ಮನೆಗೆ ಭೇಟಿ ನೀಡಿ ಕ್ಷಯರೋಗ ತಪಾಸಣೆ ಮಾಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್‌.ಬಿ. ಬೊಮ್ಮನಹಳ್ಳಿ ಹೇಳಿದರು.

Advertisement

ಜಿಲ್ಲಾದ್ಯಂತ ಕ್ಷಯರೋಗ ಪತ್ತೆ ಅಭಿಯಾನವನ್ನು ನ.25 ರಿಂದ ಡಿ. 10 ರವರೆಗೆ ಆಯೋಜಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನದ ಪ್ರಚಾರ ಸಾಮಗ್ರಿ ಬಿಡುಗಡೆಗೊಳಿಸಿ ಮಾತನಾಡಿದ ಆವರು, ಜಿಲ್ಲೆಯ ಒಟ್ಟಾರೆ 53 ಲಕ್ಷ ಜನಸಂಖ್ಯೆಯ ಮನೆ ಮನೆಗೆ ಬೇಟಿ ನೀಡಲಾಗುವುದು. ಈ ಆಂದೋಲನದಲ್ಲಿ ಪ್ರತಿಶತ 100 ರಷ್ಟು ಜನಸಂಖ್ಯೆಯನ್ನು ತಲುಪಿ ಕ್ಷಯರೋಗ ತಪಾಸಣೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ. ವಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರವು ಭಾರತವನ್ನು ಕ್ಷಯ ಮುಕ್ತಗೊಳಿಸುವ ನಿಟ್ಟಿನಲ್ಲಿ ಭಾರತದಾದ್ಯಂತ ಕ್ಷಯ ಮುಕ್ತ ಸಮಾಜಕ್ಕಾಗಿ ಆಂದೋಲನವನ್ನು ಹಮ್ಮಿಕೊಂಡಿದೆ. ಇದಕ್ಕಾಗಿ ಜಿಲ್ಲಾದ್ಯಂತ 7636 ನುರಿತ ಆರೋಗ್ಯ ಸಹಾಯಕರು ಹಾಗೂ ಆಶಾ,  ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ವಯಂ ಸೇವಕರನ್ನೊಳಗೊಂಡ ತಂಡಗಳನ್ನು ರಚಿಸಲಾಗುವುದು. ಪ್ರತಿ ತಂಡವು ಪ್ರತಿದಿನ 20 ರಿಂದ 30 ಮನೆಗಳಿಗೆ ಭೇಟಿ ನೀಡಿ ಕುಟುಂಬದ ಎಲ್ಲ ಸದಸ್ಯರಿಗೆ ಕ್ಷಯರೋಗ ಕುರಿತು ಜಾಗೃತಿ ಮೂಡಿಸಲಾಗುತ್ತದೆ ಎಂದರು.

ಕ್ಷಯರೋಗದ ಲಕ್ಷಣಗಳುಳ್ಳ ಕುಟುಂಬದ ಸದಸ್ಯರ ಕಫವನ್ನು ಸ್ಥಳದಲ್ಲಿಯೇ ಸಂಗ್ರಹಿಸಿ ತಪಾಸಣೆಗೆ ನಿಯೋಜಿತ ಕಫ ತಪಾಸಣಾ ಕೇಂದ್ರಕ್ಕೆ ಕಳುಹಿಸಿ, ತಪಾಸಿಸಿ ಕ್ಷಯರೋಗವಿದ್ದುದು ಕಂಡು ಬಂದಲ್ಲಿ ಸ್ಥಳದಲ್ಲಿಯೇ ಉಚಿತ ಚಿಕಿತ್ಸೆ ನೀಡಲಾಗುವುದು. ಅದಲ್ಲದೇ ಜಿಲ್ಲೆಯ ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಉಚಿತ ಕ್ಷ-ಕಿರಣ ತಪಾಸಣೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಇದಲ್ಲದೇ ಕ್ಷ-ಕಿರಣ ಪರೀಕ್ಷೆಯಲ್ಲಿ ಸಂಶಯಾಸ್ಪದ ಕ್ಷಯರೋಗಿಗಳಿಗೆ ಸಿಬಿನ್ಯಾಟ್‌ (ತ್ವರಿತ ಕ್ಷಯರೋಗ ತಪಾಸಣಾ ಯಂತ್ರ) ಸೌಲಭ್ಯವನ್ನು ಜಿಲ್ಲೆಯ ಅಥಣಿ, ಗೋಕಾಕ, ಚಿಕ್ಕೋಡಿ, ಸವದತ್ತಿ ಹಾಗೂ ಬೆಳಗಾವಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕಲ್ಪಿಸಲಾಗುವುದು ಎಂದರು.

Advertisement

ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next