Advertisement

ಇಂಡೋನೇಷ್ಯಾಕ್ಕೆ ಅಪ್ಪಳಿಸಿದ ಸುನಾಮಿ: ಬದುಕು ಹಳಿ ಏರಲಿ

06:00 AM Dec 26, 2018 | |

ಸಾವಿರಾರು ಜ್ವಾಲಾಮುಖೀಗಳನ್ನು ಒಡಲಲ್ಲಿ ಹೊತ್ತಿರುವ ಆಗ್ನೇಯ ಏಷ್ಯನ್‌ ರಾಷ್ಟ್ರ ಇಂಡೋನೇಷ್ಯಾ ಕಳೆದೊಂದು ವರ್ಷದಿಂದ ತೀವ್ರ ಪ್ರಾಕೃತಿಕ ಸಂಕಷ್ಟ ಎದುರಿಸುತ್ತಿದೆ. ಈ ವರ್ಷದಲ್ಲಿ ಎರಡನೇ ಬಾರಿ ಬಂದಪ್ಪಳಿಸಿರುವ ಸುನಾಮಿಯು 400 ಹೆಚ್ಚು ಜನರ ಪ್ರಾಣ ತೆಗೆದಿದೆ. ಇನ್ನೂ ಎಷ್ಟು ಜನ ಗಾಯಗೊಂಡಿದ್ದಾರೆ, ಎಷ್ಟು ಜನ ಅಲೆಗಳಲ್ಲಿ ಕೊಚ್ಚಿಹೋಗಿದ್ದಾರೆ ಎನ್ನುವುದು ಕೆಲವು ದಿನಗಳಾದ ನಂತರವೇ ತಿಳಿಯಲಿದೆ. ಜ್ವಾಲಾಮುಖೀಯೊಂದರ ಸ್ಫೋಟದಿಂದಾಗಿ ಭೂಕಂಪಿಸಿ ಈ ಸುನಾಮಿ ಸೃಷ್ಟಿಯಾಗಿದೆ. 

Advertisement

ಇದೊಂದೇ ವರ್ಷದಲ್ಲಿ ಇಂಡೋನೇಷ್ಯಾ ಐದು ಬಾರಿ ಭೂಕಂಪಕ್ಕೆ ತುತ್ತಾಗಿದೆ. ಸಾಗರದಿಂದ ಆವೃತ್ತವಾದ ದೇಶಗಳ ದುಸ್ಥಿತಿ ಇದು. ಸಾವು ನೋವುಗಳನ್ನು ತಪ್ಪಿಸಲು ಏಕೆ ಸಾಧ್ಯವಾಗುತ್ತಿಲ್ಲವೆಂದರೆ, ಭೂಕಂಪ ಮತ್ತು ಜ್ಲಾಲಾಮುಖೀ ಸ್ಫೋಟದ ಸಂಭಾವ್ಯತೆಯನ್ನು ಇಂದಿಗೂ ಸ್ಪಷ್ಟವಾಗಿ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.  ಆದಾಗ್ಯೂ, 2004ರ ನಂತರ ಸುನಾಮಿ ಮುನ್ನೆಚ್ಚರಿಕೆ ತಂತ್ರಜ್ಞಾನಗಳಲ್ಲಿ ಬಹಳ ಸುಧಾರಣೆಯಾಗಿದೆಯಾದರೂ, ಅಪಾಯ ಪತ್ತೆಯಲ್ಲಿ ನಿಖರತೆ ಸಾಧಿಸಲು ಇನ್ನೂ ಸಾಧ್ಯವಾಗಿಲ್ಲ. 

ಇಂಡೋನೇಷ್ಯಾ ಪಾಲಿಗೆ ಇದೊಂದು ದೊಡ್ಡ ಸಂಕಟ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಗಮನಿಸಬೇಕಾದ ಸಂಗತಿಯೆಂದರೆ, ಈ ಪುಟ್ಟ ದೇಶದ ಆತ್ಮಬಲ ಹೇಗಿದೆಯೆಂದರೆ ಕಳೆದ ಹದಿನಾಲ್ಕು ವರ್ಷಗಳಲ್ಲಿ ಆರಕ್ಕಿಂತಲೂ ಹೆಚ್ಚು ಬಾರಿ ಸುನಾಮಿಯನ್ನು ಎದುರಿಸಿ ಕುಸಿದುಬಿದ್ದರೂ, ಮತ್ತೆ ಎದ್ದು ನಿಲ್ಲಲು ಅದು ಕಲಿತಿದೆ ಎನ್ನುವುದು. ಇದಕ್ಕೆ ಮುಖ್ಯ ಕಾರಣ, ವಿಪತ್ತು ನಿರ್ವಹಣೆಯಲ್ಲಿ ಅದು ಸಾಧಿಸಿರುವ ಪ್ರಗತಿ.  

2004ರಲ್ಲಿ ಬಂದಪ್ಪಳಿಸಿದ ಸುನಾಮಿಯನ್ನು ಅತಿದೊಡ್ಡ ಪ್ರಾಕೃತಿಕ ಆಪತ್ತು ಎಂದೇ ಪರಿಗಣಿಸಲಾಗುತ್ತದೆ. ಅಂದು ಸುಮಾತ್ರಾದ ಸಾಗರದ ತಳಭಾಗವನ್ನು 9.1 ರಿಕ್ಟರ್‌ ತೀವ್ರತೆಯ ಭೂಕಂಪ ಅಲುಗಿಸಿಬಿಟ್ಟಿತ್ತು. ಇದರ ದುಷ್ಪರಿಣಾಮವನ್ನು ಕೇವಲ ಭಾರತವಷ್ಟೇ ಅಲ್ಲ, ಪೂರ್ವ ಆಫ್ರಿಕಾದ ಸಮುದ್ರ ಪ್ರಾಂತಗಳೂ ಎದುರಿಸಿದವು. ಒಟ್ಟು  14 ರಾಷ್ಟ್ರಗಳ 2 ಲಕ್ಷ 30 ಸಾವಿರ ಜನ ಪ್ರಾಣ ಕಳೆದುಕೊಂಡರು. ಈ ಸುನಾಮಿಯಿಂದಾಗಿ ತಮಿಳುನಾಡು ಬಹಳ ನಷ್ಟ ಅನುಭವಿಸಿತು. 10 ಸಾವಿರ ಭಾರತೀಯರು ಸಾವನ್ನಪ್ಪಿದರು. ಗಮನಿಸಬೇಕಾದ ಸಂಗತಿಯೆಂದರೆ, ಅಂದು ಇಂಡೋನೇಷ್ಯಾವೊಂದರಲ್ಲೇ 1 ಲಕ್ಷಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದರು. ಈ ಘಟನೆ ಜಗತ್ತಿಗೆ ಸುನಾಮಿಯ ಬಗ್ಗೆ ಎಚ್ಚರಿಕೆ ನೀಡುವ ತಂತ್ರಜ್ಞಾನದ ಅಗತ್ಯ ಎಷ್ಟಿದೆ ಎನ್ನುವ ಸಂದೇಶವನ್ನು ಸ್ಪಷ್ಟವಾಗಿ ಸಾರಿತ್ತು. 

ಸದ್ಯಕ್ಕೆ ಅಸ್ತಿತ್ವದಲ್ಲಿರುವ ಸುನಾಮಿ ಮುನ್ಸೂಚನೆ ತಂತ್ರಜ್ಞಾನವು ಸಮುದ್ರದ ತಳದಲ್ಲಿನ ಭೂಕಂಪದ ಎಚ್ಚರಿಕೆಯನ್ನೇನೋ ಕೊಟ್ಟುಬಿಡುತದೆ, ಆದರೆ ಜ್ವಾಲಾಮುಖೀ ಸ್ಫೋಟದ ಮುನ್ನೆಚ್ಚರಿಕೆಯನ್ನು ನಿಖರವಾಗಿ ಕೊಡಲು ಅದಕ್ಕೆ ಸಾಧ್ಯನವಾಗಿಲ್ಲ. ಹೀಗಾಗಿ ಸದ್ಯಕ್ಕಂತೂ ಇಂಡೋನೇಷ್ಯಾದ ಪಾಲಿಗೆ ಇರುವ ಮಾರ್ಗವೆಂದರೆ ಆಪತ್ಕಾಲೀನ ರಕ್ಷಣೆಯೇ ಆಗಿದೆ. ಈ ರೀತಿಯ ಘಟನೆಗಳ ನಂತರ ಸಾಂಕ್ರಾಮಿಕ ರೋಗಗಳ ಹಾವಳಿ ವಿಪರೀತವಾಗಿಬಿಡುತ್ತದೆ. ಜನರನ್ನು ಸುರಕ್ಷಿತ ಸ್ಥಾನಗಳಿಗೆ ಕಳುಹಿಸುವುದು, ಅವರಿಗೆ ಅಗತ್ಯ ಔಷಧಗಳು, ಆಹಾರದ ವ್ಯವಸ್ಥೆ ಮಾಡುವುದು, ಪರಿಹಾರ ಶಿಬಿರಗಳನ್ನು ಕಟ್ಟಿ ನಿಲ್ಲಿಸುವುದು..ಈ ರೀತಿಯ ಸವಾಲುಗಳೂ ಕಡಿಮೆಯೇನೂ ಇರುವುದಿಲ್ಲ. ಆದರೆ, ಭಾರತ ಸೇರಿದಂತೆ ಜಗತ್ತಿನ ಅನೇಕ ರಾಷ್ಟ್ರಗಳು ಮೊದಲಿನಿಂದಲೂ ಇಂಡೋನೇಷ್ಯಾಕ್ಕೆ ನೆರವಿನ ಮಹಾಪೂರ ಹರಿಸುತ್ತಿರುವುದು ನಿಜಕ್ಕೂ ಮೆಚ್ಚಲೇಬೇಕಾದ ಸಂಗತಿ. 

Advertisement

ಕೆಲ ವರ್ಷಗಳ ಹಿಂದೆ ಜಪಾನ್‌ ಕೂಡ ದೊಡ್ಡ ಸುನಾಮಿಯನ್ನು ಎದುರಿಸಿತ್ತು. ಆದರೆ ಜಪಾನ್‌ನ ವಿಪತ್ತು ನಿರ್ವಹಣೆ ಸಾಮರ್ಥ್ಯ ಎಷ್ಟು ಬಲಿಷ್ಠವಾಗಿದೆಯೆಂದರೆ, ಬಹಳಷ್ಟು ಜನರನ್ನು ತ್ವರಿತವಾಗಿ ರಕ್ಷಿಸಿ, ಸುರಕ್ಷಿತ ಸ್ಥಾನಗಳಿಗೆ ಸ್ಥಳಾಂತರಿಸಲು ಅದು ಯಶಸ್ವಿಯಾಗಿತ್ತು. ಕೆಲವೇ ತಿಂಗಳಲ್ಲೇ ಹಾನಿಗೊಳಗಾದ ನಗರಗಳನ್ನದು ಕಟ್ಟಿನಿಲ್ಲಿಸಿಬಿಟ್ಟಿತು. ಇದೇನೇ ಇದ್ದರೂ, ಪ್ರಾಕೃತಿಕ ಅವಗಢಗಳ ಮುನ್ಸೂಚನೆಯನ್ನು ನಿಖರವಾಗಿ ಅರಿಯುವಲ್ಲಿ ಒಂದು ದೇಶ ಎಷ್ಟೇ ಹಿಂದಿದ್ದರೂ, ಅವಗಢದ ನಂತರ ವಿಪತ್ತಿನ ನಿರ್ವಹಣೆಯ ವಿಷಯದಲ್ಲಾದರೂ ಅದು ಬಲಿಷ್ಠವಾಗಬೇಕು. 

ಇಂಡೋನೇಷ್ಯನ್ನರ ಬದುಕು ಮತ್ತೆ ಹಳಿ ಏರಲಿ, ಪ್ರೀತಿಪಾತ್ರರನ್ನು ಕಳೆದುಕೊಂಡವರ ಕುಟುಂಬಗಳಿಗೆ ಸಾಂತ್ವನ ಸಿಗುವಂತಾಗಲಿ ಎಂಬುದೇ ಎಲ್ಲರ ಆಶಯ. 

Advertisement

Udayavani is now on Telegram. Click here to join our channel and stay updated with the latest news.

Next