ಬಸವಕಲ್ಯಾಣ: ಹಿಂದುಳಿದ ತಾಲೂಕಿನ ವ್ಯಾಪ್ತಿಗೆ ಒಳಪಡುವ ತಾಂಡಾಗಳಿಗೆ ಮೂಲ ಸೌಕರ್ಯ ಒದಗಿಸಿ ಕೊಡುವುದು ಮತ್ತು ಅವುಗಳ ಸಮಗ್ರ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಹಾಗೂ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾರಾಯಣರಾವ್ ತಿಳಿಸಿದರು.
ತಾಲೂಕಿನ ದೇವಿನಗರ ಕಲಖೋರಾ ತಾಂಡಾದ ಮರಿಯಮ್ಮ ದೇವಿ (ಪಾಂಚಿಲಗಿ) 135 ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಲಖೋರಾ ತಾಂಡಾದಿಂದ ಹಿರನಾಗಾಂವ್‌ವರೆಗಿನ ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣಕ್ಕೆ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಮಾಜಿ ಸಚಿವ ರೇವನಾಯಕ ಬೆಳಮಗಿ ಮಾತನಾಡಿ, ಕಲಖೋರಾ ಜಾತ್ರಾ ಮಹೋತ್ಸವಕ್ಕೆ ಪಕ್ಕದ ಆಂಧ್ರ ಮತ್ತು ತೆಲಂಗಾಣ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆದ್ದರಿಂದ ಭಕ್ತಾದಿಗಳ ಹಿತದೃಷ್ಟಿಯಿಂದ ಕುಡಿಯಲು ನೀರಿನ ವ್ಯವಸ್ಥೆ ಮತ್ತು ಸಾಂಸ್ಕೃತಿಕ ಭವನ ನಿರ್ಮಿಸಿ ಕೊಡಬೇಕು ಎಂದು ಒತ್ತಾಯಿಸಿದರು.
ನಂತರ ಜಾತ್ರಾ ಮಹೋತ್ಸವ ಅಂಗವಾಗಿ ಗೊಬ್ಬುರವಾಡಿಯ ಬಳಿರಾಮ ಮಹಾರಾಜ, ಜೇಮಸಿಂಗ್ ಮಹಾರಾಜರು ಆಶೀರ್ವಚನ ನೀಡಿದರು. ನೀಲಕಂಠ ರಾಠೊಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಡಬಿ ಜಿಪಂ ಸದಸ್ಯ ರಾಜಶೇಖರ ಮೇತ್ರೆ, ತಾಪಂ ಅಧ್ಯಕ್ಷೆ ಯಶೋಧಾ ಎನ್. ರಾಠೊಡ, ಪ್ರಮುಖರಾದ ಬಾಬು ಹೊನ್ನಾನಾಯಕ, ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷ ಅಶೋಕ ರಾಠೊಡ, ಕಾರ್ಯದರ್ಶಿ ರಾಜಕುಮಾರ ಪವಾರ್, ಗ್ರಾಪಂ ಅಧ್ಯಕ್ಷ ವಿಜಯಕುಮಾರ, ಉಪಾಧ್ಯಕ್ಷೆ ಸುಗಲಾಬಾಯಿ ಈರಣ್ಣಾ, ಸಿಪಿಐ ಮಲ್ಲಿಕಾರ್ಜುನ, ತಾರಾಬಾಯಿ ಮುರಳೀಧರ್, ಮಹಾಂತೇಶ ಸಲಗರ, ವಸಂತ ರಾಠೊಡ ಸೇರಿದಂತೆ ಮತ್ತಿತರರು ಇದ್ದರು.