Advertisement

2025ಕ್ಕೆ ಕ್ಷಯರೋಗ ಮುಕ್ತ ಜಿಲ್ಲೆಗೆ ಪಣ

12:58 PM Mar 27, 2019 | Lakshmi GovindaRaju |

ಚಿಕ್ಕಬಳ್ಳಾಪುರ: ಕ್ಷಯರೋಗ ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸಿರುವ ಕಾರ್ಯಕ್ರಮಗಳ ಅನುಷ್ಟಾನದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಇಡೀ ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿದ್ದು, 2025ಕ್ಕೆ ಜಿಲ್ಲೆಯನ್ನು ಸಂಪೂರ್ಣ ಕ್ಷಯ ರೋಗ ಮುಕ್ತ ಜಿಲ್ಲೆಯಾಗಿ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಜಿಪಂ ಸಿಇಒ ಗುರುದತ್‌ ಹೆಗಡೆ ತಿಳಿಸಿದರು.

Advertisement

ವಿಶ್ವ ಕ್ಷಯರೋಗ ದಿನಾಚರಣೆ ಪ್ರಯುಕ್ತ ಜಿಲ್ಲಾಡಳಿತ, ಜಿಪಂ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಡೆದ ಜನ ಜಾಗೃತಿ ಜಾಥಾಗೆ ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು.

ದೇಶದಲ್ಲಿ ಪಲ್ಸ್‌ ಪೋಲಿಯೋ ಮಾದರಿಯಲ್ಲಿ ಟಿಬಿ ಕಾಯಿಲೆ ನಿಯಂತ್ರಣಕ್ಕೆ ದೇಶದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದ್ದು, ಆರೋಗ್ಯ ಇಲಾಖೆ ಸೇವೆಗಳನ್ನು ಜಿಲ್ಲೆಯಲ್ಲಿ ಗುರುತಿಸಿರುವ ಕ್ಷಯ ರೋಗಿಗಳಿಗೆ ಮುಟ್ಟಿಸಬೇಕೆಂದರು.

ಟಿಬಿಗೆ ಹೊಸ ಚಿಕಿತ್ಸೆ ವಿಧಾನ: ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಎಂ.ರವಿಶಂಕರ್‌ ಮಾತನಾಡಿ, 2018 ಜನವರಿಯಿಂದ ಈಚೆಗೆ ದೃಢಪಡುವ ಎಲ್ಲಾ ಕ್ಷಯರೋಗಿಗಳಿಗೆ ದಿನನಿತ್ಯ ಮಾತ್ರೆ ನುಂಗಿಸುವ ಹೊಸ ವಿಧಾನ ಈಗ ಸರ್ಕಾರಿ ಆಸ್ಪತ್ರೆಗಳಲ್ಲಿ ಜಾರಿಯಲ್ಲಿದೆ.

ಏಪ್ರಿಲ್‌-2018 ರಿಂದ ದೃಢ‌ಪಡುವ ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರಕ್ಕಾಗಿ ಪ್ರತಿ ತಿಂಗಳು 500 ರೂ. ಗಳನ್ನು ರೋಗಿಯ ಉಳಿತಾಯ ಖಾತೆಗೆ ಇಲಾಖೆ ವತಿಯಿಂದ ವರ್ಗಾವಣೆ ಮಾಡಲಾಗುತ್ತಿದೆ. ಕ್ಷಯ ದೃಢಪಟ್ಟ ರೋಗಿಗಳಿಗೆ 6 ತಿಂಗಳು, 9 ತಿಂಗಳು ಮತ್ತು 12 ತಿಂಗಳು ಚಿಕಿತ್ಸೆಯನ್ನು ಉಚಿತವಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದೆ.

Advertisement

ಶಂಕಿತ ಕ್ಷಯ ರೋಗಿಗಳು ಕಫ‌ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿನ ಸಿಬಿನಾಟ್‌ ಪ್ರಯೋಗಾಲಯಕ್ಕೆ ನೇರವಾಗಿ ಬಂದು ಪರೀಕ್ಷಿಸಿಕೊಂಡು ಕೇವಲ 2 ಗಂಟೆಯಲ್ಲಿ ಫ‌ಲಿತಾಂಶ ಪಡೆಯಬಹುದಾಗಿದೆ. ಈ ಪರೀಕ್ಷೆ ಉಚಿತವಾಗಿ ಮಾಡಲಾಗುವುದೆಂದು ತಿಳಿಸಿದರು.

ಜನ ಜಾಗೃತಿ ಜಾಥಾ ಜಿಲ್ಲಾಸ್ಪತ್ರೆ ಆವರಣದಿಂದ ಪ್ರಾರಂಭವಾಗಿ ಎಂ.ಜಿ.ರಸ್ತೆ, ಖಾಸಗಿ ಬಸ್‌ ನಿಲ್ದಾಣ, ಶಿಡ್ಲಘಟ್ಟ ಸರ್ಕಲ್‌, ಬೆಂಗಳೂರು ರಸ್ತೆ, ಬಜಾರ್‌ ರಸ್ತೆ ಮಾರ್ಗವಾಗಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಮುಕ್ತಾಯಗೊಳಿಸಲಾಯಿತು. ಜೊತೆಗೆ ಪಟ್ಟಣದ ಮೂರು ಸ್ಥಳಗಳಲ್ಲಿ ಮಾಹಿತಿ ಮಳಿಗೆಗಳನ್ನು ಸ್ವಯಂ ಸೇವಾ ಸಂಸ್ಥೆಗಳಾದ ಕಾಸ, ಕೂರ್ಗ, ನಿಸರ್ಗ, ರಿವಾರ್ಡ್ಸ್‌ ಮತ್ತು ಆಶಾ ಸಂಸ್ಥೆಗಳಿಂದ ಸಾರ್ವಜನಿಕರಲ್ಲಿ ಅರಿವು ಮುಡಿಸಲಾಯಿತು.

ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರು ಮತ್ತು ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಡಾ.ವೆಂಕಟಚಲಪತಿ, ನಿವಾಸಿ ವೈದ್ಯಾಧಿಕಾರಿ ರಮೇಶ್‌, ತಾಲೂಕು ಆರೋಗ್ಯಾಧಿಕಾರಿ ಡಾ.ಮಿತ್ರಣ್ಣ, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು ಹಾಗೂ ವಿದ್ಯಾರ್ಥಿಗಳು ಇದ್ದರು. ಇದೇ ವೇಳೆ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಪೆರೇಸಂದ್ರ ವ್ಯಾಪ್ತಿಯ ಕದಿರಿದೇವಹಳ್ಳಿಯನ್ನು ಕ್ಷಯರೋಗ ಮುಕ್ತ ಗ್ರಾಮವೆಂದು ಘೋಷಣೆ ಮಾಡಲಾಯಿತು.

ಜಿಲ್ಲೆಯಲ್ಲಿ ಕ್ಷಯ ರೋಗಕ್ಕೆ 1,018 ಮಂದಿ ಬಲಿ: ಜಿಲ್ಲಾ ವ್ಯಾಪ್ತಿಯಲ್ಲಿ ಜುಲೈ 2008 ರಿಂದ 2018 ರ ಅಂತ್ಯದವರೆಗೆ ಒಟ್ಟು 17,203 ಕ್ಷಯರೋಗಿಗಳನ್ನು ಪತ್ತೆ ಹಚ್ಚಲಾಗಿದೆ. ಅವರಲ್ಲಿ 13,120 ರೋಗಿಗಳು ಡಾಟ್ಸ್‌ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಆ ಪೈಕಿ 1,018 ಮಂದಿ ನಿಧರಾಗಿದ್ದಾರೆ.

ಇನ್ನೂ 1,113 ರೋಗಿಗಳು ಕ್ಷಯ ರೋಗ ಚಿಕಿತ್ಸೆ ನಿರಾಕರಿಸಿದ್ದು, ಉಳಿದ 423 ರೋಗಿಗಳಿಗೆ ಚಿಕಿತ್ಸೆ ಫ‌ಲವಾಗಿದೆ. 2018 ರಲ್ಲಿ ಒಟ್ಟು 1,669 ರೋಗಿಗಳನ್ನು ಪತ್ತೆ ಹಚ್ಚಿದ್ದು ಆ ಪೈಕಿ 1016 ಗುಣಮುಖವಾಗಿದ್ದು, 91 ರೋಗಿಗಳು ಮರಣಹೊಂದಿದ್ದಾರೆ. ಉಳಿದ 519 ರೋಗಿಗಳು ಹಾಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಯಲ್ಲಾ ರಮೇಶ ಬಾಬು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next