ಹೈದರಾಬಾದ್: ತಿರುಪತಿ ದೇಗುಲದ ಹುಂಡಿಯಲ್ಲಿದ್ದ ಸುಮಾರು 60 ಟನ್ ವಿದೇಶಿ ನಾಣ್ಯಗಳನ್ನು ಹೇಗೆ ವಿಲೇವಾರಿ ಮಾಡುವುದು ಎಂಬ ಸಮಸ್ಯೆಗೆ ಕೊನೆಗೂ ಪರಿಹಾರ ಸಿಕ್ಕಿದೆ. ತೆಲುಗು ಅನಿವಾಸಿ ಭಾರತೀಯರ ಸಂಸ್ಥೆ ಇದೀಗ ಆಂಧ್ರಪ್ರದೇಶ ಸರ್ಕಾರದ ಬೆಂಬಲ ದೊಂದಿಗೆ ಅದನ್ನು ಖರೀದಿಸಲಿದೆ. ವಿದೇಶಿ ಕರೆನ್ಸಿಯ ನೋಟುಗಳನ್ನು ಆರ್‌ಬಿಐಗೆ ಸಲ್ಲಿಸಿ ರೂಪಾಯಿಗೆ ಪರಿವರ್ತಿಸಲಾಗಿದೆ. ಆದರೆ ನಾಣ್ಯಗಳನ್ನು ವಿನಿಮಯ ಮಾಡಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಆರ್‌ಬಿಐ ಅಧಿಕಾರಿಗಳನ್ನು ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ಟಿಟಿಡಿ ಅಧಿಕಾರಿಗಳು ಹೇಳಿದ್ದಾರೆ. ನಾಣ್ಯಗಳನ್ನು ಆಯಾ ದೇಶಕ್ಕೆ ಕಳುಹಿ ಸುವ ಯೋಚನೆ ಮಾಡಲಾಗಿತ್ತಾದರೂ, ಸಾಗಣೆ ವೆಚ್ಚವೇ ನಾಣ್ಯದ ಮುಖಬೆಲೆಗಿಂತ ಹೆಚ್ಚಾಗುತ್ತಿತ್ತು. ಮೂಲಗಳ ಪ್ರಕಾರ ಈ ನಾಣ್ಯಗಳ ಮುಖಬೆಲೆ ಮೌಲ್ಯ 1 ರಿಂದ 1.5 ಕೋಟಿ ರೂ.
ವಿಶೇಷ ಕಲ್ಪನೆ: ನಾಣ್ಯಗಳು ತಿರುಪತಿಯದ್ದಾಗಿರುವುದರಿಂದ ಜನರಿಗೆ ಅದರ ಮೇಲೆ ದೈವಿಕ ನಂಬಿಕೆಯೂ ಇರುತ್ತದೆ. ವಿದೇಶಗಳಲ್ಲಿರುವ ಭಾರತೀಯರು ಪ್ರತಿ ಪೂಜೆಯಲ್ಲೂ ನಾಣ್ಯಗಳನ್ನು ದೈವೀ ಕೆಲಸಕ್ಕೆ ಬಳಸುತ್ತಾರೆ. ಹೀಗಾಗಿ ದೇಗುಲವು 20 ಡಾಲರ್‌ಗಳ ಮೌಲ್ಯದ ನಾಣ್ಯಗಳ ಪ್ಯಾಕ್ ಮಾಡಿ ಅನಿವಾಸಿ ಭಾರತೀಯರಿಗೆ ಮಾರಾಟ ಮಾಡಲು ನಿರ್ಧರಿಸಿದೆ. ಈ ಕಲ್ಪನೆಯನ್ನು ಟಿಟಿಡಿ ಅನಿವಾಸಿ ಭಾರತೀಯ ಭಕ್ತರ ವಾಟ್ಸಾಪ್ ಗ್ರೂಪ್‌ನಲ್ಲಿ ಪ್ರಸ್ತಾಪಿಸಿದಾಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ನಾಣ್ಯಗಳನ್ನು ತರಿಸಿಕೊಳ್ಳಲು ಅನಿವಾಸಿ ಭಾರತೀಯರೇ ಅಂಚೆ ವೆಚ್ಚ ಭರಿಸಬೇಕು. ಒಂದು ಪ್ಯಾಕ್‌ಗೆ ಅಂದಾಜು 2 ಸಾವಿರ ರೂ. ಆಗಲಿದೆ. ಸದ್ಯ ಡಾಲರ್, ಪೌಂಡ್ ಮತ್ತು ಮಲೇಷ್ಯಾದ ರಿಂಗಿಟ್ ನಾಣ್ಯಗಳು ಈ ಮಾದರಿಯಲ್ಲಿ ಲಭ್ಯವಿವೆ.
20 ಡಾಲರ್ ಮೌಲ್ಯದ ಪ್ಯಾಕೆಟ್‌ನಲ್ಲಿ ಕಾಯಿನ್ ನೀಡಲು ಚಿಂತನೆ
ನಾಣ್ಯಗಳ ವಿಲೇವಾರಿಯೇ ದೊಡ್ಡ ಸಮಸ್ಯೆಯಾಗಿತ್ತು ಟಿಟಿಡಿಗೆ