ಮುಳಗುಂದ: ಸಮೀಪದ ಕಣವಿ ಗ್ರಾಮದಲ್ಲಿ ಕ್ಷಯರೋಗದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.
ಕಣವಿ ಪ್ರಾ.ಆ.ಕೇಂದ್ರದ ಹಿರಿಯ ಆರೋಗ್ಯ ಸಹಾಯಕ ಆರ್.ವಿ.ಗುರಣ್ಣವರ ಮಾತನಾಡಿ, ಕ್ಷಯರೋಗದ ಲಕ್ಷಣಗಳಾದ 2 ವಾರಕ್ಕಿಂತ ಅಧಿಕವಾದ ಕೆಮ್ಮು, ಕಫ, ಕಫದಲ್ಲಿ ರಕ್ತ ಬೀಳುವುದು, ಸಾಯಂಕಾಲ ಜ್ವರ ಬರುವುದು, ರಾತ್ರಿ ವೇಳೆಯಲ್ಲಿ ವಿಪರೀತ ಬೆವರುವುದು. ಹಸಿವು ಕಡಿಮೆ ಆಗುವುದು. ತೂಕ ಕಡಿಮೆ ಆಗುವುದು. ಇಂತಹ ಲಕ್ಷಣಗಳುಳ್ಳ ವ್ಯಕ್ತಿಗಳನ್ನು ಗುರುತಿಸಿ, ಕಫ ಪರೀಕ್ಷೆ, ಕ್ಷ-ಕಿರಣ ಪರೀಕ್ಷೆ ಮಾಡಿಸುವ ಮೂಲಕ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯುವಂತೆ ಮಾಡುವುದು ಎಲ್ಲರ ಕರ್ತವ್ಯ ಎಂದರು.
ನಂತರ ಮಾತನಾಡಿದ ಕ್ಷಯರೋಗ ಮೇಲ್ವಿಚಾರಕ ಗಣೇಶ ಬಾಗಡೆ, ಕ್ಷಯರೋಗವು ಮೈಕೋಬ್ಯಾಕ್ಟೀರಿಯಾದಿಂದ ಗಾಳಿಯ ಮೂಲಕ ಹರಡುವ ಒಂದು ಸಾಂಕ್ರಾಮಿಕ ರೋಗವಾಗಿದ್ದು, ಇದು ಸೋಂಕುಳ್ಳ ವ್ಯಕ್ತಿಯು ಕೆಮ್ಮಿದಾಗ ಮತ್ತು ಸೀನಿದಾಗ ಗಾಳಿಯ ಮೂಲಕ ಹರಡುತ್ತದೆ. ಚಿಕಿತ್ಸೆ ಪಡೆಯದ ಒಬ್ಬ ವ್ಯಕ್ತಿಯು ಒಂದು ವರ್ಷದಲ್ಲಿ 10 ಕ್ಕಿಂತ ಹೆಚ್ಚು ಜನರಿಗೆ ರೋಗ ಹರಡಬಲ್ಲನು. ಆದ್ದರಿಂದ ಬೇಗನೆ ರೋಗ ಗುರುತಿಸಿ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.
ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಉಮೇಶ ಕರಮುಡಿ ಮಾತನಾಡಿ, ಕ್ಷಯರೋಗದ ಚಿಕಿತ್ಸೆ ಉಚಿತವಾಗಿದ್ದು, ಎಲ್ಲ ಸರಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಲಭ್ಯವಿರುತ್ತದೆ ಎಂದು ಹೇಳಿದರು.
ಕಿರಿಯ ಆರೋಗ್ಯ ಸಹಾಯಕ ನವೀನ ಸಾವಂತ ಮಾತನಾಡಿ, ಎಸಿಎಫ್ ಕಾರ್ಯಕ್ರಮದ ಅಂಗವಾಗಿ ಜು.15 ರಿಂದ 27ರವರೆಗೆ ಆಶಾ ಹಾಗೂ ಆರೋಗ್ಯ ಕಾರ್ಯಕರ್ತರು ಮನೆ ಮನೆ ಭೇಟಿ ಮಾಡಿ ರೋಗಿಗಳನ್ನು ಗುರುತಿಸುತ್ತಿದ್ದಾರೆ. ಜನರಿಗೆ ಆರೋಗ್ಯ ಶಿಕ್ಷಣ ನೀಡುತ್ತಿದ್ದು, ಜನರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.
ಪ್ರವೀಣ ರಾಮಗಿರಿ, ಅಶೋಕ , ಡಿ.ಎಂ. ಬೆಟಗೇರಿ, ನಾಗಪ್ಪ ದ್ಯಾವಣ್ಣವರ ಹಾಗೂ ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದರು.