Advertisement

ಜನರಲ್ಲಿ ಪುಸ್ತಕ ಜಾಗೃತಿ ಮೂಡಿಸಲು ಪ್ರಯತ್ನ

02:11 PM Oct 18, 2018 | Team Udayavani |

ಚಿತ್ರದುರ್ಗ: ಕನ್ನಡ ಪುಸ್ತಕ ಪ್ರಾಧಿಕಾರದ ಬೆಳ್ಳಿಹಬ್ಬದ ಅಂಗವಾಗಿ ಸಾರ್ವಜನಿಕರಿಗೆ ಉಚಿತವಾಗಿ ಪುಸ್ತಕ ವಿತರಣೆ ಮಾಡಲು “ಮನೆ ಮನೆಗೆ ಪುಸ್ತಕ’ ಎಂಬ ನೂತನ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿ ಕಾರದ ಅಧ್ಯಕ್ಷೆ ಡಾ| ವಸುಂಧರಾ ಭೂಪತಿ ತಿಳಿಸಿದರು.

Advertisement

ನಗರದ ಜೆಸಿಆರ್‌ ಬಡಾವಣೆಯಲ್ಲಿರುವ ಸಂಶೋಧಕ ಡಾ| ರಾಜಶೇಖರಪ್ಪ ಮನೆಯಲ್ಲಿ ಪ್ರಾಧಿಕಾರದ ಬೆಳ್ಳಿಹಬ್ಬದ ಅಂಗವಾಗಿ ಬುಧವಾರ ಆಯೋಜಿಸಿದ್ದ “ನಿಮ್ಮ ಮನೆಗೆ ನಮ್ಮ ಪುಸ್ತಕ’ ಎಂಬ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಪುಸ್ತಕ ವಿತರಿಸಿ ಅವರು
ಮಾತನಾಡಿದರು.

ಈಗಾಗಲೇ ಬೆಂಗಳೂರಿನಲ್ಲಿ ಬಿ.ಟಿ. ಲಲಿತಾ ನಾಯಕ್‌ ಹಾಗೂ ಪ್ರೊ| ಚಿದಾನಂದ ಮೂರ್ತಿ, ಹುಬ್ಬಳ್ಳಿಯಲ್ಲಿ ಸುನಂದಾ ಪ್ರಕಾಶ್‌ ಕಡಮೆ, ಮೈಸೂರಿನಲ್ಲಿ ಪ್ರಧಾನ ಗುರುದತ್‌, ಸಂಡೂರಿನಲ್ಲಿ ಬಸವರಾಜ್‌ ಅವರ ಮನೆಯಲ್ಲಿ ಕಾರ್ಯಕ್ರಮ ಆಯೋಜಿಸಿ ಪುಸ್ತಕ ವಿತರಿಸಲಾಗಿದೆ. ಮುಂದೆ
ರಾಜ್ಯದ 25 ಕಡೆಗಳಲ್ಲಿ ಇಂತಹ ಕಾರ್ಯಕ್ರಮವನ್ನು ಅಭಿಯಾನದ ರೀತಿಯಲ್ಲಿ ಆಯೋಜಿಸಲಾಗುತ್ತದೆ ಎಂದರು.

ಮನೆ ಮನೆಗೆ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡ ಮೇಲೆ ಮತ್ತು ಶೇ. 50ರ ರಿಯಾಯತಿ ದರದಲ್ಲಿ ಆನ್‌ಲೈನ್‌ ಪುಸ್ತಕ ಖರೀದಿಗೆ ಅವಕಾಶ ಕಲ್ಪಿಸಿದ ಮೇಲೆ ಓದುಗರು ಸಾಕಷ್ಟು ಪುಸ್ತಕಗಳನ್ನು ಖರೀದಿಸಿದ್ದಾರೆ. ಆನ್‌ಲೈನ್‌ ಖರೀದಿಯಲ್ಲಿ 89 ಸಾವಿರ ಪುಸ್ತಕಗಳು ಖರೀದಿಯಾಗಿದೆ.

ಪ್ರಾಧಿಕಾರದ ಪುಸ್ತಕ ಮಳಿಗೆಗಳಲ್ಲಿ 6 ಲಕ್ಷ ಪುಸ್ತಕಗಳು ಮಾರಾಟವಾಗಿವೆ. ಆನ್‌ಲೈನ್‌ ಮೂಲಕ ಪುಸ್ತಕ ಖರೀದಿ ಮಾಡುವವರು www.kannadapustakapradhikara.com ನಲ್ಲಿ ಖರೀದಿ ಮಾಡಬಹುದಾಗಿದೆ ಎಂದರು. ಸಮಾಜದಲ್ಲಿ ಮೌಲ್ಯ ಹೆಚ್ಚಿಸುವಂತ ಗುಣಮಟ್ಟದ ಪುಸ್ತಕಗಳು ಎಲ್ಲ ಓದುಗರಿಗೆ ತಲುಪಬೇಕು. ಪುಸ್ತಕ ಸಂಸ್ಕೃತಿ ಬೆಳೆಸಲು ಉಚಿತ ಪುಸ್ತಕಗಳನ್ನು ವಿತರಿಸಲಾಗುತ್ತಿದೆ. ವಿದ್ಯಾರ್ಥಿಗಳು ಫೇಸ್‌ಬುಕ್‌, ವಾಟ್ಸಆ್ಯಪ್‌, ಮೊಬೈಲ್‌ಗ‌ಳಿಗೆ ಅಂಟಿಕೊಂಡಿರುವುದರಿಂದ ಓದುವ ಪ್ರವೃತ್ತಿ ಕಡಿಮೆಯಾಗಿದೆ. ಇಷ್ಟವಾದ ಪುಸ್ತಕ ಓದಿ ಆ ಕುರಿತು ಚರ್ಚೆ, ಸಂವಾದ, ನಿರೂಪಣೆ ಮಾಡುವುದು ಪ್ರಾಧಿಕಾರದ ಯೋಜನೆಯ ಉದ್ದೇಶ. ಇದರಿಂದ ಪುಸ್ತಕ ಪ್ರೀತಿ ಬೆಳೆಯುತ್ತದೆ. ಪ್ರತಿ ಕಾರ್ಯಕ್ರಮಕ್ಕೆ 5 ಸಾವಿರ ರೂ. ನೀಡುತ್ತೇವೆ. ಕಾಲೇಜು ವಿದ್ಯಾರ್ಥಿಗಳಿಗಾಗಿ “ಜಾಣ-ಜಾಣೆಯರು’ ಯೋಜನೆ ರೂಪಿಸಿದ್ದೇವೆ. ವಿದ್ಯಾರ್ಥಿಗಳು ಬಳಗ ಕಟ್ಟಿಕೊಂಡು ಪುಸ್ತಕ ಓದಿ ಸಂವಾದ ನಡೆಸಬೇಕು. ಅಲ್ಲದೆ ಪ್ರಕಾಶನ ಕಮ್ಮಟಗಳನ್ನೂ ಮಾಡುತ್ತಿದ್ದೇವೆ ಎಂದು ತಿಳಿಸಿದರು.

Advertisement

ಸಾರ್ವಜನಿಕರಲ್ಲಿ ಓದುವ ಅಭಿರುಚಿ ಹೆಚ್ಚಿಸುವ ಉದ್ದೇಶದಿಂದ ಪ್ರಾಧಿಕಾರ ಹೊಸ ಹೊಸ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದೆ. ಪುಸ್ತಕೋತ್ಸವದ ಮೂಲಕ ದಸರಾ ಆಚರಿಸಲು ಎಲ್ಲರೂ ಮುಂದಾಗಬೇಕು. ಪ್ರತಿ ಮನೆಯಲ್ಲಿ ಗ್ರಂಥಾಲಯ ಕೊಠಡಿಗಳನ್ನು ನಿರ್ಮಿಸುವ ಮನೋಭಾವ ಬೆಳೆಯಬೇಕು ಎಂದು ಆಶಿಸಿದರು. ನಿವೃತ್ತ ಪ್ರಾಧ್ಯಾಪಕ ಜಿ. ಶರಣಪ್ಪ ಮಾತನಾಡಿ, ಬಹಳಷ್ಟು ಲೇಖಕರು ಪ್ರಾಧಿಕಾರವನ್ನು ಹುಡುಕಿಕೊಂಡು ಬರುತ್ತಿದ್ದರು. ಆದರೆ
ಈಗ ಪ್ರಾಧಿಕಾರವೇ ಮನೆಗಳಿಗೆ ಬರುತ್ತಿದೆ. ಶಾಲೆ-ಕಾಲೇಜುಗಳಿಗೆ ಹೋಗುತ್ತಿದೆ. ನೀರು, ಆಹಾರ, ಬಟ್ಟೆಯಂತೆ ಪುಸ್ತಕಗಳು ಜೀವನಾವಶ್ಯಕ ವಸ್ತುಗಳಾಗಬೇಕು ಎಂದು ಅಭಿಪ್ರಾಯಪಟ್ಟರು.

ಸಂಶೋಧಕ ಡಾ| ಬಿ. ರಾಜಶೇಖರಪ್ಪ, ನಿವೃತ್ತ ಪ್ರಾಧ್ಯಾಪಕಿ ಯಶೋದಾ ರಾಜಶೇಖರಪ್ಪ, ಸಾಹಿತಿಗಳಾದ ತಾರಿಣಿ ಶುಭದಾಯಿನಿ, ಡಾ| ಗಾಯತ್ರಿ, ಜಿ.ಎಸ್‌. ಉಜ್ಜಿನಪ್ಪ ಮತ್ತಿತರರು ಇದ್ದರು. 

ಕನ್ನಡದ ಮೊಟ್ಟ ಮೊದಲ ಕಾದಂಬರಿಯನ್ನು ಇ-ಬುಕ್‌ ಗೆ ಅಳಡಿಸಲಾಗಿದೆ, ವೆಬ್‌ಸೈಟ್‌ ಉನ್ನತೀಕರಿಸಿಲಾಗಿದೆ. ಈಗ ಪ್ರಾಧಿಕಾರದ ವತಿಯಿಂದ ಶೇ. 50ರ ರಿಯಾಯತಿ ದರದಲ್ಲಿ 362 ಪುಸ್ತಕಗಳು ಮಾರಾಟಕ್ಕೆ ಲಭ್ಯ ಇವೆ. ಕನ್ನಡದ ಖ್ಯಾತ ಬರಹಗಾರರ ಸಾಹಿತ್ಯವನ್ನು ಸಮಗ್ರವಾಗಿ ಪ್ರಕಟಿಸಲಾಗುತ್ತದೆ.
 ಡಾ| ವಸುಂಧರಾ ಭೂಪತಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ.

Advertisement

Udayavani is now on Telegram. Click here to join our channel and stay updated with the latest news.

Next