Advertisement

ಕ್ಷಯ ತಡೆಗೆ ಜನರೂ ಕೈ ಜೋಡಿಸಲಿ

09:45 AM Jan 03, 2019 | Team Udayavani |

ಬೆಳಗಾವಿ: ಕ್ಷಯರೋಗ ಒಂದು ಸಾಂಕ್ರಾಮಿಕವಾಗಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಮಹಾಪೌರ ಬಸಪ್ಪ ಚಿಕ್ಕಲದಿನ್ನಿ ಕರೆ ನೀಡಿದರು. ಭಾರತವನ್ನು ಕ್ಷಯ ಮುಕ್ತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೈಗೊಂಡಿರುವ ಆಂದೋಲನಕ್ಕೆ ಇಲ್ಲಿಯ ರಾಮನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ರಾಮನಗರದ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಫ ತಪಾಸಣೆ ಕೇಂದ್ರ ಆರಂಭಿಸಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

Advertisement

ಪಾಲಿಕೆ ಸದಸ್ಯ ಮೈನಾಬಾಯಿ ಚೌಗುಲಾ ಮಾತನಾಡಿ, ಆರೋಗ್ಯ ಕಾರ್ಯಕರ್ತರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ನಗರದ ಕೊಳಚೆ ಪ್ರದೇಶಗಳಲ್ಲಿ ನಿರಂತರವಾಗಿ ಆರೋಗ್ಯ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಕ್ಷಯರೋಗದಂತಹ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬೇಕು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ| ಶೈಲಜಾ ತಮ್ಮಣ್ಣವರ ಜಿಲ್ಲೆಯಲ್ಲಿ 1,129 ಸೂಕ್ಷ್ಮಪ್ರದೇಶಗಳಲ್ಲಿ ಒಟ್ಟಾರೆ 10.52 ಲಕ್ಷ ಜನಸಂಖ್ಯೆ ಗುರುತಿಸಲಾಗಿದ್ದು ಮನೆ-ಮನೆ ಭೇಟಿ ನೀಡಿ ಕ್ಷಯರೋಗ ತಪಾಸಣೆ ಮಾಡುವ ಗುರಿ ಹೊಂದಲಾಗಿದೆ.

ಈ ಆಂದೋಲನದಲ್ಲಿ ಜಿಲ್ಲೆಯ ಪ್ರತಿಶತ 20 ರಷ್ಟು ಜನಸಂಖ್ಯೆಯನ್ನು ತಲುಪಿ ಕ್ಷಯರೋಗ ತಪಾಸಣೆ ಮಾಡುವ ಗುರಿ ಇದೆ. ಇದಕ್ಕಾಗಿ 1,680 ನುರಿತ ಆರೋಗ್ಯ ಸಹಾಯಕರು ಹಾಗೂ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನೊಳಗೊಂಡ ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು. ಪ್ರತಿ ತಂಡವು ಪ್ರತಿದಿನ 50 ರಿಂದ 60 ಮನೆಗಳನ್ನು ಭೇಟಿ ಮಾಡಿ ಕುಟುಂಬದ ಎಲ್ಲ ಸದಸ್ಯರಿಗೆ ಕ್ಷಯರೋಗ ಕುರಿತು ಜಾಗೃತಿ ಮೂಡಿಸಿ ಕ್ಷಯರೋಗದ ಲಕ್ಷಣಗಳುಳ್ಳ ಕುಟುಂಬದ ಸದಸ್ಯರ ಕಫವನ್ನು ಸ್ಥಳದಲ್ಲಿಯೇ ಸಂಗ್ರಹಿಸಿ ತಪಾಸಣೆ ಮಾಡಲಿದೆ ಎಂದರು. ತಾಲೂಕಾ ಆರೋಗ್ಯಾಧಿಕಾರಿ ಡಾ| ಸಂಜಯ ಡುಮ್ಮಗೋಳ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸವರಾಜ ಯಲಿಗಾರ, ಹಿರಿಯ ಆರೋಗ್ಯ ಸಹಾಯಕ ಸಿ.ಜಿ.ಅಗ್ನಿಹೊತ್ರಿ, ವಸಂತ ಪಾತಳಿ, ದೀಪಾ ಕುಂದಗೋಳ ಉಪಸ್ಥಿತರಿದ್ದರು . ಡಾ| ಜಗದೀಶ ಪಾಟ್ನೆ  ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next