ಪುತ್ತೂರು: ರಾಜ್ಯ ಸರಕಾರ ಬಿಡುಗಡೆ ಮಾಡಿರುವ 26 ಕ್ಷಯ ರೋಗ ಪತ್ತೆ ಯಂತ್ರಗಳಲ್ಲಿ ಒಂದನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ನೀಡಿದ್ದು, ಮಂಗಳವಾರ ಶಾಸಕಿ ಶಕುಂತಳಾ ಟಿ. ಶೆಟ್ಟಿ ಉದ್ಘಾಟಿಸಿದರು.
ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಮಾತ್ರ ಇದ್ದ ಕ್ಷಯ ರೋಗ ಪತ್ತೆ ಯಂತ್ರ (ಸಿ.ಬಿ. ನ್ಯಾಟ್) ಇನ್ನು ಮುಂದೆ ಪುತ್ತೂರು ತಾಲೂಕು ಸರಕಾರಿ ಆಸ್ಪತ್ರೆಯಲ್ಲೂ ಲಭ್ಯವಿದೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಇದುವರೆಗೆ ಸಿ.ಬಿ.ನ್ಯಾಟ್ ಯಂತ್ರ ಇತ್ತು. ಇದೀಗ ಎರಡನೇ ಹಂತದಲ್ಲಿ 26 ಯಂತ್ರಗಳನ್ನು ಬಿಡುಗಡೆ ಮಾಡಲಾಗಿದೆ.
ಯಂತ್ರ ಉದ್ಘಾಟಿಸಿ ಮಾತನಾಡಿದ ಶಾಸಕಿ ಶಕುಂತಳಾ ಶೆಟ್ಟಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸವಲತ್ತುಗಳು ತಲುಪಬೇಕು. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಇದು ಪೂರಕ. ಮಂಗಳೂರು ಬಿಟ್ಟರೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಮಾತ್ರ ಈ ಸೌಕರ್ಯ ಬಂದಿದೆ. ಇದರ ಸದುಪಯೋಗ ಆಗಬೇಕೆಂದರು.
ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ್ ಶುಭ ಹಾರೈಸಿದರು. ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿ ಕಾರಿ ಡಾ| ಬದ್ರುದ್ದೀನ್ ಮಾತನಾಡಿ, ಕಫದಲ್ಲಿ ಕ್ಷಯ ರೋಗದ ಅಂಶ ಕಂಡು ಬಂದರೆ ಅಂಥವರನ್ನು ಪರೀಕ್ಷೆಗೆ ಒಳಪಡಿಸಲು ಈ ಯಂತ್ರ ಬಳಕೆ ಆಗುತ್ತದೆ. ಶಂಕಿತ ಎಚ್‌ಐವಿ ಸೋಂಕಿತರನ್ನು ಈ ಯಂತ್ರದಿಂದ ಪರೀಕ್ಷಿಸಲಾಗುತ್ತದೆ. ಅದೇ ರೀತಿ ಮಕ್ಕಳನ್ನು ತಪಾಸಣೆ ಮಾಡಲು ಸಾಧ್ಯ. ಬಹು ಔಷ ಧ ನಿರೋಧಕ (ಎಂಡಿಆರ್) ಪರೀಕ್ಷೆ ಮಾಡಲು ಸಾಧ್ಯವಿದೆ. ಒಂದು ಪರೀಕ್ಷೆ ಮತ್ತು ಫಲಿತಾಂಶಕ್ಕೆ ಎರಡು ಗಂಟೆ ತೆಗೆದುಕೊಳ್ಳಲಾಗುತ್ತದೆ. ಪುತ್ತೂರಿನಲ್ಲಿ ಈ ಸವಲತ್ತು ಅಳವಡಿಸಿರುವ ಕಾರಣ ಸಾಕಷ್ಟು ಮಂದಿಗೆ ಪ್ರಯೋಜನವಾಗಲಿದೆ ಎಂದರು.
ತಾಲೂಕು ಆರೋಗ್ಯ ಅಧಿಕಾರಿ ಡಾ| ಅಶೋಕ್ ರೈ, ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿ ಕಾರಿ ಡಾ| ವೀಣಾ, ಸಂದರ್ಶಕರ ಸಮಿತಿ ಸದಸ್ಯೆ ನಯನಾ ರೈ, ಮಂಜುನಾಥ್ ಉಪಸ್ಥಿತರಿದ್ದರು. ಐಸಿಟಿಸಿ ಕೌನ್ಸಿಲರ್ ತಾರಾನಾಥ್ ಕಾರ್ಯಕ್ರಮ ನಿರೂಪಿಸಿದರು. ಆಸ್ಪತ್ರೆಯ ವೈದ್ಯರಾದ ಡಾ| ಜಗದೀಶ್, ಡಾ| ಅರ್ಚನಾ, ಡಾ| ಆಶಾಜ್ಯೊತಿ, ಡಾ| ಸ್ಮಿತಾ ರಾಣಿ ಸಹಕರಿಸಿದರು.