Advertisement
ನಾಡಿನಾದ್ಯಂತ ಬೇಸಿಗೆ ಶುರುವಲ್ಲೇ ನೀರಿನ ಕೊರತೆ ಕಂಡು ಬರುತ್ತಿದೆ. ನೀರಿಲ್ಲ ಎಂದ ಕೂಡಲೇ ಜನರಿಗೆ ಮೊದಲು ನೆನಪಾಗುವುದು ಬೋರ್‌ವೆಲ್‌ಗಳು. ಎಷ್ಟೇ ಖರ್ಚಾದರೂ ಸರಿ ಬೋರ್‌ವೆಲ್ ಕೊರೆದರೆ ನೀರು ಸಿಗುತ್ತದೆ ಎಂಬ ನಂಬಿಕೆಯೊಂದು ಅದ್ಹೇಗೋ ಹುಟ್ಟಿಕೊಂಡಿದೆ. ಹಗಲು-ರಾತ್ರಿ ಎಂಬ ವ್ಯತ್ಯಾಸವಿಲ್ಲದಂತೆ ಅಲ್ಲಲ್ಲಿ ದೈತ್ಯಾಕಾರದ ಯಂತ್ರಗಳು ಭೂಮಿಯನ್ನು ಕೊರೆಯುವ ಸದ್ದು ಎದೆ ಝಲ್ಲೆನಿಸುತ್ತಿದೆ. 500, 600 ಅಡಿ ಕೊರೆದರೂ ಕೆಲವೊಮ್ಮೆ ನೀರು ಸಿಗುವುದೆಂಬ ಖಾತ್ರಿ ಇಲ್ಲ, ಸಿಕ್ಕಿದರೂ ಅತ್ಯಲ್ಪ. ಇಂತಹ ಕೊಳವೆ ಬಾವಿಗಳಲ್ಲಿ ಆರು ತಿಂಗಳು, ಒಂದು ವರ್ಷದ ತನಕ ನೀರು ದೊರೆತರೆ ಅದೇ ಹೆಚ್ಚು. ಆದರೂ ಪ್ರತಿ ವರ್ಷ ಕೊರೆಯುವುದು ನಿಂತಿಲ್ಲ. ಭೂಮಿಯ ಮೇಲೆ ದೌರ್ಜನ್ಯ ನಿರಂತರ ಮುಂದುವರಿದಿದೆ.
Related Articles
Advertisement
ಪರಿಸರ ಮಾಲಿನ್ಯದಿಂದ ಈಗಾಗಲೇ ಕಂಗೆಟ್ಟಿರುವ ನಾಡಿಗೆ ನದಿ ತಿರುವು ಹಾಗೂ ಇನ್ನಿತರ ಯೋಜನೆಗಳ ಸಮಸ್ಯೆ ಒಂದೆಡೆಯಾದರೆ ಇನ್ನೊಂದೆಡೆ ಅಲ್ಲಲ್ಲಿ ನೂರಾರು ಕೊಳವೆ ಬಾವಿಗಳನ್ನು ನಿರ್ಮಿಸುತ್ತಿರುವುದು ಆತಂಕಕಾರಿ ಸಂಗತಿ. ಹೊಸ ಕೊಳವೆಬಾವಿ ಕೊರೆಯುವಾಗ ಸಂಭವಿಸುವ ಶಬ್ದ ಮಾಲಿನ್ಯ, ಧೂಳು, ಜಲ್ಲಿ ಹುಡಿಗಳಿಂದ ಪರಿಸರದ ಸಸ್ಯಗಳಿಗೆ ಹಾನಿ.
ಆರೋಗ್ಯಕ್ಕೂ ಈ ಧೂಳು ಹಾನಿಕರ. ಕೆಲವೊಮ್ಮೆ ಈ ಧೂಳನ್ನು ತೊಳೆಯಲು ಬೇಕಾಗುವಷ್ಟು ನೀರು ಕೂಡಾ ಸಿಗಲಾರದು, ಅಷ್ಟು ವ್ಯಾಪಕವಾಗಿ ಧೂಳು, ಕೆಸರು ಮಿಶ್ರಿತ ಮಣ್ಣಿನ ರಾಶಿ ಎದ್ದಿರುತ್ತದೆ. ಪ್ರಾಕೃತಿಕವಾಗಿ ಸ್ವತ್ಛವಾಗಲು ಮಳೆಯನ್ನೇ ನಿರೀಕ್ಷಿಸಬೇಕಷ್ಟೇ. ಮುಂಗಾರು ಮಳೆ ಆಗಮನದ ತನಕವೂ ಕೊಳವೆ ಬಾವಿಯಿಂದೆದ್ದ ಧೂಳಿನ ಪ್ರಭಾವ ಪರಿಸರದ ಮೇಲೆ ಇರುತ್ತದೆ.
ಜಲ ತಜ್ಞರು ಹೇಳುವಂತೆ ಮಳೆಗಾಲದಲ್ಲಿ ಮಳೆ ನೀರನ್ನು ಹೊರಗೆ ಹೋಗಗೊಡದೆ ತಮ್ಮ ತಮ್ಮ ಹಿತ್ತಿಲಿನಲ್ಲೇ ಇಂಗು ಗುಂಡಿಗಳ ಮುಖೇನ ಇಂಗಿಸಿಕೊಂಡರೆ ಬಾವಿ, ಕೆರೆಗಳನ್ನು ಸಮೃದ್ಧಗೊಳಿಸಿಕೊಳ್ಳಬಹುದು. ಕೊಳವೆ ಬಾವಿಗಳ ಹೊರತಾಗಿಯೂ ಕೆಲವು ಕಡೆಗಳಲ್ಲಿ ಹಳೆ ಕಾಲದ ಕೆರೆ, ಬಾವಿಗಳನ್ನು ದುರಸ್ತಿಪಡಿಸಿದರೆ ನೀರು ದೊರಕಬಹುದು. ಸ್ಥಳೀಯ ಆಡಳಿತಗಳು ಏಕಾಏಕಿ ಕೊಳವೆ ಬಾವಿಗಳಿಗೆ ಆಸಕ್ತಿ ತೋರಿಸುವುದನ್ನು ಬಿಟ್ಟು ಇಂತಹ ಕೆರೆ ಬಾವಿಗಳ ಹೂಳೆತ್ತಿ ಅಭಿವೃದ್ಧಿಪಡಿಸುವತ್ತ ಚಿಂತನೆ ನಡೆಸಬೇಕಾಗಿದೆ.
ಅಂತಹ ಕೆರೆಗಳಲ್ಲಿ ಕೊಳವೆ ಬಾವಿಗಳಲ್ಲಿ ದೊರಕುವುದಕ್ಕಿಂತ ಹೆಚ್ಚಿನ ಪ್ರಮಾಣದ ನೀರು ಲಭ್ಯವಾಗುತ್ತದೆ. ಗಮನಾರ್ಹವಾದ ಮತ್ತೂಂದು ವಿಚಾರವೆಂದರೆ ಹತ್ತಾರು ವರ್ಷಗಳ ಹಿಂದೆ ಅಗಾಧ ನೀರಿನ ಸಾಮರ್ಥ್ಯವಿದ್ದ ಕೊಳವೆ ಬಾವಿಗಳಲ್ಲಿ ಈಗ ನೀರಿನ ಪ್ರಮಾಣ ಕಡಿಮೆಯಾಗಿರುವುದು.
ಅಧಿಕ ಉಷ್ಣಾಂಶದ ಪ್ರದೇಶವಾದ ನಮ್ಮ ರಾಜ್ಯದಲ್ಲಿ ನೀರಿನ ಬಳಕೆ ಪ್ರಮಾಣ ಹೆಚ್ಚು. ಬೇಡಿಕೆಯೂ ಅಧಿಕ. ಅವಶ್ಯಕತೆಗೆ ತಕ್ಕಂತೆ ಪೂರೈಸುವುದು ಆಡಳಿತದವರಿಗೂ ಕಷ್ಟಕರವೇ. ಕಾಂಕ್ರೀಟ್ ಕಟ್ಟಡ ನಿರ್ಮಾಣಗಳಿಗೆ ಬೇಕಾಗುವ ನೀರಿನ ಪ್ರಮಾಣವು ಹೆಚ್ಚಾಗಿದೆ. ಸಮಸ್ತ ಜನತೆ ಜಾಗರೂಕತೆಯಿಂದ ನೀರನ್ನು ಹಿತಮಿತವಾಗಿ ಬಳಸುವ ಮೂಲಕ ನೀರನ್ನು ಉಳಿಸಬೇಕಾಗಿದೆ. ಈ ಬಗ್ಗೆ ಜಾಗೃತಿ ಮೂಡಲಿ.
– ಎಲ್.ಎನ್.ಭಟ್ ಮಳಿ