ಸುರತ್ಕಲ್ : ಪ್ರಾಕೃತಿಕ ವಿಕೋಪಗಳಲ್ಲಿ ಒಂದಾಗಿರುವ ಸುನಾಮಿ ಅಲೆಗಳಿಂದ ಕರಾವಳಿ ತೀರ ಹಾಗೂ ಬಂದರುಗಳನ್ನು ರಕ್ಷಿಸಲು ಬೇಕಾದ ಆತ್ಯಾಧುನಿಕ ತಂತ್ರಜ್ಞಾನ ಸಂಶೋಧನೆಗೆ ಕೇಂದ್ರದ ಬಂದರು, ಜಲಮಾರ್ಗ, ನೌಕಾಯಾನ ಸಚಿವಾಲಯ ಒತ್ತು ನೀಡಿದ್ದು, ಎನ್‌ಐಟಿಕೆಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಬಬ್ಲೂ ಚೌಧರಿ ಹಾಗೂ ತಂಡದ ಸಂಶೋಧನೆಗೆ 45 ಲಕ್ಷ ರೂ. ನಿಧಿಯ ನೆರವು ಒದಗಿಸಿದೆ.
ಬಂದರಿಗೆ ಸುನಾಮಿ ನಿರೋಧಕ ಬ್ರೇಕ್ ವಾಟರ್, ಕರಾವಳಿ ತೀರದ ರಕ್ಷಣೆಗೆ ಬೇಕಾದ ಉಪಕ್ರಮ ಕೈಗೊಳ್ಳುವುದು ಈ ಸಂಶೋಧನೆಯಲ್ಲಿ ಸೇರಿದೆ. ಪ್ರೊ| ಕಟ್ಟಾ ವೆಂಕಟರಮಣ, ಸಹಾಯಕ ಪ್ರೊ| ಜಿ. ಶ್ರೀಧರ್ ಸಂಶೋಧನ ತಂಡದಲ್ಲಿದ್ದಾರೆ.
ನವಮಂಗಳೂರು ಬಂದರಿನ ಬ್ರೇಕ್‌ವಾಟರ್ ಸೌಲಭ್ಯವನ್ನು ಸುನಾಮಿಗೂ ಜಗ್ಗದಂತೆ ನಿರ್ಮಿಸಲು ಹಾಗೂ ಸಮುದ್ರ ತೀರದಲ್ಲಿ ಆಸ್ತಿಪಾಸ್ತಿಗಳ ರಕ್ಷಣೆಗೆ ತಂತ್ರಜ್ಞಾನ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ.
1945ರಲ್ಲಿ 40 ಅಡಿಗಳಿಗಿಂತಲೂ ಎತ್ತರದ ಸುನಾಮಿ ಅಲೆಗಳು ಅಪ್ಪಳಿಸಿದ್ದವು. ಪಶ್ಚಿಮ ಕರಾವಳಿಯು ಪೂರ್ವ ಕರಾವಳಿಗಿಂತ ಹೆಚ್ಚಿನ ಸುನಾಮಿ ಭೀತಿ ಹೊಂದಿದೆ. ಇದಕ್ಕಾಗಿ ಎನ್‌ಐಟಿಕೆ ತಂಡವು ಈಗ ಬಂದರುಗಳಲ್ಲಿ ಬಳಸಲಾಗುವ ಬೃಹತ್ ಕಲ್ಲುಗಳ ಸಾಲುಗಳ ಬ್ರೇಕ್ ವಾಟರ್ ಬದಲು ಸುನಾಮಿಯನ್ನು ತಡೆದುಕೊಳ್ಳಬಲ್ಲ ಹೊಸ ಮಾದರಿಯ ಬ್ರೇಕ್ ವಾಟರ್ ಮಾದರಿ (ಸಂಯೋಜಿತ ಬ್ರೇಕ್‌ವಾಟರ್‌ಗಳು)ಯನ್ನು ಎನ್‌ಐಟಿಕೆಯಲ್ಲಿ ಅಭಿವೃದ್ಧಿ ಪಡಿಸಿ ಪರೀಕ್ಷಿಸಲು ಮುಂದಾಗಿದೆ.
2004ರ ಹಿಂದೂ ಮಹಾಸಾಗರದ ಸುನಾಮಿ, 2011ರ ಗ್ರೇಟ್ ಈಸ್ಟ್ ಜಪಾನ್ ಭೂಕಂಪ ಮತ್ತು ಹಿಂದಿನ ಸುನಾಮಿಗಳ ಸಂದರ್ಭ ಅನೇಕ ಬ್ರೇಕ್‌ವಾಟರ್‌ಗಳು ಹಾನಿಗೊಳಪಟ್ಟಿದ್ದವು. ಪಿಎಚ್‌ಡಿ ಸಂಶೋಧನೆ ಮತ್ತು ಪೋಸ್ಟ್‌ಡಾಕ್ಟರಲ್ ಸಂಶೋಧನೆಯ ಸಮಯದಲ್ಲಿ ಡಾ| ಬಬ್ಲೂ ಚೌಧರಿ ಜಪಾನಿನ ಬ್ರೇಕ್‌ವಾಟರ್‌ಗಳಿಗಾಗಿ ಹಲವಾರು ಪ್ರತಿಕ್ರಮಗಳನ್ನು ಅಭಿವೃದ್ಧಿಪಡಿಸಿದ್ದರು.