Advertisement

ಸಹಕಾರಿ ಬ್ಯಾಂಕಿನಿಂದ ಚಿನ್ನಾಭರಣ ದರೋಡೆಗೆ ಯತ್ನ: ಇಬ್ಬರ ಬಂಧನ

03:45 AM Jul 05, 2017 | Harsha Rao |

ಉಳ್ಳಾಲ: ಕೋಟೆಕಾರು ಸಹಕಾರಿ ಬ್ಯಾಂಕ್‌ನ ತಲಪಾಡಿ ಕೆ.ಸಿರೋಡ್‌ ಶಾಖೆಯಿಂದ ಹಾಡಹಗಲೇ ಸಿಬಂದಿಗೆ ಚೂರಿ ತೋರಿಸಿ ಚಿನ್ನಾಭರಣ ದರೋಡೆಗೆ ಯತ್ನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ನ ನಿರ್ದೇಶಕಿಯ ಪತಿ ಸಹಿತ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Advertisement

ಪಿಲಾರು ನಿವಾಸಿಗಳಾದ ರಾಮಚಂದ್ರ ಯಾನೆ ಬೋಟ್‌ ರಾಮ (55) ಮತ್ತು ನೆರೆಮನೆಯ ನಿವಾಸಿ ಮೋಹನ್‌ ಚೆಟ್ಟಿಯಾರ್‌(35) ಆರೋಪಿಗಳು. 

ರಾಮಚಂದ್ರ ಬ್ಯಾಂಕ್‌ನ ನಿರ್ದೇಶಕಿಯೊಬ್ಬರ ಪತಿಯಾಗಿದ್ದು ಜೂ. 23ರಂದು ಕೆ.ಸಿ.ರೋಡ್‌ ಶಾಖೆಯಿಂದ ದರೋಡೆಗೆ ಯತ್ನ ನಡೆಸಿದ್ದರು.

ಕೆ.ಸಿ.ರೋಡ್‌ನ‌ಲ್ಲಿರುವ ಕೊಟೆಕಾರು ವ್ಯವಸಾಯ ಸಹಕಾರಿ ಬ್ಯಾಂಕ್‌ನ ಶಾಖೆಗೆ ಕಪ್ಪು ಪಲ್ಸರ್‌ ಬೈಕ್‌ನಲ್ಲಿ ಬಂದಿದ್ದ ಇಬ್ಬರು ಚೂರಿ ತೋರಿಸಿ ಸಿಬಂದಿ  ಯನ್ನು  ಶೌಚಾಲಯದಲ್ಲಿ ಕೂಡಿ ಹಾಕಿ ಸುಮಾರು ಐದು ಕೋಟಿ ಮೌಲ್ಯದ 20 ಕೆ.ಜಿ. ಚಿನ್ನಾಭರಣವನ್ನು ಗೋಣಿ ಚೀಲದಲ್ಲಿ ಹಾಕಿ ಬೈಕ್‌ನಲ್ಲಿ ಪರಾರಿಯಾಗಲು ಯತ್ನಿಸಿದ್ದರು. ಈ ಸಂದರ್ಭದಲ್ಲಿ ಬ್ಯಾಂಕ್‌ನ ಚಿನ್ನಾಭರಣದ ಅಪ್ರೈಸರ್‌ ರಾಮಚಂದ್ರ ದೇರಳಕಟ್ಟೆ ಅವರು ಜಲ್ಲಿ ಕಲ್ಲಿನಲ್ಲಿ ಬೈಕ್‌ ಸವಾರನ ಎದೆಗೆ ಕಲ್ಲು ಬಿಸಾಡಿದಾಗ ಸವಾರರು ಬ್ಯಾಲೆನ್ಸ್‌ ತಪ್ಪಿದ್ದಂರಿಂದ ಚಿನ್ನಾಭರಣ ಗೋಣಿ ಬಿಟ್ಟು ಪರಾರಿಯಾಗಿದ್ದರು.

ಪತ್ತೆಗೆ ನೆರವಾದ ಮೊಬೈಲ್‌ ನೆಟ್‌ವರ್ಕ್‌
ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಸಿಸಿಬಿ ಪೊಲೀಸರು ಪಕ್ಕದ ಅಂಗಡಿಯ ಸಿಸಿಟಿವಿಯಲ್ಲಿ ದರೋಡೆಕೋರರ ಅಸ್ಪಸ್ಟ ಚಿತ್ರಣ ಮತ್ತು ರಾಮಚಂದ್ರ ದೇರಳಕಟ್ಟೆ ಅವರ ಮಾಹಿತಿಯಂತೆ ತನಿಖೆ ಪ್ರಾರಂಬಿಸಿದ್ದು, ಘಟನಾ ಸಂದರ್ಭದಲ್ಲಿ ಇರುವ ಮೊಬೈಲ್‌ ನೆಟ್‌ವರ್ಕ್‌ ಆಧಾರದಲ್ಲಿ ತನಿಖೆ ಕೈಗೊಂಡ ಪೊಲೀಸರು ಈ ನೆಟ್‌ವರ್ಕ್‌ ಆಧಾರದಲ್ಲಿ ತನಿಖೆ ನಡೆಸುತ್ತಿದ್ದಾಗ ರಾಮಚಂದ್ರ ಯಾನೆ ಬೋಟ್‌ ರಾಮ ಮತ್ತು ಮೋಹನ್‌ ಚೆಟ್ಟಿಯಾರ್‌ ಅವರ ಮೊಬೈಲ್‌ ನಂಬರ್‌ ಸಿಕ್ಕಿದ್ದು ತನಿಖೆ ನಡೆಸಿದಾಗ ಪಲ್ಸರ್‌ ಬೈಕ್‌ ಇರುವುದು ಖಾತರಿಯಾಗುತ್ತಿದ್ದಂತೆ ರಾಮಚಂದ್ರ ದೇರಳಕಟ್ಟೆ ಹೇಳಿದ ದಪ್ಪ ಶರೀರ ಎತ್ತರದ ವ್ಯಕ್ತಿ ರಾಮಚಂದ್ರ ಅವರೇ ಹೋಲುತ್ತಿದ್ದರಿಂದ ಅವರ ಹಿನ್ನಲೆಯ ಮಾಹಿತಿ ಪಡೆದು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದಾಗ ದರೋಡೆ ನಡೆಸಿರುವ ವಿಚಾರವನ್ನು ಒಪ್ಪಿಕೊಂಡಿದ್ದಾರೆ.

Advertisement

ದರೋಡೆ ಆರೋಪಿಗಳ ಪತ್ತೆ ಕಾರ್ಯದಲ್ಲಿ ಪೊಲೀಸ್‌ ಕಮಿಷನರ್‌ ಟಿ.ಆರ್‌. ಸುರೇಶ್‌ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಕೆ.ಎಂ. ಶಾಂತಾರಾಜು, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಹನುಮಂತರಾಯ, ಸಿಸಿಆರ್‌ಬಿ ಎಸಿಪಿ ವೆಲೆಂಟೈನ್‌ ಡಿ.ಸೋಜಾ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಇನ್ಸ್‌ಪೆಕ್ಟರ್‌ ಸುನಿಲ್‌ ವೈ ನಾಯಕ್‌, ಪಿಎಸ್‌ಐ ಶ್ಯಾಮ ಸುಂದರ್‌ ಹಾಗೂ ಸಿಬಂದಿ ಭಾಗವಹಿಸಿದ್ದರು.

ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಬೈಕ್‌ ವಶಕ್ಕೆ ತೆಗೆದುಕೊಂಡಿದ್ದಾರೆ.

ಚೀಟಿ ವ್ಯವಹಾರದಲ್ಲಿ ನಷ್ಟ ಕಾರಣ  
ಬೋಟ್‌ ರಾಮ ಯಾನೆ ರಾಮಚಂದ್ರ ಸ್ಥಳೀಯವಾಗಿ ಗಣ್ಯ ವ್ಯಕ್ತಿಯಾಗಿದ್ದು, ಸೋಮೇಶ್ವರ ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯ ಆಗಿದ್ದ. ಬಡ್ಡಿ ಸೇರಿದಂತೆ ಚೀಟಿ ವ್ಯವಹಾರ ನಡೆಸುತ್ತಿದ್ದ ರಾಮಚಂದ್ರ ಸ್ಥಳೀಯರಿಗೆ ಬಡ್ಡಿಗೆ ಹಣ ನೀಡಿ ಕೈಸುಟ್ಟುಕೊಂಡಿದ್ದ. ಈ ವಿಚಾರದಲ್ಲಿ ಗ್ರಾಮ ಪಂಚಾಯತ್‌ ಸದಸ್ಯೆಯೊಬ್ಬರು ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಬೋಟ್‌ ರಾಮ ಯಾನೆ ರಾಮಚಂದ್ರ ಸೇರಿದಂತೆ ಹಲವರ ಹೆಸರು ಬರೆದು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆದಿತ್ತು. ಈ ವಿಚಾರದಲ್ಲಿ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಡ್ಡಿ ಮತ್ತು ಚಿಇಟಿ ವ್ಯವಹಾರದಲ್ಲಿ ಸಾಲ ಮಾಡಿದ್ದರಿಂದ ಅದನ್ನು ಸರಿದೂಗಿಸಲು ಬೋಟ್‌ ರಾಮ ತನ್ನ ನೆರೆ ಮನೆಯವ ಮೋಹನ್‌ನನ್ನು ಕರೆದುಕೊಂಡು ಹೋಗಿ ದರೋಡೆಗೆ ಯತ್ನಿಸಿ ವಿಫಲನಾಗಿ ಪೊಲೀಸರ ಅತಿಥಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next