ಹುಬ್ಬಳ್ಳಿ: ರೈಲಿನಲ್ಲಿ ಪ್ರಯಾಣಿಕರೊಬ್ಬರ ಮೊಬೈಲ್ ಕದಿಯುತ್ತಿದ್ದ ಕಳ್ಳನನ್ನು ಹಿಡಿಯಲು ಮುಂದಾದ ಟಿಕೆಟ್ ಪರೀಕ್ಷಕ(ಟಿಟಿಇ)ನನ್ನು ಕೆಳಗೆ ತಳ್ಳಿ ಕಳ್ಳ ಪರಾರಿಯಾದ ಘಟನೆ ರವಿವಾರ ಬೆಳಗಿನ ಜಾವ ಬೆಳಗಾವಿ ಜಿಲ್ಲೆ ರಾಯಬಾಗ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಘಟನೆಯಲ್ಲಿ ಹುಬ್ಬಳ್ಳಿಯ ಟಿಟಿಇ ಕೆ.ಎಂ. ಚಿನ್ನಪ್ಪ ಅವರ ಬೆರಳು ಮತ್ತು ತಲೆಗೆ ಗಂಭೀರ ಗಾಯಗಳಾಗಿದ್ದು, ನಗರದ ಕೇಂದ್ರೀಯ ರೈಲ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗೋವಾ ಎಕ್ಸ್‌ಪ್ರೆಸ್ (12780) ರೈಲು ರವಿವಾರ ಮೀರಜ್‌ನಿಂದ ಹುಬ್ಬಳ್ಳಿಗೆ ಆಗಮಿಸುತ್ತಿತ್ತು.
ಸ್ಲಿಪರ್ ಕೋಚ್ ಎಸ್3ರಿಂದ ಎಸ್5 ವರೆಗಿನ ಬೋಗಿಯಲ್ಲಿ ಟಿಟಿಇ ಕೆ.ಎಂ. ಚಿನ್ನಪ್ಪ ಕರ್ತವ್ಯ ನಿರ್ವಹಿಸುತ್ತಿದ್ದರು. ಬೆಳಗಿನ ಜಾವ 4:45 ಗಂಟೆ ಸುಮಾರಿಗೆ ಬೆಳಗಾವಿ ಜಿಲ್ಲೇ ರಾಯಬಾಗ ನಿಲ್ದಾಣದಲ್ಲಿ ರೈಲು ನಿಂತಿತ್ತು. ಕಳ್ಳನೊಬ್ಬ ಎಸ್ 10 ಬೋಗಿಯಲ್ಲಿ ಮಲಗಿದ್ದ ಪ್ರಯಾಣಿಕರೊಬ್ಬರ ಮೊಬೈಲ್ ಕದಿಯುತ್ತಿದ್ದ.
ಇದನ್ನು ಗಮನಿಸಿದ ಚಿನ್ನಪ್ಪ ಅವರು ಅವನನ್ನು ಹಿಡಿದು, ಮೊಬೈಲ್ ಕಿತ್ತುಕೊಂಡು ಪ್ರಯಾಣಿಕರಿಗೆ ಮರಳಿಸಿದರು. ನಂತರ ಖದೀಮನನ್ನು ಪೊಲೀಸರ ವಶಕ್ಕೆ ಒಪ್ಪಿಸಲು ಮುಂದಾದರು. ಆಗ ರೈಲು ರಾಯಬಾಗದಿಂದ ಹೊರಟಿತ್ತು. ಆ ವೇಳೆ ಶೌಚಾಲಯಕ್ಕೆ ಹೋಗುತ್ತೇನೆಂದು ಹೇಳಿದ ಕಳ್ಳ ರೈಲಿನಿಂದ ಜಿಗಿಯಲು ಮುಂದಾಗಿದ್ದಾನೆ.
ಇದನ್ನು ಗಮನಿಸಿದ ಚಿನ್ನಪ್ಪ ಮತ್ತೆ ಅವನನ್ನು ಹಿಡಿಯಲು ಹೋದಾಗ ಅವರನ್ನು ಬಲವಾಗಿ ತಳ್ಳಿ ರೈಲಿನಿಂದ ಜಿಗಿದು ಪರಾರಿಯಾಗಿದ್ದಾನೆ. ಇದನ್ನು ಗಮನಿಸಿದ ಪ್ರಯಾಣಿಕರು ರೈಲಿನ ಚೈನ್ ಎಳೆದಿದ್ದಾರೆ. ಕಳ್ಳನು ತಳ್ಳಿದ್ದರಿಂದ ಚಿನ್ನಪ್ಪರ ತಲೆಗೆ ಹಾಗೂ ಬೆರಳಿಗೆ ಬಲವಾದ ಗಾಯವಾಗಿದೆ.
ನಂತರ ಅವರನ್ನು ಘಟಪ್ರಭಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೇಂದ್ರೀಯ ರೈಲ್ವೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. ರೈಲ್ವೆ ಪೊಲೀಸರು ತಪ್ಪಿಸಿಕೊಂಡಿರುವ ಖದೀಮನ ಶೋಧ ಕಾರ್ಯ ಕೈಗೊಂಡಿದ್ದಾರೆ.