Advertisement

ಕ್ಷಯ ರೋಗ ಪತ್ತೆ ಆಂದೋಲನಕ್ಕೆ ಸಜ್ಜು

06:00 AM Jun 29, 2018 | |

ಬ್ರಹ್ಮಾವರ: ದೇಶವನ್ನು ಕ್ಷಯ ಮುಕ್ತ ಮಾಡುವ ಸಂಕಲ್ಪದೊಂದಿಗೆ ಜುಲೈ ಮತ್ತು ಡಿಸೆಂಬರ್‌ನಲ್ಲಿ ಸಕ್ರೀಯ ಕ್ಷಯ ರೋಗ ಪತ್ತೆ ಆಂದೋಲನ ಹಮ್ಮಿಕೊಳ್ಳಲಾಗಿದೆ. ಜು.2ರಿಂದ 17ರ ವರೆಗೆ ಸಾರ್ವತ್ರಿಕವಾಗಿ ಕಾರ್ಯಕ್ರಮ ಜರಗಲಿದೆ.

Advertisement

ಉಡುಪಿ ಜಿಲ್ಲೆಯ ಹೈ-ರಿಸ್ಕ್ ಪ್ರದೇಶದ ಮ್ಯಾಪಿಂಗ್‌ ಈಗಾಗಲೇ ಸಿದ್ಧಗೊಂಡಿದೆ. ವಿಶೇಷ ತಂಡಗಳನ್ನು ರಚಿಸಿ ಜಿಲ್ಲೆಯಾದ್ಯಂತ ಸಂಚರಿಸಿ ಕ್ಷಯ ಪತ್ತೆ ಹಚ್ಚಲು, ಜಾಗೃತಿ ಮೂಡಿಸಲು ಇಲಾಖೆ ಸಜ್ಜಾಗಿದೆ.

ಕ್ಷಯ ರೋಗ ಪತ್ತೆ ಹಾಗೂ ಸೂಕ್ತ ಚಿಕಿತ್ಸೆ ಇಂದಿಗೂ ದೊಡ್ಡ ಸವಾಲಾಗಿದ್ದು, ಜಾಗೃತಿ ಕೊರತೆ ಮತ್ತು ನಿರ್ಲಕ್ಷéದಿಂದ ಲಕ್ಷಾಂತರ ಜನ ಪ್ರತಿ ವರ್ಷ ಕ್ಷಯ ರೋಗಕ್ಕೆ ತುತ್ತಾಗುತ್ತಿದ್ದಾರೆ. ಇದಕ್ಕಾಗಿ ಸಕ್ರಿಯ ಕ್ಷಯ ರೋಗ ಪತ್ತೆ ಮತ್ತು ಜಾಗೃತಿಗೆ ಯೋಜನೆ ಸಿದ್ಧಗೊಂಡಿದೆ.

342 ತಂಡ ರಚನೆ
ಓರ್ವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಹಾಗೂ ಓರ್ವ ಆಶಾ ಕಾರ್ಯಕರ್ತೆಯನ್ನು ಒಳಗೊಂಡ ತಂಡ ರಚಿಸಲಾಗಿದೆ. ಜಿಲ್ಲೆಯಲ್ಲಿ ಇಂತಹ 342 ತಂಡ ರಚನೆಗೊಂಡಿದೆ. ಇವರು ಪ್ರತೀ ಹೈ-ರಿಸ್ಕ್ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.

ಕಾರ್ಯಾಚರಣೆ ಹೇಗೆ..?
ಕ್ಷಯ ಸಂಭಾವ್ಯ ಪ್ರದೇಶದ ಪ್ರತಿ ಮನೆಗೆ ತಂಡ ಭೇಟಿ ನೀಡುತ್ತದೆ. 6 ಸಾಮಾನ್ಯ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಕೆಮ್ಮು, ಜ್ವರ ಇತ್ಯಾದಿ ಕ್ಷಯದ ಲಕ್ಷಣಗಳು ಕಂಡು ಬಂದಲ್ಲಿ ಆ ವ್ಯಕ್ತಿಯ ಕಫ ಪರೀಕ್ಷೆ ಮಾಡಿ ಅದೇ ದಿನ‌ ರಿಪೋರ್ಟ್‌ ಪಡೆಯಲಾಗುತ್ತದೆ. ರೋಗ ದೃಢಪಟ್ಟಲ್ಲಿ ಹತ್ತಿರದ ಪ್ರಾ.ಆರೋಗ್ಯ ಕೇಂದ್ರದಲ್ಲಿ ಪರೀಕ್ಷಿಸಿ ಚಿಕಿತ್ಸೆ ಪ್ರಾರಂಭಿಸಲಾಗುತ್ತದೆ. ಅಗತ್ಯ ಬಂದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುವುದು.

Advertisement

ಜಿಲ್ಲೆಯ ವ್ಯವಸ್ಥೆಗಳು
ಉಡುಪಿ ಜಿಲ್ಲೆಯಲ್ಲಿ 19 ಡಯಾಗ್ನಸ್ಟಿಕ್‌ ಮೈಕ್ರೋಸ್ಕೋಪ್‌ ಸೆಂಟರ್‌(ಡಿ.ಎಂ.ಸಿ)ಗಳಿವೆ. ಇಲ್ಲಿ ಕಫದ ಮಾದರಿ 
ಪರೀಕ್ಷೆ ನಡೆಸಲಾಗುತ್ತದೆ. 9 ಎಕ್ಸರೇ ಕೇಂದ್ರಗಳಿವೆ. ಜಿಲ್ಲಾಸ್ಪತ್ರೆಯಲ್ಲಿ ಸಿಬಿ ನ್ಯಾಟ್‌ ಯಂತ್ರ ಅಳವಡಿಸಲಾಗಿದೆ. ಇದು ಕ್ಷಯವನ್ನು ಶೀಘ್ರ ಪತ್ತೆ ಮಾಡುತ್ತದೆ ಮತ್ತು ಯಾವ ರೋಗಿಗೆ ಯಾವ ಔಷಧ ನೀಡಿದರೆ ಉತ್ತಮ ಎನ್ನುವ ಮಾಹಿತಿಯನ್ನೂ ನೀಡುತ್ತದೆ.

452 ಹೈ ರಿಸ್ಕ್ ಏರಿಯಾ
ಉಡುಪಿ ಜಿಲ್ಲೆಯಲ್ಲಿ 452 ಹೈ ರಿಸ್ಕ್ ಪ್ರದೇಶಗಳನ್ನು ಗುರುತಿಸಲಾಗಿದೆ. ಸ್ಲಮ್‌ ಏರಿಯಾ, ವಲಸೆ ಕಾರ್ಮಿಕರ ಪ್ರದೇಶ, ಬುಡಕಟ್ಟು ಜನಾಂಗ ವಾಸಸ್ಥಳ, ಈಗಾಗಲೇ ಟಿ.ಬಿ. ಹೆಚ್ಚಾಗಿ ಕಂಡು ಬಂದಿರುವ ಪ್ರದೇಶ, ಅನಾಥಾಶ್ರಮ, ವೃದ್ಧಾಶ್ರಮಗಳು ಒಳಗೊಂಡಿದೆ. ಜಿಲ್ಲೆಯಲ್ಲಿ ಒಟ್ಟು 1,48,761 ಜನರನ್ನು ಪರೀಕ್ಷೆಗೆ ಒಳಪಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

ರೋಗ ಲಕ್ಷಣಗಳೇನು ?
ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಕಫ, ಜ್ವರ ಇರುವುದು. ದೇಹದ ತೂಕ ಗಣನೀಯವಾಗಿ ಕಡಿಮೆಯಾಗುವುದು. ಎದೆಗೂಡಿನ ಎಕ್ಸ್‌ರೇ ಮಾಡಿದರೆ ಅದರಲ್ಲಿ ಕ್ಷಯ ರೋಗಕ್ಕಿದ್ದಂತೆ ಕಂಡು ಬರುವುದು. ಕುತ್ತಿಗೆ ಹಿಡಿತ, ಸಂಧುಗಳು ನೋವು ಕಾಯಿಲೆಯ ಲಕ್ಷಣಗಳಾಗಿವೆ.

ವಿಶೇಷ ತರಬೇತಿ
ಆಂದೋಲನದಲ್ಲಿ ಭಾಗವಹಿಸುವ ತಂಡಗಳಿಗೆ ವಿಶೇಷ ತರಬೇತಿ ನೀಡಲಾಗಿದೆ. ಈ ಬಾರಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಯಲಿದೆ. ವರ್ಷದ ಜುಲೈ ಹಾಗೂ ಡಿಸೆಂಬರ್‌ನಲ್ಲಿ ಆಂದೋಲನ ನಡೆಯಲಿದೆ.

ಸಹಕಾರ ಮುಖ್ಯ
ಆರೋಗ್ಯ ಇಲಾಖೆಯನ್ನು ತಲುಪದವರನ್ನು ಇಲಾಖೆಯೇ ಅವರ ಬಳಿ ತೆರಳುವ ಯೋಜನೆ ಇದು. ಕ್ಷಯ ರೋಗದ ಪತ್ತೆ ಹಾಗೂ ಅರಿವು ಮೂಡಿಸುವುದು ಮುಖ್ಯ ಉದ್ದೇಶ. ಇದಕ್ಕಾಗಿ ಸ್ಥಳೀಯಾಡಳಿತ, ಸಂಘ ಸಂಸ್ಥೆಗಳು, ಅಂಗನವಾಡಿ ಶಿಕ್ಷಕಿಯರು, ವಿದ್ಯಾರ್ಥಿಗಳ ಸಹಕಾರವನ್ನೂ ನಿರೀಕ್ಷಿಸಲಾಗಿದೆ.
– ಡಾ| ಚಿದಾನಂದ ಸಂಜು
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ

– ಪ್ರವೀಣ್‌ ಮುದ್ದೂರು

Advertisement

Udayavani is now on Telegram. Click here to join our channel and stay updated with the latest news.

Next