ಕಲಬುರಗಿ: ರಾಷ್ಟ್ರಪಿತಾ ಮಹಾತ್ಮ ಗಾಂಧೀಜಿ ಅವರನ್ನು ಅರಿಯುವ ಪ್ರಯತ್ನವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದು ಶರಣಬಸವ ವಿಶ್ವವಿದ್ಯಾಲಯ ಕುಲಸಚಿವ ಡಾ| ಅನಿಲಕುಮಾರ ಬಿಡವೆ ತಿಳಿಸಿದರು.
ಶರಣಬಸವ ವಿಶ್ವವಿದ್ಯಾಲಯದ ಇಲೆಕ್ಟ್ರಾನಿಕ್ ವಿಭಾಗದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶ ಕಂಡ ನಾಯಕರಲ್ಲಿ ಮಹಾತ್ಮ ಗಾಂಧಿ ಸರಳಲ್ಲಿ ಸರಳರಾಗಿದ್ದರು ಎಂದರು.
ಗಾಂಧೀಜಿ ಜೀವನ ವಿಧಾನ ಅನುಕರಣೀಯ ಆಗಿದೆ. ಅವರು ಅಳವಡಿಸಿಕೊಂಡಿದ್ದ ತತ್ವ, ಜೀವನ ಮೌಲ್ಯ ನಮಗೆ ಆದರ್ಶವಾಗಿವೆ. ಸತ್ಯ ಮತ್ತು ಅಹಿಂಸೆ ಗಾಂಧೀಜಿ ಪ್ರತಿಪಾದಿಸಿದ ಎರಡು ಪ್ರಬಲ ಅಸ್ತ್ರಗಳು. ಆ ಅಸ್ತ್ರಗಳೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವು ಎಂದರು.
ಕಲಬುರಗಿ ಶರಣಬಸವೇಶ್ವರ ಸಂಸ್ಥಾನಕ್ಕೆ ಭೇಟಿ ನೀಡಿದ್ದ ಮಹಾತ್ಮ ಗಾಂಧೀಜಿ ಸಂಸ್ಥಾನದ ಲಿಂ. ದೊಡ್ಡಪ್ಪ ಅಪ್ಪ ಅವರೊಂದಿಗೆ ಹೈಕ ಭಾಗದ ಶಾಂತಿ, ಕೋಮು ಸೌಹಾರ್ದತೆ ಕುರಿತು ಸುದೀರ್ಘ ಚರ್ಚೆ ನಡೆಸಿದ್ದರು ಎಂದು ಸ್ಮರಿಸಿಕೊಂಡರು.
ನಂತರ ಮೌನ ಆಚರಿಸಲಾಯಿತು. ಸಮ ಕುಲಪತಿ ಡಾ| ವಿ.ಡಿ. ಮೈತ್ರಿ, ಡೀನ್ ಡಾ| ಲಿಂಗರಾಜ ಶಾಸ್ತ್ರೀ, ಡಾ| ಲಕ್ಷ್ಮೀ ಮಾಕಾ, ಟಿ.ವಿ. ಶಿವಾನಂದನ್ ಹಾಗೂ ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿ ಭಾಗವಹಿಸಿದ್ದರು.