Advertisement

ಜಾತಿ ಗಣತಿಯ ಹೆಸರಿನಲ್ಲಿ ವೀರಶೈವರ ವಿಭಜನೆಗೆ ಯತ್ನ

12:42 PM May 22, 2017 | Team Udayavani |

ಬೆಂಗಳೂರು: ವೀರಶೈವ-ಲಿಂಗಾಯತ ಒಳಪಂಗಡಗಳನ್ನೇ ಆಧಾರವಾಗಿಟ್ಟುಕೊಂಡು ಸರ್ಕಾರ ಜಾತಿ ಗಣತಿ ಹೆಸರಿನಲ್ಲಿ ಸಮುದಾಯವನ್ನು ಒಡೆಯುವ ಹುನ್ನಾರ ನಡೆಸಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಆರೋಪಿಸಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ವಿಶ್ವ ವೀರಶೈವ ಲಿಂಗಾಯತ ಒಕ್ಕೂಟ ಭಾನುವಾರ ಹಮ್ಮಿಕೊಂಡಿದ್ದ “ಲಿಂಗಾಯತರ ಹಬ್ಬ’ಕ್ಕೆ ಚಾಲನೆ ನೀಡಿ ಮಾತನಾಡಿದರು.

Advertisement

“ಜಾತಿ ಗಣತಿ ನೆಪದಲ್ಲಿ ಸಮಾಜವನ್ನು ಒಡೆದು, ಜನಸಂಖ್ಯೆಯನ್ನು ಕಡಿಮೆಗೊಳಿಸುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಸರ್ಕಾರದ ಈ ಪ್ರಯತ್ನಕ್ಕೆ ಕಡಿವಾಣ ಹಾಕಬೇಕು. ಯಾವುದೇ ಕಾರಣಕ್ಕೂ ಸಮಾಜವನ್ನು ಒಡೆಯಲು ಅವಕಾಶ ನೀಡಬಾರದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜಾಗೃತರಾಗಬೇಕು,’ ಎಂದು ಹೇಳಿದರು. 

“ಇವನಾರವ, ಇವನಾರವ’ ಎಂದು ಕೇಳುವುದನ್ನು ಬಿಟ್ಟು “ಇವ ನಮ್ಮವ ಇವ ನಮ್ಮವ’ ಎಂಬ ಬಸವಣ್ಣನ ತತ್ವಗಳನ್ನು ಎಲ್ಲರೂ ಪಾಲಿಸಬೇಕಾಗಿದೆ. ಒಳಪಂಗಡಗಳನ್ನು ಮರೆತು ವೀರಶೈವ-ಲಿಂಗಾಯತರು ಎಂಬ ಭಾವನೆಯಿಂದ ಬಾಳಿ ಬದುಕಬೇಕಾಗಿದೆ ಎಂದ ಅವರು, ತುಮಕೂರಿನ ಸಿದ್ದಗಂಗಾ ಸ್ವಾಮೀಜಿ “ಭಾರತ ರತ್ನ’ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಈ ಗೌರವ ಅವರಿಗೆ ನೀಡುವಂತೆ ಬಿಜೆಪಿ ಸಂಸತ್‌ ಸದಸ್ಯರು ಶೀಘ್ರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಒತ್ತಾಯಿಸಲಿದ್ದಾರೆ ಎಂದು ತಿಳಿಸಿದರು. 

ಜಾತಿ ಗಣತಿ ಅವೈಜ್ಞಾನಿಕ: ವಿಶ್ವ ವೀರಶೈವ ಲಿಂಗಾಯತ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ  ಹಾಗೂ ನಿವೃತ್ತ ಐಪಿಎಸ್‌ ಅಧಿಕಾರಿ ಜ್ಯೋತಿಪ್ರಕಾಶ್‌ ಮಿರ್ಜಿ ಮಾತನಾಡಿ, ಜಾತಿ ಗಣತಿ ಮಾಡುವ ಅಗತ್ಯವೇ ಇರಲಿಲ್ಲ. ಆದರೂ ಸರ್ಕಾರ ಆ ಕೆಲಸವನ್ನು ಕೈಗೆತ್ತಿಕೊಂಡಿದೆ. ಜಾತಿ ಗಣತಿಯಲ್ಲಿ ಹಲವಾರು ನ್ಯೂನತೆಗಳಿವೆ. ಒಟ್ಟಾರೆ ಜಾತಿಗಣತಿಯೇ ಅವೈಜ್ಞಾನಿಕವಾಗಿದೆ ಎಂದು ದೂರಿದರು. 

ಕಾಂಗ್ರೆಸ್‌ ಮುಖಂಡ ಹಾಗೂ ವಿಧಾನ ಪರಿಷತ್‌ ಸದಸ್ಯ ಅಲ್ಲಂ ವೀರಭದ್ರಪ್ಪ ಮಾತನಾಡಿ, “ನಾವು ಸರ್ಕಾರವನ್ನು ನಿಂದಿಸಬಾರದು. ಅದರ ಬದಲು ಸರ್ಕಾರದ ಮನವೊಲಿಸಿ, ಸಮಾಜಕ್ಕೆ ಒಳಿತಾಗುವ ಕೆಲಸಗಳನ್ನು ಮಾಡಿಸಿಕೊಳ್ಳಬೇಕು. ಈ ಕೆಲಸ ನಾವು ಒಗ್ಗಟ್ಟಾದಾಗ ಮಾತ್ರ ಸಾಧ್ಯ. ಆದ್ದರಿಂದ ನಾವು ವಿವಿಧ ಪಂಗಡಗಳ ಹೆಸರಲ್ಲಿ ಹರಿದು ಹಂಚಿಹೋಗಬಾರದು. ಎಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಬೇಕು’ ಎಂದು ಕಿವಿಮಾತು ಹೇಳಿದರು. 

Advertisement

ಮಾಜಿ ಸಚಿವೆ ಲೀಲಾದೇವಿ ಆರ್‌. ಪ್ರಸಾದ್‌ ಮಾತನಾಡಿ, ನಮ್ಮದು ದಾಸೋಹ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿರುವ ಸಮುದಾಯ. ನಾಡಿನ ಎಲ್ಲ ವರ್ಗದ ಜನರಿಗೆ ಅನ್ನ ಮತ್ತು ಅಕ್ಷರ ನೀಡಿದ ಕೀರ್ತಿ ವೀರಶೈವ ಮಠಗಳಿಗೆ ಸಲ್ಲುತ್ತದೆ. ರಾಜಕೀಯ ಮತ್ತು ಸಾಮಾಜಿಕವಾಗಿ ವೀರಶೈವ-ಲಿಂಗಾಯತ ಸಮುದಾಯ ಇನ್ನಷ್ಟು ಪ್ರಗತಿ ಸಾಧಿಸಬೇಕಾಗಿದೆ. ಇದಕ್ಕಾಗಿ ಒಗ್ಗಟ್ಟು ಅಗತ್ಯ ಎಂದರು. 

ಇದೇ ವೇಳೆ ವಿವಿಧ ಮಠಾಧೀಶರು, ಶಿವಕುಮಾರ ಸ್ವಾಮಿಗಳು ನಡೆದಾಡುವ ದೇವರೆಂದೇ ಖ್ಯಾತರಾಗಿದ್ದಾರೆ. ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕು ಎಂದು ಆಗ್ರಹಿಸಿದರು. ಡಾ.ಶಿವಕುಮಾರ ಸ್ವಾಮೀಜಿಗೆ ವಿಶ್ವ ವೀರಶೈವ ಲಿಂಗಾಯತ ಒಕ್ಕೂಟದಿಂದ “ವಿಶ್ವ ರತ್ನ ಪ್ರಶಸ್ತಿ’ಯನ್ನು ಅವರ ಅನುಪಸ್ಥಿತಿಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪ್ರದಾನ ಮಾಡಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next