ಹುಮನಾಬಾದ: ಜನರು ನೀಡಿದ ಅಧಿಕಾರ ಸದ್ಬಳಕೆ ಮಾಡಿಕೊಂಡು ಘಾಟಬೋರಾಳ್ ಮುಖಂಡರ ಬಹುತೇಕ ಬೇಡಿಕೆಗಳನ್ನು ಈಡೇರಿಸಲು ಶಕ್ತಿಮೀರಿ ಪ್ರಯತ್ನಿಸುವುದಾಗಿ ಗಣಿ, ಭೂವಿಜ್ಞಾನ ಮತ್ತು ಮುಜರಾಯಿ ಸಚಿವ ರಾಜಶೇಖರ ಪಾಟೀಲ ಹೇಳಿದರು.
ಘಾಟಬೋರಾಳ್ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ, ಪ್ರಕಾಶ ವಿದ್ಯಾಲಯ, ಪಿಕೆಪಿಎಸ್, ಹಾಲು ಉತ್ಪಾದಕರ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ ರವಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪ್ರಕಾಶ ವಿದ್ಯಾಲಯ ಅಭಿವೃದ್ಧಿಗೆ 20ಲಕ್ಷ ರೂ. ಅನುದಾನ ನೀಡುವುದಾಗಿ ಹೇಳಿದರು.
ಜೀವನದಲ್ಲಿ ಅ ಧಿಕಾರ, ಹಣ ಸೇರಿದಂತೆ ಯಾವುದೂ ಶಾಶ್ವತವಲ್ಲ. ಸಾರ್ವಜನಿಕ ಜೀವನದಲ್ಲಿ ಎಷ್ಟು ವರ್ಷ ಬದುಕಿದ್ದೇವೆ ಎಂಬುದಕ್ಕಿಂತ ಹೇಗೆ ಬದುಕಿದ್ದೇವೆ ಎನ್ನುವುದು ಮುಖ್ಯ. ಬಿಜೆಪಿ ಮುಖಂಡರ ಮಾತಿಗೆ ಮರುಳಾಗದೇ ಸದಾ ಅಭಿವೃದ್ಧಿಗೆ ಆದ್ಯತೆ ನೀಡುವ ಹುಮನಾಬಾದ ಪಾಟೀಲ ಪರಿವಾರಕ್ಕೆ ಬೆಂಬಲ ನೀಡುತ್ತ ಬಂದಿದ್ದೀರಿ. ನಾನು ಎಷ್ಟೇ ಎತ್ತರಕ್ಕೆ ಹೋಗಲಿ, ಆ ಮಟ್ಟಕ್ಕೇರಿಸಲು ಘಾಟಬೋರಾಳ್ ಜಿಪಂ ಕ್ಷೇತ್ರ ಸೇರಿದಂತೆ ವಿಧಾನಸಭಾ ಕ್ಷೇತ್ರದ ಮತದಾರ ಪ್ರಭುಗಳೇ ಕಾರಣರು.
ಪ್ರಕಾಶ ವಿದ್ಯಾಲಯದ ಅಧ್ಯಕ್ಷ ಮಾರುತಿರಾವ್ ಮುಳೆ ಮಾತನಾಡಿ, ಡಾ| ಪ್ರಕಾಶ ಪಾಟೀಲ ಒಳಗೊಂಡಂತೆ ಸದಾ ನಿಮ್ಮ ಜೊತೆಗಿರುವ ಇತರೆ ಮುಖಂಡರಿಗೆ ಈಗಿನ ಸ್ಥಾನಕಿಂತ ರಾಜ್ಯ ಮಟ್ಟದಲ್ಲಿ ಉನ್ನತ ಸ್ಥಾನಮಾನ ಕೊಡಿಸಬೇಕು ಎಂದು ಸಚಿವ ಪಾಟೀಲ ಅವರಿಗೆ ಮುಳೆ ತಿಳಿಸಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಡಾ| ಪ್ರಕಾಶ ಪಾಟೀಲ ಪ್ರಾಸ್ತಾವಿಕ ಮಾತನಾಡಿ, ಕ್ಷೇತ್ರದಲ್ಲಿ ಆಗದೇ ಬಾಕಿ ಉಳಿದ ಕಾರ್ಯಗಳನ್ನು ಶೀಘ್ರ ಕೈಗೆತ್ತಿಕೊಂಡು ಪೂರ್ಣಗೊಳಿಸಬೇಕು ಎಂದರು. ಕಾಂಗ್ರೆಸ್ ಮುಖಂಡ ಜ್ಞಾನೇಶ್ವರ ಭೋಸ್ಲೆ ಮಾತನಾಡಿ, ಪಂಚಾಯಿತಿ ವ್ಯಾತಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯ ಗಮನಿಸಿ ಘಾಟಬೋರಾಳ ಗ್ರಾಮ ಪಂಚಾಯಿತಿಗೆ
ರಾಜ್ಯ ಮಟ್ಟದ ಪುರಸ್ಕಾರ ಕೊಡಿಸುವಲ್ಲಿ ಸಚಿವ ಪಾಟೀಲ ಪ್ರಯತ್ನ ಅಧಿತ್ಯ ಕ ಇದೆ ಎಂದರು.
ವಿಧಾನ ಪರಿಷತ್ ಸದಸ್ಯ ಡಾ| ಚಂದ್ರಶೇಖರ ಪಾಟೀಲ, ವಿಯಸಿಂಗ್, ಜಿಪಂ ಅಧ್ಯಕ್ಷೆ ಭಾರತೀಬಾಯಿ ಶೇರಿಕಾರ, ಸದಸ್ಯ ಲಕ್ಷ್ಮಣರಾವ್ ಬುಳ್ಳಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಸರಮಿಯ್ಯ, ಗ್ರಾಮೀಣ ಘಟಕ ಅಧ್ಯಕ್ಷ ರಾಜಪ್ಪ ಇಟಗಿ, ಎಸ್‌ಟಿ ಮೋರ್ಚಾ ಅಧ್ಯಕ್ಷ ಪ್ರಕಾಶ ಕಾಡಗೊಂಡ, ಘಾಟಬೋರಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನುಸುಯಾಬಾಯಿ ಭೋಸ್ಲೆ ಇನ್ನಿತರರು ಇದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಗಾಂಧಿ ವೃತ್ತದಿಂದ ಪ್ರಕಾಶ ವಿದ್ಯಾಲಯವರೆಗೆ ಸಚಿವ ಪಾಟೀಲರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.
ಪಿಕೆಪಿಎಸ್ ಅಧ್ಯಕ್ಷ ಶಿವರಾಜಿ ರಘು ಸ್ವಾಗತಿಸಿದರು. ಪ್ರಕಾಶ ವಿದ್ಯಾಲಯ ಕಾರ್ಯದರ್ಶಿ ಡಾ| ಪ್ರಕಾಶ ಪಾಟೀಲ ಪ್ರಾಸ್ತಾವಿಕ
ಮಾತನಾಡಿದರು. ಪಂಡತ್ ಕೆ.ಬಾಳೂರೆ ನಿರೂಪಿಸಿದರು. ಚಂದ್ರಕಾಂತ ಜೋಕಾರೆ ವಂದಿಸಿದರು.
ಸಹಕಾರ ಸಕ್ಕರೆ ಕಾರ್ಖಾನೆ ಆರಂಭಿಸಿ
ಇಡೀ ಜಿಲ್ಲೆಯಲ್ಲಿ ಘಾಟಬೋರಾಳ್ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮ ಸೇರಿ ಪ್ರತೀ ವರ್ಷ 3 ಲಕ್ಷ ಟನ್ ಕಬ್ಬು ಬೆಳೆಯುತ್ತೇವೆ. ಜಿಲ್ಲೆಯ ಬಹುತೇಕ ಸಹಕಾರ ಸಕ್ಕರೆ ಕಾರ್ಖಾನೆಗಳ ಸ್ಥಿತಿ ಚಿಂತಾಜನಕವಿದೆ. ಪೂರೈಸಲಾದ ಕಬ್ಬಿಗೆ ಸಕಾಲಕ್ಕೆ ಹಣ ಪಾವತಿಸದೇ ರೈತರನ್ನು ತೀವ್ರ ಸಂಕಷ್ಟಕ್ಕೀಡು ಮಾಡಲಾಗುತ್ತದೆ. ಪರಿಸ್ಥಿತಿ ಗಂಭೀರತೆ ಅರಿತು ಪಾಟೀಲ ಪರಿವಾರ ಘಾಟಬೋರಾಳ್ ವ್ಯಾಪ್ತಿಯಲ್ಲಿ ಸಹಕಾರ ಸಕ್ಕರೆ ಕಾರ್ಖಾನೆ ಆರಂಭಿಸಬೇಕು. ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.
ಪರಮೇಶ್ವರ ಪಾಟೀಲ, ರೈತ ಮುಖಂಡ